ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಶಾಂತಿಗೆ ಕ್ರೈಸ್ತರ ಸಾಮೂಹಿಕ ಪ್ರಾರ್ಥನೆ

ಬಿಷಪ್‌ ಕೆ.ಎ.ವಿಲಿಯಂ ನೇತೃತ್ವದಲ್ಲಿ ಶ್ರದ್ಧಾಂಜಲಿ
Last Updated 24 ಏಪ್ರಿಲ್ 2019, 13:41 IST
ಅಕ್ಷರ ಗಾತ್ರ

ಮೈಸೂರು: ಏಸುಸ್ವಾಮಿಯು ದ್ವೇಷಿಸುವವರನ್ನೂ ಪ್ರೀತಿಸು ಹಾಗೂ ಕ್ಷಮಿಸು ಎಂದು ಹೇಳಿದ್ದಾರೆ. ಶ್ರೀಲಂಕಾದಲ್ಲಿ ಬಾಂಬ್ ಸ್ಫೋಟ ನಡೆಸಿದವರ ಮನಸ್ಸುಗಳು ಈ ಸಂದೇಶ ತಿಳಿದ ಬಳಿಕವಾದರೂ ಪರಿವರ್ತನೆಯಾಗಲಿ ಎಂದು ಬಿಷಪ್ ರೆವರೆಂಡ್ ಕೆ.ಎ.ವಿಲಿಯಂ ಹಾರೈಸಿದರು.

ಇಲ್ಲಿನ ಸೇಂಟ್ ಫಿಲೊಮಿನಾ ಚರ್ಚ್‌ನಲ್ಲಿ ಬುಧವಾರ ಕ್ರೈಸ್ತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಈಸ್ಟರ್‌’ ಹಬ್ಬದಂದು ನಿಜಕ್ಕೂ ಶ್ರೀಲಂಕಾದಲ್ಲಿ ನಡೆದದ್ದು ಘನಘೋರ ಕೃತ್ಯ. ಇಂತಹ ದುರಂತ ನಡೆಯಬಾರದಿತ್ತು. ಪ್ರಾರ್ಥನೆಯಲ್ಲಿ ತೊಡಗಿದ್ದವರ ಮೇಲೆ ಬಾಂಬ್ ಹಾಕಲಾಯಿತು. ದುರಂತದಲ್ಲಿ ಮೃತಪಟ್ಟವರ ಆತ್ಮಗಳಿಗೆ ಶಾಂತಿ ದೊರಕಲಿ. ಮೃತಪಟ್ಟವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಅವರು ಪ್ರಾರ್ಥಿಸಿದರು.

ಇಡೀ ವಿಶ್ವವೇ ಒಂದು ಕುಟುಂಬದಂತೆ. ಇಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕೇ ಹೊರತು ದ್ವೇಷ, ಅಸೂಯೆಗಳಲ್ಲ. ಇಡೀ ಮನುಕುಲವೇ ಒಂದು ಎನ್ನುತ್ತಾ ಎಲ್ಲರೂ ಶಾಂತಿ ಪಥದಲ್ಲಿ ನಡೆಯುವಂತಾಗಲಿ ಎಂದು ಆಶಿಸಿದರು.

‘ದೇವರು ನಮಗೆ ಪ್ರೀತಿ ತುಂಬಿದ ಮಾಂಸದ ಹೃದಯವನ್ನು ಕೊಟ್ಟಿದ್ದಾರೆ. ಆದರೆ, ಮನುಷ್ಯರಾದ ನಾವು ದ್ವೇಷ ಮತ್ತು ಅಸೂಯೆಗಳನ್ನು ಅದರಲ್ಲಿ ತುಂಬಿಕೊಂಡು ಕಲ್ಲು ಹೃದಯವನ್ನಾಗಿ ಮಾಡಿಕೊಂಡಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

ಜಗತ್ತಿನಲ್ಲಿ ಶಾಂತಿ ನೆಲೆಸಬೇಕು. ಎಲ್ಲ ಧರ್ಮದವರೂ ನಮ್ಮವರೆಂಬ ಸ್ನೇಹಭಾವ ಮೂಡಬೇಕು. ಹಿಂಸೆ, ಕ್ರೌರ್ಯದ ಅಟ್ಟಹಾಸಗಳು ನಿಲ್ಲಬೇಕು ಎಂದು ದೇವರಲ್ಲಿ ಪ್ರಾರ್ಥಿಸಲು ಅವರು ಕರೆ ನೀಡಿದರು.

ಸಿಆರ್‌ಐ ಅಧ್ಯಕ್ಷ ರೆವರೆಂಡ್ ಫಾದರ್ ಡೊಮಿನಿಕ್ ವಾಜ್ಹ್, ಯುಸಿಎಫ್‌ ಮೈಸೂರು ವಲಯದ ಉಪಾಧ್ಯಕ್ಷ ರೆವರೆಂಡ್ ದೇವಕುಮಾರ್, ರೆವರೆಂಡ್ ಸಿ.ರಾಯಪ್ಪ ಸೇರಿದಂತೆ ನಗರದ ಎಲ್ಲ ಪ್ರಮುಖ ಕ್ರೈಸ್ತ ಪಂಗಡಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು. ಎಲ್ಲರೂ ಮೃತರ ಗೌರವಾರ್ಥ ಮೌನ ಆಚರಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT