ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡಿನ ಗೌತಮ ರಥೋತ್ಸವದ ಸಿದ್ಧತೆಗೆ ತೊಡಕು

Last Updated 20 ಮಾರ್ಚ್ 2023, 6:21 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವ ಸ್ವಾಮಿಯ ಗೌತಮ ರಥೋತ್ಸವ ಎ.2ರಂದು ನಿಗದಿಯಾಗಿದೆ. ಆದರೆ, ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಅಗತ್ಯವಿರುವ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲು ಎರಡು ತಿಂಗಳ ಮೊದಲೇ ಪೂರ್ವಭಾವಿ ಸಭೆ ಕರೆದು ಚರ್ಚಿಸಬೇಕಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಭೆ ನಡೆಸುವುದು ವಿಳಂಬವಾಗಿದ್ದು, ಸಿದ್ಧತಾ ಕಾರ್ಯಗಳಿಗೆ ತೊಡಕಾಗಿದೆ ಎಂಬ ದೂರುಗಳು ಕೇಳಿಬಂದಿವೆ.

‘ಈ ಹಿಂದೆ ಜಾತ್ರೆ ಸಿದ್ಧತೆಗಾಗಿ ಎರಡು ತಿಂಗಳ ಮೊದಲೇ ಪೂರ್ವಭಾವಿ ಸಭೆ ನಡೆಸಿ ಚರ್ಚಿಸಲಾಗುತ್ತಿತ್ತು. ಜಾತ್ರೆಯಲ್ಲಿ ಸಾಗುವ ಶ್ರೀಕಂಠೇಶ್ವರ ಸ್ವಾಮಿಯ ಗೌತಮ ರಥ 90 ಅಡಿ ಎತ್ತರ ಹಾಗೂ 110 ಟನ್‌ ತೂಕದ್ದಾಗಿದೆ. 1.5 ಕಿ.ಮೀ ವ್ಯಾಪ್ತಿಯ ರಥ ಬೀದಿಯಲ್ಲಿ ತೇರನ್ನು ಸಾವಿರಾರು ಭಕ್ತರು ಎಳೆದು ಸ್ವಸ್ಥಾನ ತಲುಪಿಸುತ್ತಾರೆ. ಈ ಹಿಂದೆ ರಥಬೀದಿಯ ಕಳಪೆ ನಿರ್ವಹಣೆಯಿಂದಾಗಿ ರಥಗಳು ಚಲಿಸಲು ಅಡ್ಡಿಯಾಗುತ್ತಿತ್ತು. ಉಪ ಚುನಾವಣೆ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಕೋಟ್ಯಂತರ ರೂಪಾಯಿ ಅನುದಾನ ನೀಡಿ ರಥ ಬೀದಿಯನ್ನು ಕಾಂಕ್ರೀಟ್‌ ರಸ್ತೆಯಾಗಿ ಅಭಿವೃದ್ಧಿಪಡಿಸಿದ ಮೇಲೆ ರಥೋತ್ಸವ ಸಾಂಗವಾಗಿ ನಡೆಯುತ್ತದೆ. ಈಚೆಗೆ, ಜಾತ್ರೆ ಅಧಿಕಾರಿಗಳ ದರ್ಬಾರ್‌ ಆಗಿ ಮಾರ್ಪಟ್ಟಿದೆ’ ಎಂದು ದೇಗುಲದ ಮಾಜಿ ಧರ್ಮ ದರ್ಶಿ ಮಂಡಳಿ ಅಧ್ಯಕ್ಷ ಇಂಧನ್‌ ಬಾಬು ದೂರಿದರು.

‘ಊರ ಜಾತ್ರೆಯಲ್ಲಿ ಯುವಕರು, ಹಿರಿಯರು ಸ್ವಯಂ ಸೇವಕರಾಗಿ ದುಡಿಯಲಿದ್ದಾರೆ. ಜಾತ್ರೆಗೆ ಕೇವಲ 10 ದಿನಗಳು ಉಳಿದಿವೆ. ಈವರೆಗೆ ದೇವಾಲಯದ ಆಡಳಿತ ಮಂಡಳಿಯಿಂದ ಪೂರ್ವ ಭಾವಿ ಸಭೆಗೆ ಆಹ್ವಾನ ಬಂದಿಲ್ಲ. ಧರ್ಮ ದರ್ಶಿ ಮಂಡಳಿಯೂ ರಚನೆಯಾಗಿಲ್ಲ. ಊರಿನ ಹಿರಿಮೆಗೆ ಪಾತ್ರವಾಗಿರುವ ಪಂಚ ಮಹಾರಥೋತ್ಸವದ ಬಗ್ಗೆ ನಿರ್ಲಕ್ಷ್ಯ ಸರಿಯಲ್ಲ’ ಎಂದು ನಗರದ ನಿವಾಸಿ ಮಹದೇವ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಸಭೆ: ಜಾತ್ರೆ ಸಿದ್ಧತೆ ಬಗ್ಗೆ ಚರ್ಚಿಸಲು ಶಾಸಕ ಬಿ. ಹರ್ಷವರ್ಧನ್‌ ಹಾಗೂ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಮಾರ್ಚ್‌ 20ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ. ಜಾತ್ರೆಯ ಪೂರ್ವಸಿದ್ಧತೆಗಳು ನಡೆಯುತ್ತಿವೆ. ಕಳೆದ ಒಂದು ತಿಂಗಳಿನಿಂದ ಮುರುಡೇಶ್ವರದ ಗಜೇಂದ್ರ ನೇತೃತ್ವದ 9 ಮಂದಿಯ ತಂಡ ಗೌತಮ ರಥದ 1 ಚಕ್ರವನ್ನು ಹೊಸದಾಗಿ ನಿರ್ಮಿಸಿ, ಉಳಿದ ಎರಡು ಚಕ್ರಗಳನ್ನು ರಿಪೇರಿ ಮಾಡಿದೆ. ಅಮ್ಮನವರ ಎರಡು ರಥಗಳನ್ನು ಬದಲಿಸಿ, ಹೊಸ ಚಕ್ರಗಳನ್ನು ಅಳವಡಿಸಲಾಗಿದೆ. ಲೋಕೋಪಯೋಗಿ ಇಲಾಖೆಯ ಎಇಇ ಮುತ್ತುರಾಜ್‌, ಎಇ ಜಯಕುಮಾರ್‌ ರಥದ ಚಕ್ರಗಳನ್ನು ಪರಿಶೀಲಿಸಿ ಒಪ್ಪಿಗೆ ನೀಡಿದ್ದಾರೆ. ಸೋಮವಾರದಿಂದ ದೇವಾಲಯದ ಕಾವಾಡಿಗಳು ರಥ ಕಟ್ಟುವ ಕಾರ್ಯ ನಡೆಸಲಿದ್ದಾರೆ. ಸಭೆಯಲ್ಲಿ ಊರಿನ ಪ್ರಮುಖರು ನೀಡುವ ಸಲಹೆ, ಸೂಚನೆಗಳನ್ನು ಪರಿಗಣಿಸಲಾಗುವುದು’ ಎಂದು ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಜಾತ್ರೆಗೆ ಜಿಲ್ಲಾಧಿಕಾರಿ ಚಾಲನೆ:

‘ಪೂರ್ವಭಾವಿ ಸಭೆಯಲ್ಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಭಾಗವಹಿಸಲಿದ್ದಾರೆ. ದೇವಾಲಯಕ್ಕೆ ಸರ್ಕಾರ ಮಂಜೂರು ಮಾಡಿರುವ 75 ಕೊಠಡಿಗಳ ನಿರ್ಮಾಣ ಕಾಮಗಾರಿ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಯಲಿದೆ. ಈ ತಿಂಗಳ 27ರೊಳಗೆ ನೀತಿ ಸಂಹಿತೆ ಜಾರಿಯಾಗುವ ಸಂಭವವಿದೆ. ಹೀಗಾಗಿ ಜಿಲ್ಲಾಧಿಕಾರಿ ಜಾತ್ರೆಗೆ ಚಾಲನೆ ನೀಡಲಿದ್ದಾರೆ. ಶಾಸಕನಾಗಿ 4 ಜಾತ್ರೆ ನಡೆಸಿದ ಅನುಭವವಿದೆ. ಜಾತ್ರೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದ್ದೇನೆ’ ಎಂದು ಶಾಸಕ ಬಿ.ಹರ್ಷವರ್ಧನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT