ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಳೆ ಕಂಡು ತಬ್ಬಿಬ್ಬಾದ ಮಂಗಳೂರು

ಅಕ್ಷರ ಗಾತ್ರ

ಹಳ ದಿನಗಳಿಂದ ಸೂಚನೆ ನೀಡುತ್ತಲೇ ಇದ್ದ  ಮಳೆ ಮಂಗಳವಾರ ಬೆಳಿಗ್ಗೆ ಸೀದಾ ಮಂಗಳೂರು ಮಹಾನಗರಕ್ಕೆ ನುಗ್ಗಿಬಿಟ್ಟಿದೆ.  ಎಂದಿನಂತೆ ಒಂದು ಮಳೆ ಬಂದು ಆಕಾಶ ತಿಳಿಯಾಗುತ್ತದೆ ಎಂಬ ಉಡಾಫೆಯಿಂದ ಕೆಲಸಕ್ಕೆ ಹೊರಟಿದ್ದ ನಾಗರಿಕರು ಮಧ್ಯಾಹ್ನ ಹೊತ್ತಿಗೆ ಸುರಿದ ಮಹಾಮಳೆಯನ್ನು ಕಂಡು ತಬ್ಬಿಬ್ಬಾದರು.

10 ಗಂಟೆ ಸುಮಾರಿಗೆ ಸುರಿಯಲಾರಂಭಿಸಿದ ಮಳೆ ಮಧ್ಯಾಹ್ನ ಕಳೆದರೂ ನಿಲ್ಲಲಿಲ್ಲ. ಧಾರಾಕಾರ ಮಳೆಯ ಪ್ರಮಾಣ ಏರುತ್ತಿದ್ದಂತೆಯೇ ನಗರದ ಕಾಂಕ್ರೀಟ್‌ ರಸ್ತೆಗಳಲ್ಲಿ ಕೆಂಪು ನೀರು ಹರಿಯಲಾರಂಭಿಸಿತು. ಸಂಚಾರ ಅಸ್ತವ್ಯವಸ್ತವಾಗುತ್ತಿದ್ದಂತೆಯೇ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿದವು. ನಗರದ ಪ್ರಧಾನ ಚರಂಡಿಗಳು ತುಂಬಿ ನೀರೆಲ್ಲವೂ ರಸ್ತೆಯಲ್ಲಿಯೇ ಹರಿಯಲಾರಂಭಿಸಿತು. ಕೊಟ್ಟಾರ ಮತ್ತು ಪಂಪ್‌ವೆಲ್ ರಸ್ತೆಯ ಮೇಲೆ ನೀರು ಹರಿಯಲಾ
ರಂಭಿಸಿದ್ದರಿಂದ ಬಸ್ಸುಗಳು ಸುತ್ತುಬಳಸಿ ಸಂಚರಿಸಲಾರಂಭಿಸಿದವು.

ಇಡೀ ನಗರವೇ ಮಳೆಯಲ್ಲಿ ನೆನೆಯುತ್ತಿರುವಂತೆಯೇ ಸಂಜೆ ಶಾಲೆಯಿಂದ ಮಕ್ಕಳು ಹೊರಟರು.ಆಟೋ ರಿಕ್ಷಾ, ಆಮ್ನಿ ವ್ಯಾನುಗಳು ಮಕ್ಕಳನ್ನು ತುಂಬಿಕೊಂಡು ತಗ್ಗು ಪ್ರದೇಶದಲ್ಲಿ ಸಂಚರಿಸಲಾರದೇ ಸುತ್ತಬಳಸಿ ಪ್ರಯಾಣಿಸಿದವು. ಪೋಷಕರು ಚಾಲಕರಿಗೆ ಫೋನ್‌ ಮಾಡಿ ಮಾಡಿ ಮತ್ತಷ್ಟು ಆತಂಕಗೊಂಡರು.  ನಗರವಿಡೀ  ಆಟೋ ರಿಕ್ಷಾಗ
ಳಿಗೆ ಇನ್ನಿಲ್ಲದ ಬೇಡಿಕೆ ಸೃಷ್ಟಿಯಾಗಿ ಯಾವುದೆ ಸ್ಟಾಂಡ್‌ನಲ್ಲಿ ಆಟೋಗಳು ಕಾಣಿಸಲಿಲ್ಲ.

ಅಂಗಡಿ ಮಳಿಗೆಗಳು, ತಳ ಅಂತಸ್ತಿನ ಕಚೇರಿಗಳಿಗೆ ಮಳೆನೀರು ನುಗ್ಗಿ ಪರಿತಪಿಸುವಂತಾಯಿತು. ಕುಲಶೇಖರದ ಎಲೆಕ್ಟ್ರಾನಿಕ್ಸ್‌ ವಿತರಣಾ ಕೇಂದ್ರಗಳಲ್ಲಿ  ರಿಸೆಪ್ಷನಿಸ್ಟ್‌ಗಳು ಕಂಪ್ಯೂಟರ್ ಸಿಪಿಯುಗಳನ್ನು ಮೇಲೆತ್ತಿ ಇಡಬೇಕಾಯಿತು. ಸ್ಟೇಟ್‌ ಬ್ಯಾಂಕ್‌ನಲ್ಲಿ ಸದಾ ಬ್ಯುಸಿ ಇರುತ್ತಿದ್ದ ಜೆರಾಕ್ಸ್‌ ಅಂಗಡಿಗಳು ಸಾಮಾನು ಸರಂಜಾಮುಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ಪರದಾಡಿದರು. ಪಡೀಲ್‌ನಲ್ಲಿ ರೈಲ್ವೆ ಸೇತುವೆ ಕೆಳಗಿನ ರಸ್ತೆ ನದಿಯಂತೆ ಭಾಸವಾಯಿತು.

ಸದಾ ಕಾರ್‌ ಪಾರ್ಕಿಂಗ್‌ಗೆ ತಂಪು ನೆರಳು ಹುಡುಕುತ್ತಿದ್ದ ಕಾರು ಓನರ್‌ಗಳು ಮಂಗಳವಾರ ಮರಗಳಡಿಯಿಂದ ಕಾರು ತೆಗೆದು ದೂರ ನಿಲ್ಲಿಸಿದರು. ರಸ್ತೆ ತುಂಬಾ ನೀರು ಹರಿಯುತ್ತಿರುವ ದೃಶ್ಯ ನೋಡಿದ ಹಲವರು ಕಾರಿನ ಬದಲಿಗೆ ಬೈಕ್‌ ಆಯ್ಕೆ ಮಾಡಿಕೊಂಡರು. ಕಚೇರಿಗಳನ್ನು ತಲುಪಿದರೆ ಕರೆಂಟ್‌ ಇಲ್ಲದೇ ಕತ್ತಲೇ ಕಾಣಿಸಿತು.

ಜನರೇಟರ್‌ ಹಾಕೋಣ ಎಂದರೆ ತಳ ಅಂತಸ್ತಿನಲ್ಲಿ ಇರಿಸಿದ ಜನರೇಟರ್‌ಗೆ ನೀರು ನುಗ್ಗಿರುವುದು ಗೊತ್ತಾಗಿ ಕೊಡಿಯಾಲ್‌ಬೈಲ್‌ ಕಾಯರ್‌ ಮಂಜ್‌ ಸಂಕಿರ್ಣದ ಕಚೇರಿ ಸಿಬ್ಬಂದಿ ಪರಿತಪಿಸಿದರು.  ಯಾವ ಪ್ರದೇಶದಲ್ಲೆಲ್ಲ ನೀರು ತುಂಬಿದೆ ಎಂಬ ವಿಡಿಯೊಗಳು ವಾಟ್ಸ್‌ಆಪ್‌ ಮೂಲಕ ಹರಿದಾಡಿದವು. ಪಂಪ್‌ವೆಲ್‌ ವೃತ್ತದಲ್ಲಿ ನೀರು ತುಂಬಿದ ದೃಶ್ಯದ ಸಾವಿರಾರು ವಿಡಿಯೊಗಳು ಹೆಚ್ಚಿನವರ ಮೊಬೈಲ್‌ನಲ್ಲಿ ಸದ್ದು ಮಾಡಿದವು.  ರಸ್ತೆಯ ಕೆಂಪು ನೀರಿನಲ್ಲಿ ಮುಳುಗುತ್ತಿರುವ ಕಾರು, ರಿಕ್ಷಾ ದೂಡುತ್ತಿರುವ ಚಾಲಕ, ಅಳಕೆಯಲ್ಲಿ ಬೋಟ್‌ನಲ್ಲೇ ಶಾಲೆಯಿಂದ ಹೊರ ಬಂದು ರಸ್ತೆ ತಲುಪಿದ ಮಕ್ಕಳ ವಿಡಿಯೊಗಳು ಕಾಣಿಸಿಕೊಂಡವು. ತಮ್ಮ ತಮ್ಮ ಮನೆಯ, ಕಚೇರಿಯ ಆಸುಪಾಸಿನ ವಿಡಿಯೊಗಳನ್ನು ಬಂಧುಗಳು, ಸ್ನೇಹಿತರೊಡನೆ ಹಂಚಿಕೊಂಡು ಸಂಭ್ರಮ ಪಟ್ಟರು.

ಯಾವೆಲ್ಲಾ ರಸ್ತೆಗಳು ಜಲಾವೃತವಾಗಿವೆ, ಸಂಚಾರ ಎಲ್ಲಿ ತೊಡಕಾಗಿದೆ ಎಂಬ ಸಲಹೆಗಳನ್ನು ನೀಡುವ ಮೆಸೇಜುಗಳನ್ನು ವಾಟ್ಸ್‌ಆ್ಯಪ್‌ , ಫೇಸ್‌ಬುಕ್‌ಗಳಲ್ಲಿ ಹಂಚಿಕೊಂಡರು. ತೀವ್ರ ಮುನ್ನೆಚ್ಚರಿಕೆ ಕ್ರಮದ ಸಲಹೆಗಳಿಂದಾಗಿ ಹೆಚ್ಚಿನವರು ಪ್ರಯಾಣವನ್ನೇ ರದ್ದುಪಡಿಸಿದರು.

ಹೋಟೆಲ್‌ಗಳಲ್ಲಿ ಬಜ್ಜಿ ಪಕೋಡಾಗಳು ಬೇಗನೇ ಖಾಲಿ ಆದವು. ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಜನ ದಟ್ಟಣೆ ಹೆಚ್ಚಾಗಿ ಕಂಡು ಬಂತು.  ಮಳೆಯ ಭರಾಟೆಗೆ ಸಾವು, ಗಾಯ, ನೋವಿನ ಸುದ್ದಿ ಕೇಳಿ ಬೇಸರ ಹೆಚ್ಚಿತು. ಆದರೂ ಸುರಿವ ಮಳೆಯಡಿ ಒಂದು ಸಲ್ಫು ಇಷ್ಟವಾಯಿತು.

ದಿನವಿಡೀ ಮಳೆ ಬಂದದ್ದರಿಂದ ಶಾಪಿಂಗ್‌ ಎಲ್ಲಿಯೂ ಹೋಗಲಿಲ್ಲ. ಯೂಟ್ಯೂಬ್‌ನಲ್ಲಿ ಕ್ವಾಲಿಫ್ಲವರ್‌ ರೆಸಿಪಿ ನೋಡಿ ಅಡುಗೆ ಮಾಡಿದ್ದೆ. ಸಂಜೆಯಾದೂ ಮಳೆ ಬಿಡದೇ ಇದ್ದಾಗ ಆತಂಕ ಆಯಿತು. ನಾವೂ ಶಾಲೆಗೆ ಹೋಗುವಾಗ ಹೀಗೇ ಮಳೆ ಬರ್ತಿತ್ತು. ಆದರೆ ರಸ್ತೆಯಲ್ಲಿಯೇ ಹೀಗೆ ನೀರು ಹರಿಯುತ್ತಿರಲಿಲ್ಲ. ಈಗ ಟೀವಿಯಲ್ಲಿ ಮಳೆ ಸುದ್ದಿ ನೋಡಿದರೆ ಬೇಸರವಾಗುತ್ತದೆ
ವಿಜೇತಾ ಕರ್ಕೇರ ಪಾಂಡೇಶ್ವರ

