ಮೈಸೂರು: ನಗರದ ಚಾಮುಂಡಿಪುರಂನ ಬಾಡಿಗೆ ಮನೆಯಲ್ಲಿ ತರಕಾರಿ ದಲ್ಲಾಳಿ ಮಹದೇವಸ್ವಾಮಿ (48), ಅವರ ಪತ್ನಿ ಅನಿತಾ (38), ಪುತ್ರಿಯರಾದ ಚಂದ್ರಕಲಾ (17) ಹಾಗೂ ಧನಲಕ್ಷ್ಮೀ (15) ಅವರ ಶವಗಳು ಭಾನುವಾರ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿವೆ.
ಚಾಮುಂಡಿಪುರಂನ 1ನೇ ಮುಖ್ಯರಸ್ತೆ, 3ನೇ ತಿರುವಿನ ಮೂಲೆಮನೆಯಿಂದ ದುರ್ವಾಸನೆ ಬರುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಒಬ್ಬ ಪುತ್ರಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ, ಉಳಿದ ಮೂವರ ಮೃತದೇಹಗಳು ಹಾಲ್‌ನಲ್ಲಿ ಕುಳಿತ ಸ್ಥಿತಿಯಲ್ಲಿದ್ದು ಶಂಕೆ ಮೂಡಿಸಿದೆ.
ತಾಲ್ಲೂಕಿನ ಜಯಪುರ ಹೋಬಳಿಯ ಬರಡನಪುರದ ಮಹದೇವಸ್ವಾಮಿ, 2 ತಿಂಗಳ ಹಿಂದೆ ನಾರಾಯಣ ಎಂಬವವರ ಮನೆಯನ್ನು ಬಾಡಿಗೆಗೆ ಪಡೆದು ವಾಸವಿದ್ದರು. ‘ಇಷ್ಟಪಟ್ಟು ಮದುವೆಯಾಗಿದ್ದ. ನಮ್ಮೊಂದಿಗೆ ಹೆಚ್ಚು ಸಂಪರ್ಕವಿರಲಿಲ್ಲ’ ಎಂದು ಮಹದೇವಸ್ವಾಮಿ ಚಿಕ್ಕಮ್ಮ ವಿಶಾಲಕ್ಷಿ ತಿಳಿಸಿದರು. ‘ಸಾವಿಗೆ ಕಾರಣವೇನು ಎಂದು ತಿಳಿದಿಲ್ಲ. ಅಣ್ಣನ ಹಣಕಾಸಿನ ಪರಿಸ್ಥಿತಿ ಬಗ್ಗೆ ಗೊತ್ತಿಲ್ಲ’ ಎಂದು ಸಹೋದರ ಅಶೋಕ್ ಹೇಳಿದರು.
‘ಸೋಮಪ್ಪ ಎಂಬುವವರ ಮೊದಲನೇ ಹೆಂಡತಿಯ ಮಗ ಮಹದೇವಸ್ವಾಮಿ. ಸೋಮಪ್ಪ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು’ ಎಂದು ಸಂಬಂಧಿಕರು ತಿಳಿಸಿದರು.
ಹುಣಸೂರಿನಲ್ಲಿರುವ ಅನಿತಾ ಅವರ ಪೋಷಕರು ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಎಫ್‌ಎಸ್‌ಎಲ್ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿದ್ದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ‘ಸಾವು ಸಂಭವಿಸಿ 2–3 ದಿನಗಳಾಗಿವೆ. ತನಿಖೆಯ ನಂತರ ಕಾರಣಗಳು ತಿಳಿಯಲಿವೆ’ ಎಂದರು.
Highlights - null
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.