ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇತರರೂ ಬದುಕುವಂತೆ ಮಾಡುವವರೇ ಕಲಾವಿದರು’

Last Updated 10 ಅಕ್ಟೋಬರ್ 2022, 15:29 IST
ಅಕ್ಷರ ಗಾತ್ರ

ಮೈಸೂರು: ‘ತಾನು ಬದುಕಿದ್ದಾಗಲೇ ಇತರರನ್ನೂ ಬದುಕುವಂತೆ ಮಾಡುವವರೇ ನಿಜವಾದ ಕಲಾವಿದರು’ ಎಂದು ನಟ ಸುಚೇಂದ್ರ ಪ್ರಸಾದ್ ಹೇಳಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯಿಂದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಜತ ಮಹೋತ್ಸವದ ಸಮಾರೋಪ ಹಾಗೂ ‘ಶಿಲ್ಪಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

‘ಪ್ರಶಸ್ತಿ ಸಿಗಲು ಹಾಗೂ ಸಿಗದಿರಲು ಅನೇಕ ಕಾರಣಗಳಿರುತ್ತವೆ. ಸಿದ್ಧಿ ಪಡೆದವರು ಪ್ರಸಿದ್ಧಿಗಾಗಿ ಹಾತೊರೆಯುವುದಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಹಾತೊರೆಯುವಿಕೆ ಜಾಸ್ತಿಯಾಗಿದೆ. ಕೆಲಸವನ್ನೇ ಮಾಡದೇ ಎಲ್ಲ ಬಗೆಯ ಶ್ರೇಯಗಳೂ ಬೇಕು ಎಂದು ಬಯಸುತ್ತಿದ್ದೇವೆ’ ಎಂದರು.

‘ಸಣ್ಣತನದ ಕತ್ತಲೆಯಿಂದ ಹೊರಬಂದು ವಿಸ್ತಾರ, ವೈಶಾಲ್ಯದಿಂದ ಬಾಳಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

‘ಪರಮವಾದುದನ್ನು ಪೊರೆಯುವ ಕೈಂಕರ್ಯವೇ ಪರಂಪರೆ. ಪ್ರತಿಭೆಯನ್ನು ಗೌರವಿಸುವುದು ಅಭಿನಂದನಾರ್ಹ ಕೆಲಸ. ಪ್ರಶಸ್ತಿ ಪಡೆದವರಷ್ಟೆ ಸಾಧಕರು ಎಂದೇನಲ್ಲ. ಪಡೆಯದಿದ್ದವರೂ ಬಹಳಷ್ಟು ಮಂದಿ ನಮ್ಮ ನಡುವೆ ಇರುತ್ತಾರೆ. ಆತ್ಮತೃಪ್ತಿಗಾಗಿ ಸೇವಾಕೈಂಕರ್ಯದಲ್ಲಿ ತೊಡಗಿರುತ್ತಾರೆ. ಎಲ್ಲರ ಪ್ರತಿನಿಧಿಗಳಾಗಿ ಅವರಿಗೆ ಆಡಳಿತ ಯಂತ್ರವು ಗೌರವದ ಮುದ್ರೆ ಒತ್ತುತ್ತದೆಯಷ್ಟೆ’ ಎಂದರು.

ವಿಜಯನಗರದ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನ ವಂಶಸ್ಥ ಶ್ರೀಕೃಷ್ಣದೇವರಾಯ, ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಮಾತನಾಡಿದರು.

ಹಾಸನ ಜಿಲ್ಲೆ ಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಉಪ ನಿರ್ದೇಶಕಿ ನಿರ್ಮಲಾ ಮಠಪತಿ ‍ಪಾಲ್ಗೊಂಡಿದ್ದರು.

ಅಕಾಡೆಮಿಯ ರಿಜಿಸ್ಟ್ರಾರ್ ಆರ್‌.ಚಂದ್ರಶೇಖರ್ ಸ್ವಾಗತಿಸಿದರು.

ಇದಕ್ಕೂ ಮುನ್ನ, ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾನ್‌ ಮೈಸೂರು ಎಂ.ನಾಗರಾಜು ಹಾಗೂ ವಿದ್ವಾನ್ ಮೈಸೂರು ಎಂ.ಮಂಜುನಾಥ್‌ ತಂಡದವರು ಒಂದೂವರೆ ತಾಸು ನಡೆಸಿಕೊಟ್ಟ ವಯಲಿನ್‌ ಜುಗಲ್‌ಬಂದಿ ಸಭಿಕರನ್ನು ರಂಜಿಸಿತು. ಬಾಗಲಕೋಟೆಯ ಬಾಗಲಕೋಟೆಯ ಚನ್ನಮಲ್ಲು ಮತ್ತು ತಂಡದವರು ಕರಡಿ ಮಜಲು ವಾದನ ಕಾರ್ಯಕ್ರಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT