ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಅಪವ್ಯಾಖ್ಯಾನ: ವಿಷಾದ

ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್ ಕಳವಳ
Last Updated 18 ಮಾರ್ಚ್ 2023, 14:00 IST
ಅಕ್ಷರ ಗಾತ್ರ

ಮೈಸೂರು: ‘ಸಂವಿಧಾನವನ್ನು ಅಪವ್ಯಾಖ್ಯಾನ ಮಾಡುವ ಹಾಗೂ ಅಪ್ರಸ್ತುತಗೊಳಿಸುವ ಕೆಲಸ ನಡೆಯುತ್ತಿದೆ’ ಎಂದು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್ ಕಳವಳ ವ್ಯಕ್ತಪಡಿಸಿದರು.

ಕರ್ನಾಟಕ ಕಾರ್ಯನಿರತ ‍ಪತ್ರಕರ್ತರ ಸಂಘವು ಜಿಲ್ಲಾ ಪತ್ರಕರ್ತರ ಸಂಘದ ಸಹಕಾರದಲ್ಲಿ ಇಲ್ಲಿನ ಅಗ್ರಹಾರದ ರಾಜೇಂದ್ರ ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನಾಲ್ಕು ವರ್ಷಗಳ ಹಿಂದೆ, ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಿಸುವುದಕ್ಕೆ ಎಂದು ಕೆಲವು ಶಕ್ತಿಗಳು ಹೇಳಿದ್ದವು. ಸಂವಿಧಾನ ಪ್ರಯೋಜನವಿಲ್ಲ. ನಮ್ಮ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಇದೇ ಕಾರಣ ಎಂದಿದ್ದರು. ದೆಹಲಿಯಲ್ಲಿ ಸಂವಿಧಾನದ ಪ್ರತಿಯನ್ನೂ ಸುಟ್ಟಿದ್ದರು. ಆದರೆ, ಎಲ್ಲರ ಪ್ರಯತ್ನದಿಂದಾಗಿ ಸಂವಿಧಾನ ಎಲ್ಲರ ಮನೆ ಮಾತಾಗಿದೆ. ಅದ್ದರಿಂದ, ಅಪಸ್ವರ ಹಿಂದಕ್ಕೆ ಸರಿದಿದೆ. ಈಗ ಸಂವಿಧಾನ ಬದಲಿಸುತ್ತೇವೆ ಎಂದು ಯಾರೂ ನೇರವಾಗಿ ಹೇಳುತ್ತಿಲ್ಲ. ಅದೇ ನಮ್ಮ ಸಮಸ್ಯೆಗಳಿಗೆ–ಸವಾಲುಗಳಿಗೆ ಕಾರಣ ಎಂದೂ ಹೇಳುತ್ತಿಲ್ಲ. ಆದರೆ, ಅಪವ್ಯಾಖ್ಯಾನ–ಅಪ್ರಸ್ತುತ ಮಾಡುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ’ ಎಂದು ವಿಶ್ಲೇಷಿಸಿದರು.

‘ಸಂವಿಧಾನದ ಮೂಲತತ್ವಗಳನ್ನು ಮುಟ್ಟಲಾಗದು ಹಾಗೂ ತಿದ್ದುಪಡಿ ಮಾಡಲಾಗದು. ಪ್ರಜಾಪ್ರಭುತ್ವ, ಜಾತ್ಯತೀತ, ಒಕ್ಕೂಟ ವ್ಯವಸ್ಥೆಯನ್ನು ಕಾಣುತ್ತಿದ್ದೇವೆ. ಆದರೆ, ಸಂಸತ್ತೇ ಸುಪ್ರೀಂ, ಏನು ಬೇಕಾದರೂ ತಿದ್ದುಪಡಿ ಮಾಡಬಹುದು ಎಂದು ಉಪ ರಾಷ್ಟ್ರಪತಿ ಈಚೆಗೆ ಹೇಳಿಕೆ ನೀಡಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸದ್ಯ ಭಾವೋದ್ವೇಗದ ವಿಷಯ ಚರ್ಚೆ ಆಗುತ್ತಿದೆಯೇ ಹೊರತು, ಬದುಕಿಗೆ ಸಂಬಂಧಿಸಿದ್ದು ಆಗುತ್ತಿಲ್ಲ. ಐದು ದಿನಗಳಿಂದಲೂ ಅಧಿವೇಶನ ನಡೆದಿಲ್ಲ. ಇದಕ್ಕಾ ನಾವು ಸಂಸದರನ್ನು ಆಯ್ಕೆ ಮಾಡಿ‌ ಕಳುಹಿಸಿರುವುದು?’ ಎಂದು ಕೇಳಿದರು.

‘ಅನೇಕ ಸ್ವತಂತ್ರ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ಐಟಿ, ಇಡಿ ಮೊದಲಾದವುಗಳಿಂದ ಕಳೆದ ಏಳು ವರ್ಷಗಳಲ್ಲಿ ನಡೆದಿರುವ ಶೇ 98ರಷ್ಟು ದಾಳಿಗಳು ವಿರೋಧ ಪಕ್ಷದವರ ಮೇಲಿನವೇ ಆಗಿವೆ. ಅಂದರೆ, ಆಳುವ ಪಕ್ಷದ ನಾಯಕರೆಲ್ಲಾ ಸತ್ಯಹರಿಶ್ಚಂದ್ರರಾ?. ಶೇ 85ರಷ್ಟು ದಾಳಿಗಳು ಚುನಾವಣೆಯ ಸಂದರ್ಭದಲ್ಲಿ ನಡೆದಿರುವವೇ ಆಗಿವೆ’ ಎಂದು ಕೇಳಿದರು.

‘ಇಡಬ್ಲ್ಯುಎಸ್ ಮೀಸಲಾತಿ ಮೂಲಕ ಸಾಮಾಜಿಕ ನ್ಯಾಯವನ್ನು ಅಪವ್ಯಾಖ್ಯಾನ ಹಾಗೂ ಅಪ್ರಸ್ತುತ ಮಾಡಲಾಗುತ್ತಿದೆ’ ಎಂದು ದೂರಿದರು.

‘ಸಂವಿಧಾನ ನೀಡಿರುವ ಹಲವು ಸ್ವಾತಂತ್ರ್ಯವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಸರ್ಕಾರವನ್ನು ವಿಮರ್ಶೆ ಮಾಡುವಂತೆಯೂ‌ ಇಲ್ಲ. ಪ್ರಕರಣ ದಾಖಲಿಸುತ್ತಾರೆ. ಗೋಲಿಬಾರ್‌, ಎನ್‌ಕೌಂಟರ್‌ನಲ್ಲಿ ಜನರನ್ನು ಸಾಯಿಸುವಂಥ ಕಾಲದಲ್ಲಿ ನಾವಿದ್ದೇವೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ನೀವು–ನಾವು ಕೆಲಸ ಮಾಡಬೇಕಿದೆ’ ಎಂದರು.

‘ಬಹುರಾಷ್ಟ್ರೀಯ ಕಂಪನಿಗಳು, ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಮಾಧ್ಯಮಕ್ಕೆ ಪ್ರವೇಶ ಮಾಡಿದ್ದಾರೆ. ಜನರು ಏನನ್ನು ಓದಬೇಕು ಎನ್ನುವುದನ್ನು ಅವರು ನಿರ್ಧಾರ ಮಾಡುತ್ತಿದ್ದಾರೆ’ ಎಂದು ವಿಷಾದಿಸಿದರು.

‘ಮಾಧ್ಯಮವನ್ನು ನಿಯಂತ್ರಿಸಲು ಕಾನೂನು ಮಾಡಬೇಕು ಎನ್ನುವುದನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಅದು ಸದ್ಬಳಕೆಗಿಂತ ದುರ್ಬಳಕೆಯೇ ಜಾಸ್ತಿಯಾಗುತ್ತದೆ. ಆದ್ದರಿಂದ ಮಾಧ್ಯಮ ಸ್ವಯಂ ನೀತಿಸಂಹಿತೆ ಹಾಕಿಕೊಳ್ಳಬೇಕು. ಜನರ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರಬೇಕು. ಜನರು–ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

‘2018ರಲ್ಲಿ ಸಂವಿಧಾನ ಓದು ಪುಸ್ತಕ ಬರೆದೆ. ರಾಜ್ಯದಾದ್ಯಂತ ಸಂವಿಧಾನ ಓದು ಅಭಿಮಾನ ಮಾಡಿದೆ‌‌. ಸಾವಿರಾರು ಕಾರ್ಯಕ್ರಮ ನಡೆದಿವೆ ಹಾಗೂ ಲಕ್ಷಾಂತರ ಪುಸ್ತಕಗಳು ಮಾರಾಟವಾಗಿವೆ. ಆ ಅಭಿಯಾನದ ದೊಡ್ಡ ಯಶಸ್ಸಿಗೆ ಪತ್ರಕರ್ತರ‌ ಕೊಡುಗೆ ಸಾಕಷ್ಟಿದೆ. ಇದನ್ನು ಗೌರವ, ಪ್ರೀತಿ ಹಾಗೂ ಅಭಿಮಾನದಿಂದ ಹೇಳಿಕೊಳ್ಳುತ್ತೇನೆ’ ಎಂದು ನೆನೆದರು.

‘ಯಾವ ಸಮಾಜದಲ್ಲಿ ಹಿರಿಯರಿಗೆ ಗೌರವ ಸಿಗುವುದಿಲ್ಲವೋ ಅದನ್ನು ನಾಗರಿಕ ಸಮಾಜ ಎನ್ನಲಾಗದು. ಪ್ರತಿಭೆಗೆ ಪುರಸ್ಕಾರ ಸಿಗದಿದ್ದರೆ ಸಮಾಜ ಅಭಿವೃದ್ಧಿ ಆಗುವುದಿಲ್ಲ. ಸಂಘದಿಂದ ‌ಹಿರಿಯರು ಮತ್ತು ಪ್ರತಿಭಾವಂತರನ್ನು ಗೌರವಿಸುತ್ತಿರುವುದು ಶ್ಲಾಘನೀಯ’ ಎಂದರು.

ಪತ್ರಕರ್ತ ಕೃಷ್ಣಪ್ರಸಾದ್ ಮಾತನಾಡಿ, ‘ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಹೆಸರು ಮೇಲೇರುತ್ತಿದೆಯೋ, ಕೆಳಗಿಳಿಯುತ್ತಿದೆಯೋ? ದಕ್ಷಿಣದ ಇತರ ರಾಜ್ಯಗಳಿಗಿಂತ ಹಿಂದೆ ಇದೆಯೋ, ಮುಂದೆಯೋ? ರಾಜ್ಯ ತುಂಬಾ ತೊಂದರೆಯಲ್ಲಿದೆ. ಇದರಲ್ಲಿ ಮಾಧ್ಯಮದ ಪಾತ್ರವೇನು ಎಂದು ಪತ್ರಕರ್ತರು ಯೋಚಿಸಬೇಕು’ ಎಂದರು. ‘ಕರ್ನಾಟಕದ ಮಾಧ್ಯಮ ಸರಿಯಾಗಿ ಕೆಲಸ ಮಾಡಿದ್ದರೆ ಇಲ್ಲಿನ ಸ್ಥಿತಿ ಹೀಗೆ ಇರುತ್ತಿತ್ತಾ?’ ಎಂದೂ ಕೇಳಿದರು.

‘2022ರ ಒಳಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. ಆಗಿದೆಯಾ? ಪ್ರತಿ ಕುಟುಂಬಕ್ಕೂ ಸೂರು ಸಿಕ್ಕಿದೆಯಾ? ಎಲ್ಲರ ಮನೆಗೂ ವಿದ್ಯುತ್ ಸಂಪರ್ಕ ಸಿಕ್ಕಿದೆಯಾ? ಸರ್ಕಾರ ಹೇಳುತ್ತಿರುವುದು ನಿಜವೋ, ಸುಳ್ಳೋ ಎನ್ನುವುದನ್ನು ಜನರಿಗೆ ‌ತಿಳಿಸುವ ಕೆಲಸವನ್ನು ಪತ್ರಕರ್ತರು ಮಾಡಬೇಕು’ ಎಂದು ತಿಳಿಸಿದರು.

ಟಿಎಸ್‌ಆರ್ ಪ್ರಶಸ್ತಿ ಪುರಸ್ಕೃತ ಮಹದೇವಪ್ಪ ಅವರನ್ನು ಗೌರವಿಸಲಾಯಿತು.

ಪತ್ರಕರ್ತ ಜಿ.ಎನ್.ಮೋಹನ್ ಮಾತನಾಡಿದರು. ಮೇಯರ್ ಶಿವಕುಮಾರ್, ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಹಾಗೂ ಪದಾಧಿಕಾರಿಗಳು ಇದ್ದರು.

ಪ್ರಶಸ್ತಿ ಪ್ರದಾನ:

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ (ಗೊಮ್ಮಟ ಮಾಧ್ಯಮ ಪ್ರಶಸ್ತಿ), ಡಿ.ಉಮಾಪತಿ (ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿ), ನಾಗಮಣಿ ಎಸ್.ರಾವ್ (ಯಶೋದಮ್ಮ ಜಿ.ನಾರಾಯಣಪ್ಪ ಪ್ರಶಸ್ತಿ), ಬಿ.ವಿ.ಮಲ್ಲಿಕಾರ್ಜುನಯ್ಯ (ಡಿವಿಜಿ ‍ಪ್ರಶಸ್ತಿ), ಜಿ.ವೀರಣ್ಣ (‍ಪಾಟೀಲ ಪುಟ್ಟಪ್ಪ ಪ್ರಶಸ್ತಿ), ವಸಂತ ನಾಡಿಗೇರ (ಎಸ್.ವಿ.ಜಯಶೀಲರಾವ್ ಪ್ರಶಸ್ತಿ), ಅರುಣ್‌ಕುಮಾರ್‌ ಹಬ್ಬು (ಡಾ.ಎಂ.ಎಂ.ಕಲಬುರ್ಗಿ ಪ್ರಶಸ್ತಿ), ಕೆ.ಎನ್.ರವಿ (ಎಚ್‌.ಕೆ.ವೀರಣ್ಣಗೌಡ ಪ್ರಶಸ್ತಿ), ಚಂದ್ರಶೇಖರ ಸಿದ್ದಪ್ಪ ಜಿಗಜಿನ್ನಿ (ಕಿಡಿ ಶೇಷಪ್ಪ ಪ್ರಶಸ್ತಿ), ಮುಂಜಾನೆ ಸತ್ಯ (ಪಿ.ಆರ್.ರಾಮಯ್ಯ ಪ್ರಶಸ್ತಿ), ಮೊಹಮ್ಮದ್ ಬಾಷ್ಯ ಗೂಳ್ಯಂ (ಎಚ್‌.ಎಸ್.ದೊರೆಸ್ವಾಮಿ ‍ಪ್ರಶಸ್ತಿ), ಎಂ.ಜಿ.ಪ್ರಭಾಕರ (ಪಿ.ರಾಮಯ್ಯ ಪ್ರಶಸ್ತಿ), ಶ್ರೀಶೈಲ ಗು.ಮಠದ (ಮ.ರಾಮಮೂರ್ತಿ ಪ್ರಶಸ್ತಿ), ಎನ್.ಬಸವರಾಜ್‌ (ಗರುಡನಗಿರಿ ನಾಗರಾಜ್ ಪ್ರಶಸ್ತಿ), ಜಿ.ಆರ್.ಸತ್ಯಲಿಂಗರಾಜು (ಮಹದೇವಪ್ರಸಾದ್ ಪ್ರಶಸ್ತಿ).

ನಾಗರಾಜ ಶೆಣೈ (ಶಿವಮೊಗ್ಗ ಮಿಂಚು ಶ್ರೀನಿವಾಸ್ ಪ್ರಶಸ್ತಿ), ಆರ್‌.ಎನ್.ಸಿದ್ದಲಿಂಗಸ್ವಾಮಿ (ಎಚ್‌.ಎಸ್.ರಂಗನಾಥ್ ಪ್ರಶಸ್ತಿ), ಡಾ.ಉಳ್ಳಿಯಡ ಎಂ.ಪೂವಯ್ಯ (ಎಂ.ನಾಗೇಂದ್ರರಾವ್ ‍ಪ್ರಶಸ್ತಿ), ಸಿರಾಜ್‌ ಬಿಸರಳ್ಳಿ (ಅಭಿಮಾನಿ ಪ್ರಕಾಶನ ಪ್ರಶಸ್ತಿ), ಜಯತೀರ್ಥ ಪಾಟೀಲ (ಗುಡಿಹಳ್ಳಿ ನಾಗರಾಜ್‌ ಪ್ರಶಸ್ತಿ), ಎಸ್‌.ಜಿ.ತುಂಗರೇಣುಕ (ಅಪ್ಪಾಜಿಗೌಡ ಸಿನಿಮಾ ಪ್ರಶಸ್ತಿ), ಡಿ.ಎನ್.ಶಾಂಭವಿ (ಗಿರಿಜಮ್ಮ ರುದ್ರ‌ಪ್ಪ ತಾಳಿಕೋಟೆ ಪ್ರಶಸ್ತಿ), ನಾರಾಯಣ ಹೆಗಡೆ (ಟಿ.ಕೆ.ಮಲಗೊಂಡ ಪ್ರಶಸ್ತಿ) ಅವರನ್ನು ಪುರಸ್ಕರಿಸಲಾಯಿತು.

ಜಯಲಕ್ಷ್ಮಿ ಸಂಪತ್‌ಕುಮಾರ್, ಎಚ್‌.ಎನ್.ಆರತಿ, ಎಸ್.ಎಂ.ಜಂಬುಕೇಶ್ವರ ಹಾಗೂ ಕೆ.ದೀಪಕ್ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅತ್ಯುತ್ತಮ ಪುಟ ವಿನ್ಯಾಸಕ್ಕಾಗಿ ಆರ್.ಶಾಮಣ್ಣ ಪ್ರಶಸ್ತಿಯನ್ನು ‘ವಿಜಯ ಕರ್ನಾಟಕ’ಕ್ಕೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT