ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಕರಣ ದಾಖಲಿಸಲು ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಬೆಂಬಲಿಗರು ಶನಿವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ಅಹಿಂದ ಸಂಘಟನೆ ಹಾಗೂ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸದಸ್ಯರು ನ್ಯಾಯಾಲಯದ ಮುಂಭಾಗ ಟಯರ್ ಹಾಗೂ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ‘ತಮ್ಮ ಮೇಲಿನ ಆರೋಪಕ್ಕೆ ಸ್ವತಃ ತನಿಖಾ ರಚಿಸಿರುವ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬುದನ್ನು ವಿಪಕ್ಷಗಳು ಅರಿಯಬೇಕು. ಬಡವರು, ಕಾರ್ಮಿಕರು, ಮಹಿಳೆಯರು ಸೇರಿ ಶೋಷಿತ ವರ್ಗದ ಜನರು ಸರ್ಕಾರದ ಪರ ನಿಂತಿದ್ದಾರೆ. ಆದರೆ ಆ ಜನರ ದಾರಿ ತಪ್ಪಿಸುವ ಕೆಲಸ ವಿಪಕ್ಷಗಳು ಮಾಡುತ್ತಿವೆ’ ಎಂದು ಆರೋಪಿಸಿದರು.
‘ರಾಜ್ಯಪಾಲರು ತಮ್ಮ ನಿರ್ಧಾರ ಹಿಂಪಡೆಯಬೇಕು. ಅದು ಸಾಧ್ಯವಾಗದೇ ಹೋದರೆ ಅವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯಭವನ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಸ್ಥಳೀಯವಾಗಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು’ ಎಂದು ಎಚ್ಚರಿಸಿದರು.
ಕರ್ನಾಟಕ ಪ್ರಾದೇಶಿಕ ಕುರುಬರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರೀಯತೆ ಸಹಿಸದ ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರ್ಕಾರ ಉರುಳಿಸುವ ಹುನ್ನಾರ ಮಾಡುತ್ತಿದೆ’ ಎಂದರು.
ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಎಚ್.ಎಸ್.ಪ್ರಕಾಶ್, ದಲಿತ ಮುಖಂಡ ರಾಜೇಶ್, ಮೈಸೂರು ಬಸವಣ್ಣ, ಮಡಿವಾಳ ಸಂಘದ ಅಧ್ಯಕ್ಷ ರವಿನಂದನ್, ಉಪ್ಪಾರ ಸಂಘದ ಜಿಲ್ಲಾಧ್ಯಕ್ಷ ಯೋಗೆಶ್ ಉಪ್ಪಾರ, ವಿಶ್ವಕರ್ಮ ಸಂಘದ ಜಿಲ್ಲಾಧ್ಯಕ್ಷ ಮೊಗಣ್ಣಚಾರ್, ಮುಖಂಡರಾದ ಲೋಕೇಶ್, ಮಹೇಂದ್ರ, ಬಸಪ್ಪ ಬಸವರಾಜು, ಮಂಜುಳಾ ಮಂಜುನಾಥ್, ಲಕ್ಷ್ಮೀ, ಹಿನಕಲ್ ಉದಯ್, ವಕೀಲರಾದ ಕಾಂತರಾಜು, ತಿಮ್ಮಯ್ಯ, ದಿನೇಶ್, ಕೇಶವ್ ಭಾಗವಹಿಸಿದ್ದರು.
ರಸ್ತೆಯಲ್ಲಿ ಮಲಗಿ ಪ್ರತಿರೋಧ
ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ಟಯರ್ ಹಾಗೂ ರಾಜ್ಯಪಾಲರ ಭಾವಚಿತ್ರ ಸುಟ್ಟರು. ‘ಗೋ ಬ್ಯಾಕ್ ರಾಜ್ಯಪಾಲ’ ಘೋಷಣೆ ಕೂಗಿದರು. ಸರ್ಕಾರಿ ಬಸ್‌ಗಳನ್ನು ಕೆಲಕಾಲ ತಡೆಹಿಡಿಯಲಾಯಿತು.
ಎಂ.ಕೆ.ಸೋಮಶೇಖರ್ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಶಸ್ಸನ್ನು ಸಹಿಸದೆ ವಿಪಕ್ಷಗಳು ಪಿತೂರಿ ನಡೆಸುತ್ತಿವೆ. ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ ಮಾಡಲು ಹೊರಟಿರುವುದು ವಿಷಾದನೀಯ. ರಾಜ್ಯಪಾಲರು ಆದೇಶ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಜಿ.ಸೋಮಶೇಖರ್, ಶ್ರೀಧರ್, ರವಿಶಂಕರ್, ಜೆ.ಗೋಪಿ, ಎಂ.ಸುನಿಲ್, ಆರ್.ಎಚ್.ಕುಮಾರ್, ಟಿ.ಬಿ.ಚಿಕ್ಕಣ್ಣ, ಮಹಮ್ಮದ್ ಫಾರೂಕ್, ಕಲೀಮ್ ಷರೀಫ್, ಶಾಧಿಕ್ ಉಲ್ಲ ರೆಹಮಾನ್, ವಿಶ್ವನಾಥ್, ಕುರುಬಾರಹಳ್ಳಿ ಪ್ರಕಾಶ್, ಸೋಮು, ರವಿ, ವಿಜಯ ಕುಮಾರ್, ಡೈರಿ ವೆಂಕಟೇಶ್, ಭವ್ಯಾ, ವೀಣಾ, ಚಂದ್ರಕಲಾ ಭಾಗವಹಿಸಿದ್ದರು.
ರಸ್ತೆತಡೆ, ಪ್ರತಿಕೃತಿ ದಹನ
ಬಂಡಿಪಾಳ್ಯ ಬಸವರಾಜು ನೇತೃತ್ವದಲ್ಲಿ ಬಂಡಿಪಾಳ್ಯ ಸಿಗ್ನಲ್ ಬಳಿ ಜಮಾಯಿಸಿದ ಸಿದ್ದರಾಮಯ್ಯ ಬೆಂಬಲಿಗರು ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿದರು. ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿ ಅರ್ಧ ತಾಸಿಗೂ ಅಧಿಕ ಕಾಲ ವಾಹನ ಸಂಚಾರಕ್ಕೆ ತಡೆಯೊಡ್ಡಿದರು.
ರಾಜ್ಯಪಾಲರ ವಿರುದ್ಧದ ಬರಹವುಳ್ಳ ಫಲಕ ಹಾಗೂ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಮಹಾದೇವು, ಕಡಕೋಳ ಶ್ರೀಕಾಂತ್, ಜಟ್ಟಿಹುಂಡಿ ರಾಚಪ್ಪ, ಭರತ್, ಗಿರಿಧರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.