ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನ 12.22ಕ್ಕೆ ದಾಖಲಾದ ‘ಜೀರೊ ಶಾಡೊ’ ವಿಸ್ಮಯಕ್ಕೆ ಸಾಕ್ಷಿಯಾದ ಮೈಸೂರು

‘ಶೂನ್ಯ ನೆರಳು’
Last Updated 23 ಏಪ್ರಿಲ್ 2019, 5:59 IST
ಅಕ್ಷರ ಗಾತ್ರ

ಮೈಸೂರು: ಪ್ರಕೃತಿಯ ವಿಸ್ಮಯಗಳು ನಮ್ಮನ್ನು ಚಕಿತಗೊಳಿಸುತ್ತವೆ. ಈ ರೀತಿಯ ವಿಸ್ಮಯಕ್ಕೆ ಸಾಂಸ್ಕೃತಿಕ ರಾಜಧಾನಿ ಮೈಸೂರು ಸೋಮವಾರದಂದು ಸಾಕ್ಷಿಯಾಯಿತು. ‘ಶೂನ್ಯ ನೆರಳು’ ದಿನ ಅಚ್ಚರಿ ಮೂಡಿಸಿತು.

ಮಧ್ಯಾಹ್ನ 12.22ಕ್ಕೆ ಸರಿಯಾಗಿ ನಡುನೆತ್ತಿಗೆ ಸೂರ್ಯ ಬರುವ ಕಾರಣ ನೆರಳು ನೆಲದ ಮೇಲೆ ಬೀಳುವುದಿಲ್ಲ. ಈ ರೀತಿಯ ‍ಪ್ರಾಕೃತಿಕ ಘಟನೆ ವರ್ಷದಲ್ಲಿ ಎರಡು ದಿನಗಳು ಮಾತ್ರ ಬರುತ್ತವೆ. ಮೈಸೂರಿನಲ್ಲಿ ಏ. 22 ಹಾಗೂ ಆ. 20ರಂದು ಶೂನ್ಯ ನೆರಳು ದಿನ ಈ ವರ್ಷ ಬಂದಿವೆ. ಮಡಿಕೇರಿಯಲ್ಲೂ ಇದೇ ದಿನಗಳಂದು ಶೂನ್ಯ ದಿನ ದಾಖಲಾಗುತ್ತದೆ.

ಏಪ್ರಿಲ್‌ನಿಂದ ಜೂನ್‌ವರೆಗೆ ದಕ್ಷಿಣದಿಂದ ಉತ್ತರಕ್ಕೆ ಸೂರ್ಯ ಚಲಿಸುತ್ತದೆ. ಜೂನ್‌ 22ಕ್ಕೆ ಸೂರ್ಯ ಗರಿಷ್ಠ ಮಟ್ಟವನ್ನು ಮುಟ್ಟುತ್ತದೆ. ಆ ನಂತರ ದಕ್ಷಿಣ ದಿಕ್ಕಿಗೆ ಹಿಂತಿರುಗುತ್ತದೆ. ಇದೇ ದಕ್ಷಿಣಾಯನ. ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ಶೂನ್ಯ ದಿನಗಳು ದಾಖಲಾಗುತ್ತವೆ. ಏ. 23ರಂದು ಮಂಡ್ಯ, ಏ. 24ರಂದು ಬೆಂಗಳೂರು, ಕೋಲಾರ, ಹಾಸನ, ಏ. 25ರಂದು ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಉಡುಪಿ, ಏ. 27ರಂದು ಶಿವಮೊಗ್ಗ, ಏ. 28ರಂದು ಚಿತ್ರದುರ್ಗ, ಏ. 29ರಂದು ದಾವಣಗೆರೆ, ಏ.30ರಂದು ಕಾರವಾರ, ಹಾವೇರಿ, ಮೇ 1ರಂದು ಬಳ್ಳಾರಿ, ಮೇ 3ರಂದು ಬೆಳಗಾವಿ, ಮೇ 2ರಂದು ಧಾರವಾಡ, ಗದಗ, ಕೊಪ್ಪಳ, ಮೇ 5ರಂದು ಬಾಗಲಕೋಟೆ, ರಾಯಚೂರು, ಮೇ 7ರಂದು ವಿಜಯಪುರ, ಮೇ 9ರಂದು ಕಲಬುರ್ಗಿ, ಮೇ 11ರಂದು ಬೀದರ್ ಶೂನ್ಯ ದಿನಕ್ಕೆ ಸಾಕ್ಷಿಯಾಗಲಿವೆ.

ಅಂತೆಯೇ, ಆಗಸ್ಟ್‌ ತಿಂಗಳಿನಲ್ಲೂ ವಿವಿಧ ದಿನಗಳಲ್ಲಿ ಶೂನ್ಯ ದಿನಗಳು ಲಭಿಸಲಿವೆ. ಸಮಭಾಜಕವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದ ನಡುವಿನ ಪ್ರದೇಶಗಳಲ್ಲಿ ಮಾತ್ರ ಶೂನ್ಯ ದಿನ ದಾಖಲಾಗಲಿದೆ. ಬೆಂಗಳೂರಿನ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಏ. 25ರಂದು ಮಧ್ಯಾಹ್ನ 12.17ಕ್ಕೆ ಶೂ‌ನ್ಯ ನೆರಳು ದಿನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT