ಮೈಸೂರು: ‘ರಾಜ್ಯದ ಎಲ್ಲ ಬಡವರಿಗೆ ಮನೆ ಸಿಕ್ಕಿಲ್ಲ. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ನಿತ್ಯವೂ ಶೌಚಾಲಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೆಡಿಎಸ್ ಸರ್ಕಾರ ಬಂದ ಕೂಡಲೇ ಎಲ್ಲ ಸಮಸ್ಯೆ ಬಗೆಹರಿಸುವ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
‘ಪಂಚರತ್ನ ಯಾತ್ರೆ’ ಸಮಾರೋಪ ನಡೆಯುವ ಉತ್ತನಹಳ್ಳಿ ರಿಂಗ್ ರಸ್ತೆ ಮೈದಾನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘2009ರಲ್ಲಿ ಸಂಸತ್ ಸದಸ್ಯನಾಗಿದ್ದಾಗ ಪಂಚಾಯತ್ ರಾಜ್ ಸಂಸತ್ ಸಮಿತಿಯಲ್ಲಿ ಸದಸ್ಯನಾಗಿದ್ದೆ. ಎಲ್ಲ ಬಡವರಿಗೆ ಮನೆ ನೀಡಲಾಗಿದೆಯೆಂದು ಯುಪಿಎ ಸರ್ಕಾರ ಹೇಳಿತ್ತು. ಆದರೆ, ಅದು ಕಾಗದದಲ್ಲಷ್ಟೇ ಇದೆ’ ಎಂದರು.
‘ಬಹಿರ್ದೆಸೆ ಮುಕ್ತ ರಾಜ್ಯವೆಂದು ಕೇಂದ್ರ ಸರ್ಕಾರ ಘೋಷಿಸಿದ್ದರೂ ಶೌಚಾಲಯ ಸಮಸ್ಯೆ ಇದೆ. ಸುಸಜ್ಜಿತ ಆಸ್ಪತ್ರೆ, ಶಾಲೆ, ಬಡವರಿಗೆ ನಿವೇಶನ, ಮನೆ ಸಿಕ್ಕಿಲ್ಲ. ಯುವಕರಿಗೆ ಉದ್ಯೋಗ, ರೈತರ ಸಮಸ್ಯೆಗಳಿಗೆ ಪರಿಹಾರ ಪಂಚರತ್ನ ಕಾರ್ಯಕ್ರಮಗಳಲ್ಲಿದೆ’ ಎಂದು ಪ್ರತಿಪಾದಿಸಿದರು.
‘ಚುನಾವಣೆಗೂ ಮುನ್ನ ಒಕ್ಕಲಿಗರಿಗೆ ಎಷ್ಟು ಮೀಸಲಾತಿ ಕೊಡುತ್ತೀರೆಂದು ಘೋಷಿಸಿ ಎಂದು ನಂಜಾವಧೂತ ಸ್ವಾಮೀಜಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ಒಕ್ಕಲಿಗರಷ್ಟೇ ಅಲ್ಲದೆ ಎಲ್ಲ ಸಮಾಜಗಳಿಗೂ ನಿಯಮಾವಳಿ ಹಾಗೂ ಕಾನೂನು ಬದ್ಧವಾಗಿ ಮೀಸಲಾತಿ ನೀಡಲಾಗುವುದು. ಅನ್ಯಾಯ ಸರಿಪಡಿಸಲಾಗುವುದು’ ಎಂದು ಭರವಸೆ ನೀಡಿದರು.
ನಾವು ಕನ್ನಡಿಗರ ಟೀಂ: ‘ಕಾಂಗ್ರೆಸ್, ಬಿಜೆಪಿ ‘ಬಿ’ ಟೀಂ ಜೆಡಿಎಸ್ ಅಲ್ಲ. ನಾವು ಕನ್ನಡಿಗರ ‘ಬಿ’ ಟೀಂ. ನಾನು ಜನರ ಕಷ್ಟಕ್ಕೆ ಕಣ್ಣೀರು ಹಾಕುವುದನ್ನೇ ಕೆಲವರು ಬಲಹೀನತೆ ಎನ್ನುತ್ತಾರೆ. ಹೃದಯ, ಮಾನವೀಯತೆ ಇದ್ದವರಿಗೆ ಬಡವರ ಕಷ್ಟ ಕೇಳಿ ಕಣ್ಣೀರು ಬರುತ್ತದೆ. ಟೀಕೆ ಮಾಡುವವರಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದರು.
‘ವಿಜಯಸಂಕಲ್ಪ ಯಾತ್ರೆಗೆ ಜನರನ್ನು ಸೇರಿಸಲು ಬೊಮ್ಮಾಯಿ ಸರ್ಕಾರವು ಅಧಿಕಾರಿಗಳನ್ನು ಅವಲಂಬಿಸಿದೆ. ನಿಜವಾದ ಫಲಾನುಭವಿಗಳನ್ನು ಕರೆತರುತ್ತಿಲ್ಲ. ಹಣ ಕೊಟ್ಟು ಸೇರಿಸುತ್ತಿದ್ದಾರೆ. ಕಂದಾಯ ಸಚಿವ ಆರ್.ಅಶೋಕ ಅವರು ಬಸವರಾಜ ಬೊಮ್ಮಾಯಿ ಅಂಥ ಮುಖ್ಯಮಂತ್ರಿ ನೋಡಿಲ್ಲ ಎಂದು ಹೇಳಿದ್ದಾರೆ. ಇದು ವ್ಯಂಗ್ಯವೋ? ಇನ್ನಾವ ಅರ್ಥದಲ್ಲಿ ಹೇಳಿದ್ದಾರೊ ಗೊತ್ತಿಲ್ಲ’ ಎಂದು ಟೀಕಿಸಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಶ್ವಿನ್ ಕುಮಾರ್, ಕೆ.ಮಹದೇವ್, ಮುಖಂಡರಾದ ಕೆ.ವಿ.ಮಲ್ಲೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ನಗರ ಘಟಕದ ಅಧ್ಯಕ್ಷ ಚಲುವೇಗೌಡ, ಮುಖಂಡರಾದ ಪ್ರೇಮಾ ಶಂಕರೇಗೌಡ, ಆರ್.ಲಿಂಗಪ್ಪ, ಎಂ.ಜೆ.ರವಿಕುಮಾರ್, ಎಸ್ ಬಿಎಂ ಮಂಜು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.