ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಲಿ ಸಂರಕ್ಷಿತ ಪ್ರದೇಶದಲ್ಲಿ ‘ಭಕ್ತ ಸಾಗರ’

ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಭೀಮನ ಅಮಾವಾಸ್ಯೆ ಪೂಜೆ
Published 4 ಆಗಸ್ಟ್ 2024, 16:45 IST
Last Updated 4 ಆಗಸ್ಟ್ 2024, 16:45 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯ ಸರಗೂರು ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಬೇಲದಕುಪ್ಪೆ ಮಹದೇಶ್ವರಸ್ವಾಮಿ ದೇವಾಲಯಕ್ಕೆ ‘ಭೀಮನ ಅಮಾವಾಸ್ಯೆ’ ಪ್ರಯುಕ್ತ ಸಾವಿರಾರು ಭಕ್ತರು ಹರಿದು ಬಂದರು. 

ಕಾರ್ತೀಕ ಸೇರಿದಂತೆ ವರ್ಷದ ಅಮಾವಾಸ್ಯೆಗಳಲ್ಲೂ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದು, ಅದರಂತೆ ಭೀಮನ ಅಮಾವಾಸ್ಯೆಯ ದಿನವಾದ ಭಾನುವಾರ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದರ್ಶನ ಪಡೆದರು.

ಆಳಲಹಳ್ಳಿ ಚೆಕ್‌ ಪೋಸ್ಟ್‌ನಿಂದ ದೇಗುಲದ ಆವರಣಕ್ಕೆ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿಯ 11 ಬಸ್‌ಗಳು 78ಕ್ಕೂ ಹೆಚ್ಚು ಬಾರಿ ಕಾರ್ಯಾಚರಣೆ (ಟ್ರಿಪ್‌) ಮಾಡಿದ್ದು, 9,800ಕ್ಕೂ ಹೆಚ್ಚು ಭಕ್ತರು ಬಸ್‌ನಲ್ಲಿ ಪ್ರಯಾಣಿಸಿದರು.

ಮಣ್ಣಿನಲ್ಲಿ ಹುದುಗಿದ ಬಸ್‌ ಚಕ್ರಗಳು: ಆಳಲಹಳ್ಳಿ ಚೆಕ್‌ ಪೋಸ್ಟ್‌ನಿಂದ ದೇಗುಲಕ್ಕಿರುವ ರಸ್ತೆಯು ಕೆಸರುಮಯವಾಗಿತ್ತು. ಮಳೆಯಾದ್ದರಿಂದ ಕೆಸರು ನಿಂತಿತ್ತು. ಈ ವೇಳೆ ಬಸ್‌ಗಳು ಕೆಸರಿನಲ್ಲಿ ಸಿಲುಕಿದವು. ಭಕ್ತರೇ ಬಸ್‌ ಅನ್ನು ತಳ್ಳಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಒಂದು ಬಸ್‌ ಅಂತೂ ಕೆಸರು ಗುಂಡಿಯಿಂದ ಹೊರಬರಲಾಗಲಿಲ್ಲ.

90 ಸಾವಿರಕ್ಕೂ ಹೆಚ್ಚು ಭಕ್ತರು ಬಂದಿದ್ದರಿಂದ ಕೆಲವರು ನಡಿಗೆಯಲ್ಲಿಯೇ ದೇವಾಲಯಕ್ಕೆ ತೆರಳಿದರು.

ಖಾಸಗಿ ವಾಹನ ಬಿಡಲು ಆಗ್ರಹ: ಕಾಡಂಚಿನಿಂದ ದೇಗುಲಕ್ಕೆ 6.5 ಕಿ.ಮೀ ದೂರವಿದ್ದು, ಖಾಸಗಿ ವಾಹನವನ್ನೂ ಬಿಡಬೇಕು ಎಂದು ಒತ್ತಾಯಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. ‘ವಯಸ್ಸಾದವರು, ಮಕ್ಕಳೊಂದಿಗೆ ದೇಗುಲದವರೆಗೆ ತೆರಳಲು ಕಷ್ಟವಾಗುತ್ತದೆ. ಬಸ್‌ ವ್ಯವಸ್ಥೆ ಜಾಸ್ತಿ ಮಾಡಿ’ ಎಂದು ಕೋರಿದ ವಿಡಿಯೊ ಇದೆ.

ಸ್ಥಳಾಂತರಕ್ಕೆ ಆಗ್ರಹ: ಜಾತ್ರೆ ಸೇರಿದಂತೆ ಧಾರ್ಮಿಕ ಆಚರಣೆಗಳನ್ನೂ ಅರಣ್ಯದ ಕೋರ್‌ ವಲಯದ ಹೊರಗಡೆ ಸ್ಥಳಾಂತರಿಸಬೇಕೆಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು (‌ಎನ್‌ಟಿಸಿಎ) ಶಿಫಾರಸು ಮಾಡಿದ್ದರೂ, ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಆಕ್ಷೇಪವನ್ನೂ ಪರಿಸರವಾದಿಗಳೂ ಈ ವೇಳೆ ವ್ಯಕ್ತಪಡಿಸಿದ್ದಾರೆ.

