ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ, ವನ್ಯಜೀವಿ ಬಗ್ಗೆ ಮಕ್ಕಳ ಪ್ರೀತಿ

ಮೃಗಾಲಯ ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರಕ್ಕೆ ಚಾಲನೆ
Last Updated 21 ಏಪ್ರಿಲ್ 2019, 20:34 IST
ಅಕ್ಷರ ಗಾತ್ರ

ಮೈಸೂರು: ಅಲ್ಲಿ ಸೇರಿದ್ದ ಮಕ್ಕಳಲ್ಲಿ ಪರಿಸರ, ಪ್ರಾಣಿ–ಪಕ್ಷಿಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಆಸಕ್ತಿ ಮನೆಮಾಡಿತ್ತು. ರಜಾದಿನವನ್ನು ಸದುಪಯೋಗಪಡಿಸುವ ಉದ್ದೇಶದಿಂದ ಅವರು ಹಸಿರು ಪರಿಸರ ಮತ್ತು ಪ್ರಾಣಿಗಳ ನಡುವೆ ಸೇರಿಕೊಂಡಿದ್ದರು.

ಚಾಮರಾಜೇಂದ್ರ ಮೃಗಾಲಯದ ವತಿಯಿಂದ ಆಯೋಜಿಸಿರುವ ಬೇಸಿಗೆ ಶಿಬಿರಕ್ಕೆ ಭಾನುವಾರ ಚಾಲನೆ ಲಭಿಸಿತು. ಮೊದಲನೇ ತಂಡದ ಶಿಬಿರ ಏ.21 ರಿಂದ 30ರ ವರೆಗೆ ಹಾಗೂ ಎರಡನೇ ತಂಡದ ಶಿಬಿರ ಮೇ 5 ರಿಂದ 14ರ ವರೆಗೆ ನಡೆಯಲಿದೆ. ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 4.30ರ ವರೆಗೆ ಶಿಬಿರ ನಡೆಯಲಿದೆ.

ಪರಿಸರ ಸಂರಕ್ಷಣೆ, ಪ್ರಾಣಿ-ಪಕ್ಷಿ ಸಂಕುಲಗಳ ಬಗ್ಗೆ ತಿಳುವಳಿಕೆ, ಮೃಗಾಲಯದಲ್ಲಿರುವ ವನ್ಯಜೀವಿಗಳ ಪರಿಚಯ, ಪಕ್ಷಿ ವೀಕ್ಷಣೆ, ಕಾರಂಜಿ ಕೆರೆ ವೀಕ್ಷಣೆ, ಪ್ರಾದೇಶಿಕ ಪ್ರಾಕೃತಿಕ ಸಂಗ್ರಹಾಲಯಕ್ಕೆ ಭೇಟಿ ಕಾರ್ಯಕ್ರಮ, ಪ್ರಾಣಿಗಳ ವರ್ತನೆ ಹಾಗೂ ಗಿಡ-ಮರಗಳ ಗುರುತಿಸುವಿಕೆ ಬಗ್ಗೆ ಶಿಬಿರಾರ್ಥಿಗಳಿಗೆ ಹೇಳಿಕೊಡಲಾಗುತ್ತದೆ.

‘ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿರುವುದು ಸಂತಸ ಉಂಟುಮಾಡಿದೆ. ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ನನಗೆ ಚಿಕ್ಕಂದಿನಿಂದಲೇ ಆಸಕ್ತಿಯಿತ್ತು. ಇಲ್ಲಿ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸಲಿದೆ’ ಎಂದು ಶಿಬಿರದಲ್ಲಿ ಪಾಲ್ಗೊಂಡಿರುವ ಕಾಲೇಜು ವಿದ್ಯಾರ್ಥಿನಿ ಸುರಭಿ ಎ.ಸಿಂಘ್ವಿ ಅಭಿಪ್ರಾಯ ಹಂಚಿಕೊಂಡರು.

‘ಮುಂದೆ ಪರಿಸರವಾದಿ ಯಾಗಬೇಕು ಎಂಬುದು ನನ್ನ ಆಸೆ. ಕಾಡು ಹಾಗೂ ವನ್ಯಜೀವಿಗಳ ರಕ್ಷಣೆಯ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು ನನ್ನ ಉದ್ದೇಶ’ ಎಂದರು.

ಪರಿಸರ ಮತ್ತು ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಲು ಮಕ್ಕಳಿಗೆ ಲಭಿಸಿದ ಒಳ್ಳೆಯ ಅವಕಾಶ ಇದು. ಈಗಿನ ಮಕ್ಕಳು ಮೊಬೈಲ್‌ ಗೇಮ್‌ ಮತ್ತು ಟಿ.ವಿ ನೋಡುವುದರಲ್ಲೇ ರಜಾದಿನಗಳನ್ನು ಕಳೆಯುವರು. ಇಂದಿನ ತಲೆಮಾರಿನ ಮಕ್ಕಳಿಗೆ ಪರಿಸರದ ಮಹತ್ವದ ಬಗ್ಗೆ ತಿಳಿಸಿಕೊಡಲು ಇಂತಹ ಶಿಬಿರಗಳು ಅಗತ್ಯ ಎಂದು ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಯ ಪೋಷಕರೊಬ್ಬರು ತಿಳಿಸಿದರು.

ಪ್ರಾದೇಶಿಕ ಪ್ರಾಕೃತಿಕ ವಸ್ತುಸಂಗ್ರಹಾಲಯದ ಮುಖ್ಯಸ್ಥ ಡಾ.ಜಿ.ಎನ್.ಇಂದ್ರೇಶ್ ಮಾತನಾಡಿ, ಈ ಶಿಬಿರ ಪ್ರಾಣಿವಿಜ್ಞಾನ ಮತ್ತು ಜೀವವಿಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಶಿಬಿರಾರ್ಥಿಗಳು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಒಳಗೊಂಡಿರುವ ಪರಿಸರದಿಂದ ಕಲಿಯಲು ಸಾಕಷ್ಟಿದೆ. ಪ್ರಾಣಿಗಳ ವರ್ತನೆಯೂ ವಿಜ್ಞಾನ ಆಗಿದೆ. ಪ್ರಾಣಿಗಳ ವರ್ತನೆಯನ್ನು ಆಧರಿಸಿ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ನಿವೃತ್ತ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಎಸ್.ಯಾಲಕ್ಕಿ, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT