ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಲ್‌–ಬದರ್‌’ ವೃತ್ತ: ಸಿ.ಎಂ ಉದ್ಘಾಟನೆ

ರಾಜೀವ್‌ನಗರ ಎರಡನೇ ಹಂತ: ₹ 2.47 ಕೋಟಿ ವೆಚ್ಚದಲ್ಲಿ ನಿರ್ಮಾಣ
Published 31 ಆಗಸ್ಟ್ 2023, 7:41 IST
Last Updated 31 ಆಗಸ್ಟ್ 2023, 7:41 IST
ಅಕ್ಷರ ಗಾತ್ರ

ಮೈಸೂರು: ರಾಜೀವ್‌ನಗರ ಎರಡನೇ ಹಂತದಲ್ಲಿ ₹ 2.47 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಅಲ್–ಬದರ್‌ ವೃತ್ತ’ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಉದ್ಘಾಟಿಸಿದರು.

ಜಗಮಗಿಸುವ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದ ವೃತ್ತದ 25 ಅಡಿ ಎತ್ತರದ ಸ್ತಂಭ, ಕಾರಂಜಿ, ಟೈಲ್ಸ್‌ನ ರಸ್ತೆ, ಪಾದಚಾರಿ ರಸ್ತೆಯ ಅಭಿವೃದ್ಧಿಯನ್ನು ಶ್ಲಾಘಿಸಿ ಮಾತನಾಡಿ, ‘ಪಾಲಿಕೆ ಸದಸ್ಯ ಅಯೂಬ್‌ ಖಾನ್‌ ವಿಶೇಷ ಕಾಳಜಿ ವಹಿಸಿ ವೃತ್ತ ಅಭಿವೃದ್ಧಿ ಮಾಡಿದ್ದಾರೆ. ಎಲ್ಲ ಪಕ್ಷಗಳ ಚುನಾಯಿತ ಜನಪ್ರತಿನಿಧಿಗಳು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರು ನಗರವನ್ನು ಯೋಜನಾ ಬದ್ಧವಾಗಿ ನಿರ್ಮಿಸಲು ಹಾಗೂ ಎಲ್ಲರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ’ ಎಂದರು.

‘ನರೇಂದ್ರ ಮೋದಿ ಅವರು ಕಳೆದ 9 ವರ್ಷಗಳಿಂದ ಸುಳ್ಳುಗಳನ್ನೇ ಹೇಳಿ ಜನರ ದಾರಿಯನ್ನು ತಪ್ಪಿಸಿದ್ದಾರೆ. ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡಿದ್ದಾರೆ. ಹಿಂದೂ–ಮುಸ್ಲಿಮರು– ಕ್ರೈಸ್ತರು ಒಂದೇ ತಾಯಿಯ ಮಕ್ಕಳು. ಧರ್ಮಗಳ ನಡುವೆ ಸಂಘರ್ಷ ಮೂಡಿಸುವುದೇ ಬಿಜೆಪಿಗರ ಕೆಲಸವಾಗಿದೆ. ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು’ ಎಂದರು.

‘ಅಭಿವೃದ್ಧಿ ಕೆಲಸಗಳಿಗಿಂತ ಹಿಜಾಬ್‌, ಹಲಾಲ್‌ಗೆ ಬಿಜೆಪಿಗರು ಮಹತ್ವ ಕೊಟ್ಟರು. ಸಾಮರಸ್ಯವನ್ನು ಹಾಳು ಮಾಡಿದ ಅವರು ಮತ್ತೆ ಅಧಿಕಾರಕ್ಕೆ ಬರಬಾರದು. ಕಾಂಗ್ರೆಸ್‌ ಬಡವರು, ರೈತರು, ದಲಿತರು, ಅಲ್ಪಸಂಖ್ಯಾತರು, ಕಾರ್ಮಿಕರ ಪರವಾದ ಪಕ್ಷವಾಗಿದ್ದು, ನಮ್ಮನ್ನೇ ಬೆಂಬಲಿಸಬೇಕು’ ಎಂದು ಕೋರಿದರು.

‘ನರೇಂದ್ರ ಮೋದಿ ಏನು ಅಭಿವೃದ್ಧಿ ಮಾಡಿದ್ದಾರೆಂಬುದನ್ನು ಹೇಳಲಿ. 2014ರಲ್ಲಿ ₹ 419 ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ₹ 1,110ಕ್ಕೇರಿದೆ. ಚುನಾವಣೆ ಹತ್ತಿರ ಬಂದಾಗ ₹ 200 ಕಡಿಮೆ ಮಾಡಿದ್ದಾರೆ. ಮೋದಿ ಅವರು ಹೇಳಿದ ಅಚ್ಚೇ ದಿನಗಳು ಬಂದಿವೆಯಾ? ಕಾಂಗ್ರೆಸ್‌ ಜನರಲ್ಲಿ ಕೊಳ್ಳುವ ಶಕ್ತಿಯನ್ನು ಹೆಚ್ಚಿಸಲು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಒಳ್ಳೆಯ ದಿನಗಳನ್ನು ರಾಜ್ಯದ ಜನರು ಈಗ ನೋಡುತ್ತಿದ್ದಾರೆ’ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಶಾಸಕರಾದ ತನ್ವೀರ್ ಸೇಠ್, ಕೆ.ಹರೀಶ್‌ಗೌಡ, ಡಿ.ರವಿಶಂಕರ್, ಪಾಲಿಕೆ ವಿರೋಧಪಕ್ಷದ ನಾಯಕ ಅಯೂಬ್‌ ಖಾನ್, ಮುಖಂಡರಾದ ಮಂಜೇಗೌಡ, ಸಂದೇಶ್‌ ನಾಗರಾಜ್, ಎಂ.ಕೆ.ಸೋಮಶೇಖರ್, ಡಾ.ಯತೀಂದ್ರ ಸಿದ್ದರಾಮಯ್ಯ, ಪಾಲಿಕೆ ಸದಸ್ಯ ಆರೀಫ್‌ ಖಾನ್ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT