ಮೈಸೂರು: ‘ಕೆ.ಆರ್. ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಕೊಠಡಿ ಸಮರ್ಪಕವಾಗಿಲ್ಲ’, ‘ಆಸ್ಪತ್ರೆ ಸುತ್ತ ಬೆಳಕಿನ ವ್ಯವಸ್ಥೆಯಿಲ್ಲ’, ‘ಸಹಾಯಕ ವೈದ್ಯರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಬೇಕು’, ‘ಶೌಚಾಲಯಗಳು ದುರ್ನಾತ ಬೀರುತ್ತಿದ್ದು, ಸ್ವಚ್ಛವಾಗಿಲ್ಲ...’
-ಇಲ್ಲಿನ ಕೆ.ಆರ್ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳ ಕುರಿತು ಕಿರಿಯ ನಿವಾಸಿ ವೈದ್ಯರ ದೂರುಗಳಿವು.
ಈಚೆಗೆ ಗಾಲಿಕುರ್ಚಿ ಹಾಗೂ ಲಿಫ್ಟ್ ಸರಿಯಿಲ್ಲದೆ ವೃದ್ಧೆಯೊಬ್ಬರನ್ನು ಪ್ಲಾಸ್ಟಿಕ್ ಕುರ್ಚಿಯಲ್ಲಿ ಕರೆದೊಯ್ದು ಸುದ್ದಿಯಲ್ಲಿದ್ದ ಆಸ್ಪತ್ರೆಯಲ್ಲಿ ಇದೀಗ ಚಿಕಿತ್ಸೆ ನೀಡುವ ವೈದ್ಯರೇ ತಮ್ಮ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲತೊಡಗಿದ್ದಾರೆ.
‘ತುರ್ತು ಸಮಯದಲ್ಲಿ ನಿರಂತರವಾಗಿ 36 ಗಂಟೆ ಕೆಲಸ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಕರ್ತವ್ಯನಿರತ ವೈದ್ಯರ ಕೊಠಡಿ ಸರಿ ಇಲ್ಲದೆ ಕಾರಿನಲ್ಲಿ ವಿಶ್ರಾಂತಿ ಪಡೆಯಬೇಕಾಗಿದೆ. ಒಂದು ಕೊಠಡಿಗೆ ಬೀಗ ಜಡಿಯಲಾಗಿದೆ. ಕೆಲವು ಕೊಠಡಿಗಳಲ್ಲಿ ಇಲಿಗಳು ತುಂಬಿಕೊಂಡಿವೆ’ ಎಂದು ಕೆಲವರು ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ವೈದ್ಯರು ಹಾಗೂ ಸಾರ್ವಜನಿಕರ ಶೌಚಾಲಯಗಳು ಬಳಸುವ ಸ್ಥಿತಿಯಲ್ಲಿ ಇಲ್ಲ. ಗೋಡೆಗಳಲ್ಲಿ ಗಿಡಗಳು ಬೆಳೆದಿವೆ. ಕೆಲವೊಮ್ಮೆ ಡಿ ದರ್ಜೆ ನೌಕರರಿಗೆ ನಾವೇ ಹಣ ನೀಡಿ ಶುಚಿಗೊಳಿಸಲು ತಿಳಿಸುತ್ತೇವೆ’ ಎನ್ನುತ್ತಾರೆ ಕಿರಿಯ ವೈದ್ಯರು.
ಆಸ್ಪತ್ರೆ ಆವರಣದ ನಿರ್ಜನ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ ಇಲ್ಲ. ಇದರಿಂದ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ಭಯದಿಂದಲೇ ಓಡಾಡಬೇಕು. ವಾಹನ ಪಾರ್ಕಿಂಗ್ ಸ್ಥಳ ಹಾಗೂ ಜನರ ಓಡಾಟ ಕಡಿಮೆ ಇರುವೆಡೆ ಕುಡುಕರು ಠಿಕಾಣಿ ಹೂಡಿದ್ದು, ಅವರನ್ನು ಹೊರದಬ್ಬಲು ಕಾವಲು ಸಿಬ್ಬಂದಿಯೂ ಇಲ್ಲ.