ಮಳೆ ಜೋರು ಬರ್ತಾ ಇದ್ದುದರಿಂದ ಹೆಚ್ಚು ಕೆಲಸ ಆಗಲಿಲ್ಲ. ನಮ್ಮದೇನಿದ್ದರೂ ಫೀಲ್ಡ್‌ನಲ್ಲಿಯೇ ಸುತ್ತಾಡುವ ಕೆಲಸ. ಆದರೆ ಈ ಬಾರಿ ಮಳೆ ಬಂತಲ್ಲಾ ಅಂತ ಸಂತೋಷವಾಗಿದೆ. ಕಳೆದ ವರ್ಷ ಮಳೆ ಬಾರದೇ ಮಂಗಳೂರಿನ ಜನ ಅನುಭವಿಸಿದ ಪಾಡು ಸರಿಯಾಗಿ ನೆನಪಿದೆ. ಸರಿಯಾದ ಚರಂಡಿ ವ್ಯವಸ್ಥೆ ಇದ್ದರೆ, ನೀರು ಹೋಗಲು ದಾರಿ ಮಾಡಿಕೊಟ್ಟರೆ ಜೋರು ಮಳೆಯಿಂದ  ಸಮಸ್ಯೆ ಏನೂ ಇಲ್ಲ. ನಂಗೆ ಮಳೆ ಇಷ್ಟ
ಮನೋಹರ್‌ ಕೊಟ್ಟಾರಿ ತುಂಬೆ

ಹಿಂದೆಲ್ಲ ಇದಕ್ಕಿಂತಲೂ ಜಾಸ್ತಿ ಮಳೆ ಬರ್ತಾ ಇತ್ತು. ಒಳ್ಳೆಯ ಮಳೆ ಬರುವುದು ತಪ್ಪು ಅನ್ನುವ ರೀತಿಯಲ್ಲಿ ಮಾತನಾಡುವುದು ಸರಿಯಲ್ಲ. ಚರಂಡಿ ಮತ್ತು ತೋಡುಗಳಿಗೆ ಸಾಕಷ್ಟು ಅವಕಾಶ ನೀಡದೇ ಇರುವುದರಿಂದ ನೀರು ರಸ್ತೆಗೇ ನುಗ್ಗುತ್ತಿದೆ. ಆದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ ಅಷ್ಟೆ
ಚಂದ್ರಶೇಖರ ಶೆಟ್ಟಿ ಯೆಯ್ಯಾಡಿ

ಮಳೆ ಬರುವ ಕಾಲಕ್ಕಾ ಒಳಗ್ಯಾಕ ಕುಂತ್ಯವ್ವಾ...

ಮಂಗಳೂರಿನ ಕಾಂಕ್ರೀಟ್‌ ರಸ್ತೆಗಳು ಬೇಸಿಗೆಯಲ್ಲಿ ರೋಡು, ಮಳೆಗಾಲದಲ್ಲಿ ತೋಡು ಎಂಬ ಮಾತುಗಳನ್ನು ಜನರು ಆಡಿಕೊಂಡರು.  ಮಂಗಳವಾರ ಮಧ್ಯಾಹ್ನ ಕೆಲವು ಬಸ್‌ಗಳ ಸಂಚಾರವನ್ನು ವಿಳಂಬಗೊಳಿಸಿದ ಸಂದರ್ಭದಲ್ಲಿ ನಾಗರಿಕರು ಸಂಚಾರ ವ್ಯವಸ್ಥೆಗೆ, ರಸ್ತೆಗಳ ಕುರಿತು ಸರಿಯಾದ ಯೋಜನೆ ಇಲ್ಲದ ನಗರಾಡಳಿತಕ್ಕೆ ಹಿಡಿಶಾಪ ಹಾಕಿದರು.

ಕರಾವಳಿಗೆ ಮಳೆ ಹೊಸತಲ್ಲ. ಮೂರು ದಿನಗಟ್ಟಲೆ ಹನಿಕಡಿಯದ ಸುರಿದ ಮಳೆಯನ್ನು ಕಂಡ ಹಿರಿಯರು ಇದ್ದಾರೆ. ಆದರೆ ಈಗ ಒಂದೇ ದಿನ ಬಂದ ಮಳೆಯನ್ನು ಬೈದುಕೊಳ್ಳುವ ನಗರವನ್ನು ಕಂಡರೆ ಬೇಸರವಾಗುತ್ತದೆ ಎನ್ನುತ್ತಾರೆ ಪಾಂಡೇಶ್ವರದ ಇಂಟಿರೀಯರ್‌ ಡಿಸೈನರ್‌  ವಿಕ್ರಮ್‌.

ಒಳ್ಳೆಯ ರಸ್ತೆಗೆ ಆದ್ಯತೆ ನೀಡುವ ನಗರಾಡಳಿತ ಚರಂಡಿ ನಿರ್ಮಾಣಕ್ಕೆ ಆದ್ಯತೆ ನೀಡುವುದಿಲ್ಲ. ಅಲ್ಲದೆ ಮಳೆಗೆ ಮುನ್ನ ನಗರದ ಚರಂಡಿಗಳನ್ನು ಸ್ವಚ್ಛಮಾಡುವ ಬಗ್ಗೆಯೂ ಗಮನ ಹರಿಸುವುದಿಲ್ಲ.

ಜನರು ಕೂಡ ತಮ್ಮ ವ್ಯಾಪ್ತಿಯಲ್ಲಿರುವ ಚರಂಡಿಗಳನ್ನು ಸ್ವಚ್ಛ ಮಾಡುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು. ಇದು ಕೇವಲ ಆಡಳಿತ ನಡೆಸುವವರ ಹೊಣೆಗಾರಿಕೆ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

ಇವ್ಯಾವುದರ ಪರಿವೆಯೇ ಇಲ್ಲದಂತೆ ಮಳೆಯ ಖುಷಿಯನ್ನು ಅನುಭವಿಸಿದವರು ಹಲವರು. ಮಂಗಳೂರಿನಿಂದ ಬಿಸಿರೋಡ್‌ ವರೆಗಿನ ರಸ್ತೆಯುದ್ದಕ್ಕೂ ಡ್ರೈವ್‌ ಹೋಗುತ್ತ, ಮಳೆಯ ಫೋಟೋಗ್ರಫಿ ಮಾಡುತ್ತ, ತೋಯುತ್ತಿರುವ ನಗರವನ್ನು ಎತ್ತರದ ಕಟ್ಟಡದ ಮೇಲೆ ನಿಂತು ವಿಡಿಯೊದಲ್ಲಿ ಸೆರೆ ಹಿಡಿಯುತ್ತ, ಬಾಲ್ಕನಿಯಲ್ಲಿ ಬೆಚ್ಚಗೆ ಕಾಫಿ ಕುಡಿಯುತ್ತ, ಆಗುಂಬೆ ವರೆಗೆ ಒಂದು ಬೈಕ್‌ ರೈಡ್‌ ಹೋಗುತ್ತ ಮಳೆಯನ್ನು ಆಸ್ವಾದಿಸಿದವರೂ ತಮ್ಮ ಖುಷಿಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT