ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರ ಹೊತ್ತು ಅಭಿಮನ್ಯು ಗಂಭೀರ ನಡಿಗೆ

ದಸರಾ ಆನೆಗಳ ಕಂಡು ಸಂಭ್ರಮಿಸಿದ ಸಾರ್ವಜನಿಕರು; 2ನೇ ಹಂತದ ತಾಲೀಮು
Published 1 ಸೆಪ್ಟೆಂಬರ್ 2024, 13:13 IST
Last Updated 1 ಸೆಪ್ಟೆಂಬರ್ 2024, 13:13 IST
ಅಕ್ಷರ ಗಾತ್ರ

ಮೈಸೂರು: ಪೂರ್ವದಿಂದ ಸೂರ್ಯನ ಕಿರಣಗಳು ಭೂಮಿಯನ್ನು ಸೋಕುತ್ತಿದ್ದಂತೆ ‘ಅಭಿಮನ್ಯು’ ಗಂಭೀರವಾದ ಹೆಜ್ಜೆಗಳನ್ನಿಡುತ್ತಾ ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿಯ ದ್ವಾರದ ಮೂಲಕ ಮುಖ್ಯರಸ್ತೆ ಪ್ರವೇಶಿಸಿದ. ತಮ್ಮ ಪ್ರೀತಿಯ ದಸರಾ ಆನೆಯ ಹಿಂಡನ್ನು ಕಂಡು ಸಾರ್ವಜನಿಕರು ಭಾವುಕರಾಗಿ ಕೈಮುಗಿದರು.

ದಸರೆಗೆ ತಯಾರಾಗುತ್ತಿರುವ ಅಭಿಮನ್ಯುವಿಗೆ ಭಾನುವಾರ 520 ಕೆ.ಜಿ ಭಾರ ಹೊರಿಸಿ 2ನೇ ಹಂತದ ತಾಲೀಮನ್ನು ಆರಂಭಿಸಲಾಯಿತು. ಕುಮ್ಕಿ ಆನೆಗಳಾದ ‘ಲಕ್ಷ್ಮಿ’, ‘ವರಲಕ್ಷ್ಮಿ’ ಸಹಿತ ಏಳು ಆನೆಗಳ ತಂಡದ ಸಾರಥ್ಯ ವಹಿಸಿ ಹೆಜ್ಜೆ ಹಾಕಿದರೆ, ರಸ್ತೆಯ ಬದಿಯಲ್ಲಿ ನಿಂತಿದ್ದ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಮೊಬೈಲ್‌ ಫೋನ್‌ಗಳಿಂದ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ಮಾವುತ ವಸಂತನ ಆಜ್ಞೆಯನ್ನು ಪಾಲಿಸಿದ ‘ಅಭಿಮನ್ಯು’, ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ದೂರವನ್ನು 1 ಗಂಟೆ 20 ನಿಮಿಷದಲ್ಲಿ ಕ್ರಮಿಸಿದ. ಮುಂದೆ ಅಭಿಮನ್ಯು ತಂಡವನ್ನು ಮುನ್ನಡೆಸಿದರೆ, ‘ಧನಂಜಯ’ ಹಿಂಭಾಗದಲ್ಲಿದ್ದು ಉಳಿದ ಆನೆಗಳು ನಿರ್ದಿಷ್ಟ ವೇಗ ಕಾಯ್ದುಕೊಳ್ಳುವಂತೆ ನಿರ್ದೇಶಿಸುತ್ತಿದ್ದ. ಆ ಮೂಲಕ ಆತ ಅನುಭವಿ ‘ಮಾಸ್ಟರ್‌ ಅರ್ಜುನ’ ಸ್ಥಾನವನ್ನು ತುಂಬಿದನು. ಮಧ್ಯೆ ಏಕಲವ್ಯ, ಭೀಮ, ಲಕ್ಷ್ಮಿ, ಗೋಪಿ, ರೋಹಿತ್‌ ಆನೆಗಳು ಹೆಜ್ಜೆ ಹಾಕಿದವು.

ಮೊದಲ ಬಾರಿ ದಸರಾದಲ್ಲಿ ಭಾಗವಹಿಸುತ್ತಿರುವ ‘ಏಕಲವ್ಯ’ನನ್ನು ಕಂಡು ಮಕ್ಕಳು ಸಂತಸಪಟ್ಟರು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅರಣ್ಯ ಇಲಾಖೆಯ ವಾಹನಗಳು ಮುಂಭಾಗದಲ್ಲಿ ಸಾಗಿದವು.

ಸಾಂಪ್ರದಾಯಿಕ ಪೂಜೆ: ಮರಳಿನ ಮೂಟೆಯ ಭಾರ ಹೊರಿಸುವುದಕ್ಕೂ ಮುನ್ನ ಬೆಳಿಗ್ಗೆ 7.15ಕ್ಕೆ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಆನೆಗಳಿಗೆ ಸಾಂಪ್ರದಾಯಿಕವಾಗಿ ಡಿಸಿಎಫ್‌ ಪ್ರಭು ಗೌಡ ಪೂಜೆ ಸಲ್ಲಿಸಿದರು. ಅರಮನೆ ಅರ್ಚಕ ಪ್ರಹ್ಲಾದ ರಾವ್‌ ‘ಗಣಪತಿ’ ಹಾಗೂ ‘ದುರ್ಗಾ’ ಸ್ತೋತ್ರವನ್ನು ಹೇಳಿದರು. ಆನೆಗಳ ಹಣೆಗಳಿಗೆ ಗಂಧ, ಅರಿಸಿನ ಹಚ್ಚಲಾಯಿತು. ಗರಿಕೆ, ಬೆಲ್ಲ, ಕಬ್ಬು, ಪಂಚ ಕಜ್ಜಾಯ, ಎಲೆ, ಅಡಿಕೆ ಇಟ್ಟು ಪೂಜೆ ಸಲ್ಲಿಸಿದರು. ನಂತರ ಪಂಚಫಲ, ಕಬ್ಬು– ಬೆಲ್ಲವನ್ನು ತಿನ್ನಿಸಲಾಯಿತು.‌

ಆರ್‌ಎಫ್‌ಒ ಸಂತೋಷ್‌ ಹೂಗಾರ್, ವೈದ್ಯ ಮುಜೀಬ್‌ ರೆಹಮಾನ್, ಎಸಿಪಿ ಚಂದ್ರಶೇಖರ್‌ ಭಾಗವಹಿಸಿದ್ದರು.

‘ದಸರಾ ಅಂಬಾರಿ ಹೊರುವ ಆನೆಗೆ ಆರಂಭದಲ್ಲಿ ನಮ್ದಾ ಗಾದಿ, ಮರಳಿನ ಮೂಟೆ ಹೀಗೆ ಒಟ್ಟು 520 ಕೆಜಿ ಭಾರವನ್ನು ಹೊರಿಸಿ ತಾಲೀಮು ಮಾಡಿಸುತ್ತಿದ್ದೇವೆ. ಜಂಬೂ ಸವಾರಿಯ ಶೇ 50 ತೂಕವನ್ನು ಹಾಕಿದ್ದೇವೆ. ಮುಂದೆ ಈ ತೂಕವನ್ನು ಮತ್ತಷ್ಟು ಏರಿಸುತ್ತಾ ಹೋಗುತ್ತೇವೆ’ ಎಂದು ಪ್ರಭುಗೌಡ ತಿಳಿಸಿದರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ 520 ಕೆ.ಜಿ ಭಾರ ಹೊತ್ತ ‘ಅಭಿಮನ್ಯು’ ತನ್ನ ತಂಡದೊಂದಿಗೆ ಹೆಜ್ಜೆ ಹಾಕಿದ ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ಮೈಸೂರು ದಸರಾ ಮಹೋತ್ಸವದ ಅಂಗವಾಗಿ 520 ಕೆ.ಜಿ ಭಾರ ಹೊತ್ತ ‘ಅಭಿಮನ್ಯು’ ತನ್ನ ತಂಡದೊಂದಿಗೆ ಹೆಜ್ಜೆ ಹಾಕಿದ ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಕಾಲು ನೋವಿನಿಂದ ‘ಕಂಜನ್‌’ ಗೈರು

ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕರೆತರಲಾಗಿರುವ ದುಬಾರೆ ಆನೆ ಶಿಬಿರದ ‘ಕಂಜನ್‌’ ಆನೆಗೆ ಕಾಲು ನೋವು ಕಾಣಿಸಿಕೊಂಡಿರುವುದರಿಂದ ಭಾನುವಾರದ ತಾಲೀಮಿನಲ್ಲೂ ಭಾಗವಹಿಸಲಿಲ್ಲ. ‘ಕಂಜನ್‌ ಆರೋಗ್ಯವಾಗಿದೆ. ವಿಶ್ರಾಂತಿ ಅಗತ್ಯ ಇರುವುದರಿಂದ ತಾಲೀಮಿನಲ್ಲಿ ಭಾಗವಹಿಸುತ್ತಿಲ್ಲ’ ಎಂದು ಪ್ರಭು ಗೌಡ ಸ್ಪ‍ಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT