ಎಚ್.ಡಿ.ಕೋಟೆ: ‘ಅರಣ್ಯದಲ್ಲಿ ವಾಸ ಮಾಡುತ್ತಾ ಕಾಡು ಉಳಿಸಿ ನಾಡು ಬೆಳೆಸಲು ಆದಿವಾಸಿ ಸಮುದಾಯ ಪ್ರಮುಖ ಪಾತ್ರ ವಹಿಸಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭನದಲ್ಲಿ ನಡೆದ 30ನೇ ವರ್ಷದ ವಿಶ್ವ ಆದಿವಾಸಿ ದಿನಾಚರಣೆಯನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮ ಸರ್ಕಾರದಿಂದ ಆಚರಿಸಲು ನವೆಂಬರ್ ತಿಂಗಳಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ತಾಲ್ಲೂಕಿನಲ್ಲಿ ನಡೆಸಲು ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲಾಗುವುದು. ₹35 ಲಕ್ಷ ವೆಚ್ಚದಲ್ಲಿ ಬಿರ್ಸಾ ಮುಂಡಾ ಪುತ್ಥಳಿಯನ್ನು ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರದ ಬಳಿ ನಿರ್ಮಿಸಲಾಗುವುದು ಎಂದರು.
ಕಂದೇದಾಲ ಶ್ರೀನಿವಾಸ ಮಾತನಾಡಿ, ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಬಿರ್ಸಾ ಮುಂಡಾ ಸಹ ತಮ್ಮ ಜನಾಂಗಕ್ಕೆ ಆಗುತ್ತಿದ್ದ ಅನ್ಯಾಯ ಖಂಡಿಸಿ ಕ್ರೈಸ್ತ ಧರ್ಮ ತೊರೆದು ತಮ್ಮ ಮುಂಡ ಜನಾಂಗದ ಏಳಿಗೆಗೆ ಹೋರಾಟ ಮಾಡಿದರು. ಆ ಮೂಲಕ ನಮ್ಮ ಭೂಮಿ ನಮ್ಮ ಹಕ್ಕು ಎಂಬ ಹೋರಾಟ ರೂಪಿಸಿ, ಬಿಲ್ಲು ಬಾಣ ಹಿಡಿದು ತಮ್ಮ ಯುವಕರ ಪಡೆ ಕಟ್ಟಿ ಹೋರಾಟ ಮಾಡಿದರು. ಬ್ರಿಟಿಷರಿಂದ ಜೈಲು ಪಾಲಾಗಿ ಜೈಲಿನಲ್ಲಿಯೇ ಮರಣ ಹೊಂದಿದರು ಎಂದು ವಿವರಿಸಿದರು.
ಉಡುಪಿಯ ಆದಿವಾಸಿ ಮುಖಂಡರಾದ ಸುಶೀಲಾ ಮಾತನಾಡಿ, ‘ನಮ್ಮ ಮಕ್ಕಳು ಕಾಡಿನಲ್ಲಿದ್ದರೂ ಸಹ ತಮ್ಮ ಭಾಷೆ ಹಾಗೂ ಸಂಸ್ಕೃತಿ ಮರೆಯಬಾರದು. ಕುಲಕಸುಬು ಮಾಡುತ್ತಾ ಶಿಕ್ಷಣ ಪಡೆಯಬೇಕು’ ಎಂದು ಕಿವಿಮಾತು ಹೇಳಿದರು.
‘ಕುಡಿತದ ಚಟದಿಂದ ನಮ್ಮ ಜನಾಂಗ ನಾವು ಪಾರು ಮಾಡಬೇಕು. ಮಕ್ಕಳನ್ನ ಶಾಲೆಗೆ ಕಳುಹಿಸದಿದ್ದರೆ, ನೀವು ನಿಮ್ಮ ಮಕ್ಕಳಿಗೆ ಮಾಡುವ ದ್ರೋಹ’ ಎಂದರು.
ಸಮುದಾಯದ ಪದವಿ ಮತ್ತು ಉನ್ನತ ವ್ಯಾಸಂಗಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಾದ ಮಾನ್ಯ, ನೇತ್ರ, ಶಂಕರ, ವಿಸ್ಮಿತ, ಮಹೇಶ, ಗೀತಾ, ರೋಷಣಿ, ಮಧುಕೃಷ್ಣ, ಅನುರಾಧ, ಅಪೂರ್ವ ಇವರುಗಳನ್ನು ಅಭಿನಂದಿಸಲಾಯಿತು.
ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಿಂದ ಅಂಬೇಡ್ಕರ್ ಭವನದವರೆಗೆ ವಿವಿಧ ಕಲಾ ತಂಡಗಳ ಮೂಲಕ ಮೆರವಣಿಗೆ ನಡೆಸಲಾಯಿತು.
ರಾಜ್ಯ ಲ್ಯಾಂಪ್ಸ್ ಅಧ್ಯಕ್ಷ ಕಾವೇರ, ತಾಲ್ಲೂಕು ಲ್ಯಾಂಪ್ಸ್ ಅಧ್ಯಕ್ಷ ಕಾಳಕಲ್ಕರ್, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಡ್ಡರಗುಡಿ ಚಿಕ್ಕಣ್ಣ, ತಹಶೀಲ್ದಾರ್ ಶ್ರೀನಿವಾಸ, ಆದಿವಾಸಿ ಮುಖಂಡ ಪುಟ್ಟ ಬಸವಯ್ಯ, ಶೈಲೇಂದ್ರ, ಸತೀಶ್ ಗೌಡ, ಪರಶಿವಮೂರ್ತಿ, ಸೋಮಣ್ಣ, ಪಿ.ರವಿ, ಜ್ಯೋತಿ, ಮಾರಯ್ಯ, ಯೋಗೇಂದ್ರ, ಮಹೇಶ್, ಜೀವಿಕ ಬಸವರಾಜು, ವೆಂಕಟಸ್ವಾಮಿ, ಜವರಯ್ಯ, ಬಿ.ವಿ.ಬಸವರಾಜು, ಸುಬ್ರಮಣ್ಯ ಇದ್ದರು.
‘ಭವನ ಹೆಸರು ಬದಲಾವಣೆಗೆ ಸರ್ಕಾರಕ್ಕೆ ಮನವಿ’
‘ಆಶ್ರಮ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲು ಸರ್ಕಾರಕ್ಕೆ ಒತ್ತಾಯಿಸಲಾಗುತ್ತದೆ. ಆದಿವಾಸಿ ಭವನದ ಬದಲಿಗೆ ಬಿರ್ಸಾ ಮುಂಡಾ ಭವನ ಎಂದು ನಾಮಕರಣ ಮಾಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.