‘ಹುಲಿ ಸಂರಕ್ಷಿತ ಪ‍್ರದೇಶವಾದ್ದರಿಂದ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಧಾರ್ಮಿಕ ಆಚರಣೆಗಳನ್ನು ಕಾಡಂಚಿಗೆ ವರ್ಗಾಯಿಸಬೇಕು. ಈ ಬಗ್ಗೆ ಎನ್‌ಟಿಸಿಎ ಶಿಫಾರಸು ಮಾಡಿದೆ’ ಎಂದು ಗಿರಿಧರ ಕುಲಕರ್ಣಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅರಣ್ಯದಲ್ಲಿನ ದೇವಾಲಯಕ್ಕೆ ನಡಿಗೆಯಲ್ಲೂ ತೆರಳುವುದರಿಂದ ಮಾನವ– ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗುತ್ತದೆ. ಆನೆಗಳು, ಹುಲಿ ದಾಳಿಯಾದರೆ ಏನು ಗತಿ? ಅಲ್ಲದೆ, ಪ್ಲಾಸ್ಟಿಕ್‌ ವಸ್ತುಗಳನ್ನು ಭಕ್ತರು ತರುತ್ತಾರೆ. ಮಾಲಿನ್ಯವೂ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು. 

‘ಮುಜರಾಯಿ, ಅರಣ್ಯ ಹಾಗೂ ಕಂದಾಯ ಇಲಾಖೆಗಳು ಕಾಡಂಚಿನಲ್ಲಿ ಜಾಗ ಖರೀದಿಸಿ ಧಾರ್ಮಿಕ ಆಚರಣೆಗಳು ಅಲ್ಲಿಯೇ ನಡೆಯುವಂತೆ ಮಾಡಬೇಕಿದೆ’ ಎಂದು ಹೇಳಿದರು.

ಕಾಡಿನ ರಸ್ತೆಯ ಕೆಸರುಗುಂಡಿಯಲ್ಲಿ ಹೂತಿದ್ದ ಕೆಎಸ್‌ಆರ್‌ಟಿಸಿ ಬಸ್‌
ಕಾಡಿನ ರಸ್ತೆಯ ಕೆಸರುಗುಂಡಿಯಲ್ಲಿ ಹೂತಿದ್ದ ಕೆಎಸ್‌ಆರ್‌ಟಿಸಿ ಬಸ್‌
ಹೆಚ್ಚಿನ ಬಸ್‌ ನಿಯೋಜಿಸುವಂತೆ ಹಾಗೂ ಖಾಸಗಿ ವಾಹನ ಪ್ರವೇಶಕ್ಕೆ ಅವಕಾಶ ನೀಡುವಂತೆ ಭಕ್ತರು ಆಗ್ರಹಿಸಿದರು
ಹೆಚ್ಚಿನ ಬಸ್‌ ನಿಯೋಜಿಸುವಂತೆ ಹಾಗೂ ಖಾಸಗಿ ವಾಹನ ಪ್ರವೇಶಕ್ಕೆ ಅವಕಾಶ ನೀಡುವಂತೆ ಭಕ್ತರು ಆಗ್ರಹಿಸಿದರು
ಭಕ್ತರು ದೇಗುಲಕ್ಕೆ ನಡಿಗೆಯಲ್ಲಿಯೇ ಕಾಡಿನ ಹಾದಿಯಲ್ಲಿ ತೆರಳಿದರು
ಭಕ್ತರು ದೇಗುಲಕ್ಕೆ ನಡಿಗೆಯಲ್ಲಿಯೇ ಕಾಡಿನ ಹಾದಿಯಲ್ಲಿ ತೆರಳಿದರು

ಎಲ್ಲಿದೆ ದೇಗುಲ? ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವಲಯದಲ್ಲಿ ಬೇಲದಕುಪ್ಪೆ ಮಹದೇಶ್ವರ ಸ್ವಾಮಿ ದೇವಾಲಯವಿದೆ. ಸರಗೂರು ತಾಲ್ಲೂಕಿನ ಕಂದಲಿಕೆ ಹೋಬಳಿಯ ಆಳಲಹಳ್ಳಿ ಚೆಕ್‌ಪೋಸ್ಟ್‌ನಿಂದ 6 ಕಿ.ಮೀ. ಕಾಡಿನ ಒಳಗಿದೆ. ಉದ್ಭವ ಲಿಂಗವಿರುವ ದೇಗುಲ ದರ್ಶನಕ್ಕೆ ಭಕ್ತರು ವರ್ಷವಿಡೀ ಕಾಡಿನೊಳಗೆ ಬರುತ್ತಾರೆ. ಕಡೇ ಕಾರ್ತಿಕ ಸೋಮವಾರದಲ್ಲಿ ದೊಡ್ಡ ಜಾತ್ರೆಯು ನಡೆಯುತ್ತದೆ. ಕಳೆದ ವರ್ಷದ ಜಾತ್ರೆಗೆ 4 ಲಕ್ಷ ಭಕ್ತರು ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT