ಮೈಸೂರು: ‘ಜಾಗತಿಕವಾಗಿ ಶಕ್ತಿಶಾಲಿ ದೇಶವಾಗಿ ಭಾರತವು ಹೊರಹೊಮ್ಮಿದ್ದು, ಯುವ ಸಮುದಾಯಕ್ಕೆ ಅವಕಾಶದ ಬಾಗಿಲನ್ನು ತೆರೆದಿದೆ’ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್, ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಯುವ ಸಂವಾದದಲ್ಲಿ ಮಾತನಾಡಿದ ಅವರು, ‘ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಶಿಕ್ಷಣ, ತಂತ್ರಜ್ಞಾನ, ಉದ್ಯೋಗ ಹಾಗೂ ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿದೆ’ ಎಂದರು.
‘ನನೆಗುದಿಗೆ ಬಿದ್ದಿದ್ದ ಯೋಜನೆಗಳನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಿದೆ. ವಿವಿಧ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಎಲ್ಲ ಸಮುದಾಯದವರಿಗೆ ಸೃಷ್ಟಿಸಿದೆ. ಫಲಾನುಭವಿಗಳಿಗೆ ಭ್ರಷ್ಟಾಚಾರ ಮುಕ್ತ ಸೌಲಭ್ಯಗಳು ತಲುಪುತ್ತಿವೆ’ ಎಂದರು.
‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ. ಡಿಜಿಟಲ್ ಆರ್ಥಿಕತೆ ಮುನ್ನಲೆಗೆ ಬಂದಿದೆ. ರೈಲ್ವೆ ಯೋಜನೆಗಳು, 5 ಜಿ ನೆಟ್‌ವರ್ಕ್ ಸೇವೆ ಸುಲಭವಾಗಿದೆ. ಭಾರತವೇ ಇಂದು ಶೇ 100ರಷ್ಟು ಮೊಬೈಲ್ ಫೋನ್ ಉತ್ಪಾದನೆ ಮಾಡುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ₹ 90 ಸಾವಿರ ಕೋಟಿ ಮೌಲ್ಯದ ಆ್ಯಪಲ್ ಫೋನ್‌ಗಳು ರಫ್ತಾಗುತ್ತಿವೆ. ಇದು ಬದಲಾವಣೆಯ ಭಾರತ’ ಎಂದು ಪ್ರತಿಪಾದಿಸಿದರು.
‘ಕೋವಿಡ್ ಬಿಕ್ಕಟ್ಟನ್ನು ಸಮರ್ಥ ಹಾಗೂ ಸಮಯೋಚಿತವಾಗಿ ಎದುರಿಸಲಾಗಿದೆ. ಆರ್ಥಿಕ ಹಿಂಜರಿಕೆಯ ಬಿಸಿಯನ್ನು ಜಾಗತಿಕವಾಗಿ ಎಲ್ಲ ದೇಶಗಳು ಅನುಭವಿಸಿದವು. ಆದರೆ, ಭಾರತವು ಬಿಕ್ಕಟ್ಟಿನ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಿತು. ಅಲ್ಲದೇ, ವಿದೇಶಗಳಿಗೂ ಕೋವಿಡ್ ಲಸಿಕೆಯನ್ನು ನೀಡಿ ನೆರವಾಯಿತು’ ಎಂದರು.
‘ಅಮೆರಿಕ, ಬ್ರಿಟನ್, ಚೀನಾ ಎದುರು ದೇಶವು ಮೇಲುಗೈ ಸಾಧಿಸಿದೆ. ಚೀನಾದಲ್ಲಿ 5 ಮತ್ತು 6ನೇ ಲಾಕ್‌ಡೌನ್‌ಗಳು ಜಾರಿಯಲ್ಲಿವೆ’ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ್ ಬಿದರಿ, ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾಲೇಜು ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಆರ್.ಮುಗೇಶಪ್ಪ, ಸಹಾಯಕ ನಿರ್ದೇಶಕ ಬಿ. ನಿರಂಜನ ಮೂರ್ತಿ, ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ. ಬಿ.ವಿ. ಸಾಂಬಶಿವಯ್ಯ, ಪ್ರಾಂಶುಪಾಲ ಪ್ರೊ.ಎಂ.ಪಿ.ವಿಜಯೇಂದ್ರ ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.