‘ಬ್ಲಡ್ ಬ್ಯಾಂಕ್ ಹಾಗೂ ವಾರ್ಡ್‌ಗಳಿಗೆ ತೆರಳುವ ಮಾರ್ಗದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲ. ರಕ್ತ ತರಲು ಸಹಾಯಕ ವೈದ್ಯರನ್ನು ತಡರಾತ್ರಿ ಬ್ಲಡ್ ಬ್ಯಾಂಕ್‌ಗೆ ಕಳಿಸುತ್ತಾರೆ. ಆ ರಸ್ತೆಯಲ್ಲಿ ಕುಡುಕರು, ಧೂಮಪಾನಿಗಳು ಇರುತ್ತಾರೆ. ಮಹಿಳಾ ವೈದ್ಯರಿಗೆ ಅಪಾಯ ಸಂಭವಿಸಿದರೆ ಯಾರು ಜವಾಬ್ದಾರರು?’
‘ಈಚೆಗೆ ಯುವತಿಯೊಬ್ಬಳನ್ನು ಮದ್ಯ ವ್ಯಸನಿಯೊಬ್ಬ ಹಿಂದಿನಿಂದ ಬಂದು ಹಿಡಿದ ಘಟನೆಯೂ ನಡೆದಿದೆ. ತುರ್ತು ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸಬೇಕು ಎಂಬ ಬಗ್ಗೆಯೂ ಮಾಹಿತಿ ಇರುವುದಿಲ್ಲ’ ಎಂದು ದೂರಿದರು.
ವಿವಿಧ ಬೇಡಿಕೆ ಈಡೇರಿಸಲು ಪ್ರತಿಭಟನೆ ನಡೆಸುತ್ತಿರುವ ವಸತಿ ವೈದ್ಯರ ಸಂಘವೂ ‘ಕಿರಿಯ ವೈದ್ಯರ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಆಡಳಿತ ಮಂಡಳಿಯನ್ನು ಒತ್ತಾಯಿಸಿದೆ.
Cut-off box - ವೈದ್ಯರ ಸುರಕ್ಷತೆಗೆ ಕ್ರಮ: ಡೀನ್ ‘ಕಿರಿಯ ನಿವಾಸಿ ವೈದ್ಯರ ಸಭೆ ನಡೆಸಿ ಅಹವಾಲು ಸ್ವೀಕರಿಸಿದ್ದೇನೆ. ರಾತ್ರಿ ವೇಳೆ ವಿದ್ಯಾರ್ಥಿನಿಯರನ್ನು ಹೊರಗಿನ ಕೆಲಸಕ್ಕೆ ಕಳಿಸಬಾರದು ಆವರಣದ ಸುತ್ತಲ್ಲೂ ಹೈಮಾಸ್ಟ್ ದೀಪ ಅಳವಡಿಸಲು ನಿವಾಸಿ ವೈದ್ಯಾಧಿಕಾರಿಗೆ ಸೂಚಿಸಿದ್ದೇನೆ. ವೈದ್ಯರ ಕೊಠಡಿ ಹಾಗೂ ಶೌಚಾಲಯ ದುರಸ್ತಿಗೂ ಕ್ರಮ ಕೈಗೊಳ್ಳಲಾಗಿದ್ದು ಬೀಗ ಹಾಕಿದ್ದ ಕೊಠಡಿಯನ್ನೂ ಕಿರಿಯ ವೈದ್ಯರ ವಿಶ್ರಾಂತಿಗೆ ನೀಡಲು ತಿಳಿಸಿದ್ದೇನೆ. ಶುಶ್ರೂಷಕಿಯರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡುತ್ತೇವೆ. ಆಸ್ಪತ್ರೆಯ ಶೌಚಾಲಯ ದುರಸ್ತಿಗೂ ಅನುದಾನ ಲಭ್ಯವಿದ್ದು ಅದರ ಕೆಲಸವೂ ನಡೆಯುತ್ತಿದೆ’ ಎಂದು ಆಸ್ಪತ್ರೆಯ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.