ಮೈಸೂರು: ‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಸುಗಮ ಸಂಚಾರಕ್ಕೆ ಸುರಕ್ಷಿತ ಕ್ರಮ ಕೈಗೊಳ್ಳದೇ ರಾಜಕೀಯ ಉದ್ದೇಶಕ್ಕಾಗಿ ತರಾತುರಿಯಲ್ಲಿ ಉದ್ಘಾಟಿಸಲಾಗಿದೆ’ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಆರೋಪಿಸಿದರು.
ಇಲ್ಲಿ ಶನಿವಾರ ಸುದ್ದಿಗಾರೊಂದಿಗೆ ಮಾತನಾಡಿ, ‘ಸೂಚನಾ ಫಲಕಗಳ ಅಳವಡಿಕೆಯೂ ಸರಿಯಾಗಿ ಆಗಿಲ್ಲ. ಈ ಬಗ್ಗೆ ಸಂಚಾರ ವಿಭಾಗದ ಎಡಿಜಿಪಿ ಮೌಖಿಕ ದೂರು ನೀಡಿದ್ದಾರೆ. ಹೆದ್ದಾರಿಯಲ್ಲಿ ದರೋಡೆ ಪ್ರಕರಣಗಳೂ ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಕ್ರಮ ವಹಿಸಿದ್ದೇವೆ. ಹೆದ್ದಾರಿ ಉದ್ಘಾಟನೆಯಾದ ಕೆಲವೇ ತಿಂಗಳಲ್ಲಿ ಉಂಟಾಗಿರುವ ಅಪಘಾತ ಹಾಗೂ ಸಾವಿನ ಸಂಖ್ಯೆಯು ಇಲ್ಲಿನ ಲೋಪವನ್ನು ಎತ್ತಿ ಹಿಡಿಯುತ್ತದೆ. ಮದ್ಯ ಸೇವನೆ ಮಾಡಿ ವಾಹನ ಚಾಲನೆಯ ವಿಚಾರವಾಗಿಯೂ ದೂರುಗಳು ಬಂದಿವೆ. ಆ ಬಗ್ಗೆಯೂ ಕ್ರಮ ತೆಗೆದುಕೊಳ್ಳಲಿದ್ದೇವೆ. ಜನರಿಗೆ ತೊಂದರೆಯಾಗದಂತೆ ಸುರಕ್ಷತಾ ಕ್ರಮಗಳ ಪಾಲನೆಗೆ ಸೂಚಿಸಲಾಗುವುದು’ ಎಂದು ತಿಳಿಸಿದರು.
ನಗರ ಹಾಗೂ ದಕ್ಷಿಣ ವಲಯ ವ್ಯಾಪ್ತಿಯ ಅಧಿಕಾರಿಗಳ ಪ್ರತ್ಯೇಕವಾಗಿ ಸಭೆ ನಡೆಸಿದ ಸಚಿವರು, ಅಪರಾಧ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ಸುಳ್ಳು ಸುದ್ದಿಗಳನ್ನು ಹರಡುವವರ ಬಗ್ಗೆಯೂ ನಿಗಾ ಇಡುವಂತೆ ಸೂಚಿಸಿದರು.
ಐಜಿ ಡಾ. ಎಂ.ಬಿ.ಬೋರಲಿಂಗಯ್ಯ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಎಂ.ಮುತ್ತುರಾಜು, ಜಾಹ್ನವಿ, ಎ.ಮಾರುತಿ ಸೇರಿದಂತೆ ಅಧಿಕಾರಿಗಳು ಇದ್ದರು.
ಗೃಹಸಚಿವರ ಜಿಲ್ಲಾ ಪ್ರವಾಸ ಅರಮನೆ ಹಾಗೂ ಸುತ್ತೂರು ಮಠಕ್ಕೆ ಭೇಟಿ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಭಾಗಿ
ಅರಮನೆಯಲ್ಲಿ ಗಂಧದ ಗಿಡ ನೆಟ್ಟರು ಮೈಸೂರು ಅರಮನೆಗೆ ಪತ್ನಿ ಹಾಗೂ ಮಕ್ಕಳೊಂದಿಗೆ ಭೇಟಿ ನೀಡಿದ ಸಚಿವರನ್ನು ಆಡಳಿತ ಮಂಡಳಿಯವರು ಸ್ವಾಗತಿಸಿದರು. ಭೇಟಿಯ ನೆನಪಿಗಾಗಿ ಗಂಧದ ಗಿಡ ನೆಟ್ಟರು. ಅರಮನೆಯ ಒಳಭಾಗದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದರು. ಸುತ್ತೂರು ಮಠಕ್ಕೆ ಭೇಟಿ: ಸಚಿವರು ಕುಟುಂಬ ಸಮೇತರಾಗಿ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದರು. ಇದಕ್ಕೂ ಮುನ್ನ ಚಾಮುಂಡಿಬೆಟ್ಟ ಹಾಗೂ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮನೆಗೆ ಭೇಟಿ ನೀಡಿದರು. ಶಾಸಕರಾದ ತನ್ವೀರ್ ಸೇಠ್ ದರ್ಶನ್ ಧ್ರುವನಾರಾಯಣ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಗೂ ಪದಾಧಿಕಾರಿಗಳು ಇದ್ದರು.
‘ಔರಾದ್ಕರ್ ವರದಿ ಯಥಾವತ್ ಜಾರಿ ಕಷ್ಟ‘ ಮೈಸೂರು: ‘ಔರಾದ್ಕರ್ ವರದಿಯ ಶಿಫಾರಸು ಯಥಾವತ್ ಜಾರಿಗೊಳಿಸುವುದು ಕಷ್ಟ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು. ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು ‘ಪೊಲೀಸರಿಗೆ ವಾರದ ರಜೆ ಕೊಡಬೇಕು ಅದನ್ನು ಅನುಷ್ಠಾನಗೊಳಿಸುತ್ತೇವೆ. ರಾತ್ರಿ ಪಾಳಿ ಮಾಡಿದವರಿಗೆ ವಿಶೇಷ ಭತ್ಯೆ ಕೊಡುವ ವಿಚಾರದಲ್ಲೂ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು. ‘ರಾಜ್ಯದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆ ಖಾಲಿ ಇವೆ. ಅವುಗಳ ಭರ್ತಿ ಕಾರ್ಯ ಶುರುವಾಗಿದೆ. ಪೊಲೀಸ್ ಇಲಾಖೆಯಲ್ಲಿ 15 ಸಾವಿರ ಹುದ್ದೆಗಳು ಖಾಲಿ ಇವೆ. ಮೊದಲ ಹಂತದಲ್ಲಿ 4 ಸಾವಿರ ಪೊಲೀಸ್ ಕಾನ್‌ಸ್ಟೆಬಲ್ 400 ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ಭರ್ತಿಗೆ ಮುಂದಾಗಿದ್ದೇವೆ’ ಎಂದರು. ‘ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಅಕ್ರಮ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಸರ್ಕಾರದ ಅಭಿಪ್ರಾಯವನ್ನು ಕೇಳಿದೆ. ಜುಲೈ 5ರಂದು ನ್ಯಾಯಾಲಯಕ್ಕೆ ವರದಿ ನೀಡಲಿದ್ದೇವೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.