ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಮೈಸೂರು ಚಲೋ' ಸಮಾರೋಪ ಇಂದು: ಮುಖ್ಯಮಂತ್ರಿ ತವರಲ್ಲಿ ವಿಪಕ್ಷಗಳ ರಣಕಹಳೆಗೆ ಸಜ್ಜು

Published 9 ಆಗಸ್ಟ್ 2024, 23:30 IST
Last Updated 9 ಆಗಸ್ಟ್ 2024, 23:30 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿ–ಜೆಡಿಎಸ್‌ನ ‘ಮೈಸೂರು ಚಲೋ’ ಪಾದಯಾತ್ರೆಯು ಕ್ಲೈಮ್ಯಾಕ್ಸ್‌ ಹಂತ ತಲುಪಿದ್ದು, ಮುಖ್ಯಮಂತ್ರಿ ತವರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ರಣಕಹಳೆಗೆ ವೇದಿಕೆ ಸಜ್ಜಾಗಿದೆ.

ಶುಕ್ರವಾರ ಕಾಂಗ್ರೆಸ್ ಸರ್ಕಾರ ಶಕ್ತಿ ಪ್ರದರ್ಶನ ನಡೆಸಿದ ಇಲ್ಲಿನ ಮಹಾರಾಜ ಕಾಲೇಜು ಮೈದಾನದ ವೇದಿಕೆಯಲ್ಲೇ ಶನಿವಾರ ಬಿಜೆಪಿ–ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾವೇಶವೂ ನಡೆಯಲಿದೆ. ಮುಖ್ಯಮಂತ್ರಿ, ಸಚಿವರ ವಾಗ್ದಾಳಿಗೆ ಅಲ್ಲಿಯೇ ಉತ್ತರ ನೀಡಲು ವಿರೋಧ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಮೂಲಕ ಹೋರಾಟ ಸಮಾಪ್ತಿಗೊಳಿಸುವ ಉತ್ಸಾಹದಲ್ಲಿದ್ದಾರೆ. ಇದು ಮತ್ತೊಂದು ಸುತ್ತಿನ ಮಾತಿನ ಸಮರಕ್ಕೂ ಸಾಕ್ಷಿಯಾಗಲಿದೆ.

ಆಗಸ್ಟ್‌ 3ರಂದು ಬೆಂಗಳೂರಿನ ಕೆಂಗೇರಿ ಸಮೀಪ ಆರಂಭಗೊಂಡ ಪಾದಯಾತ್ರೆಯು ಏಳು ದಿನಗಳ ಕಾಲ ನಡೆದಿದೆ. 140 ಕಿ.ಮೀ.ಗೂ ಹೆಚ್ಚು ದೂರ ಹೆಜ್ಜೆ ಹಾಕಿರುವ ನಾಯಕರು, ದಣವು ಮರೆತು ಸರ್ಕಾರವನ್ನು ಹಣಿಯುವ ತಂತ್ರ ರೂಪಿಸುತ್ತಿದ್ದಾರೆ. ಆರಂಭದಲ್ಲಿ, ಪಾದಯಾತ್ರೆಯೂ ತಮಗೂ ಸಂಬಂಧವೇ ಇಲ್ಲ ಎಂದು ಮುನಿಸು ತೋರಿದ್ದ ಜೆಡಿಎಸ್ ನಾಯಕರು ನಂತರ, ಬಿಜೆಪಿ ಹೈಕಮಾಂಡ್‌ಗೆ ತಲೆಬಾಗಿ ಹೆಜ್ಜೆ ಇಟ್ಟಿದ್ದಾರೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮುನಿಸು ಮುಂದುವರಿದಿದೆ.

ಆಷಾಢದ ತಂಗಾಳಿಯು ಪಾದಯಾತ್ರಿಗರ ದಣಿವನ್ನು ತಣಿಸಿದ್ದು, ಇದೀಗ ಶ್ರಾವಣದ ಹೊಸ ಗಾಳಿ ಜೊತೆಗೆ ರಾಜ್ಯದಲ್ಲಿ ಹೊಸ ಸರ್ಕಾರವೂ ಬರಲಿ ಎಂಬ ಎಂಬ ಬೇಡಿಕೆ ಮುಂದಿಟ್ಟು ಹೋರಾಟ ಸಮಾರೋಪಗೊಳ್ಳುತ್ತಿದೆ. ತಿಂಗಳುಗಳ ಹಿಂದಷ್ಟೇ ಲೋಕಸಭೆ ಚುನಾವಣೆ ಕಂಡಿರುವ ಜನರಿಗೆ ವಿಪಕ್ಷಗಳ ಈ ಯಾತ್ರೆಯು ಮತ್ತೆ ಚುನಾವಣೆಯನ್ನು ನೆನಪಿಗೆ ತಂದಿದೆ. ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ತೋರಿರುವ ಪಾದಯಾತ್ರೆಯ ಉದ್ದಕ್ಕೂ ಬರೀ ಸರ್ಕಾರದ ವಿರುದ್ಧದ ವಾಗ್ದಾಳಿಯೇ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವೇ ಇಡೀ ಯಾತ್ರೆಯನ್ನು ಆವರಿಸಿದೆ.

ವಿಪಕ್ಷ ನಾಯಕ ಆರ್. ಅಶೋಕ್‌, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವರ್ಚಸ್ಸು ವೃದ್ಧಿಗೆ ದಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೂಲಕ ಜೆಡಿಎಸ್‌ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಪ್ರಯತ್ನಿಸಿದ್ದರೆ, ಬಿಜೆಪಿಯು ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ.

ಶನಿವಾರದ ಸಮಾವೇಶದಲ್ಲಿ ‘ಮೈತ್ರಿ‘ ನಾಯಕರ ದಂಡೇ ಭಾಗವಹಿಸಲಿದೆ. ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಮೈಸೂರಿನ ನೆರೆ–ಹೊರೆಯ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆ ತರಲಾಗುತ್ತಿದೆ. 

ವರುಣನ ಆಗಮನ:
ಶುಕ್ರವಾರ ಕಾಂಗ್ರೆಸ್ ಸಮಾವೇಶ ಮುಗಿದ ಕೆಲವೇ ಗಂಟೆಯಲ್ಲಿ ಮೈಸೂರಿನಲ್ಲಿ ಜೋರು ಮಳೆಯಾಗಿದ್ದು, ಮಹಾರಾಜ ಕಾಲೇಜು ಮೈದಾನವೂ ಮಳೆಯಲ್ಲಿ ತೋಯ್ದಿತು. ಸಮಾವೇಶ ಪೂರ್ಣಗೊಳ್ಳುತ್ತಲೇ ಕಾಂಗ್ರೆಸ್ ನಾಯಕರ ಫ್ಲೆಕ್ಸ್‌ಗಳನ್ನು ತರಾತುರಿಯಲ್ಲಿ ಬಿಚ್ಚಲಾಯಿತು. ಅಲ್ಲಿ ಬಿಜೆಪಿ–ಜೆಡಿಎಸ್ ಫ್ಲೆಕ್ಸ್‌ ಹಾಗೂ ಬಾವುಟಗಳು ತಲೆ ಎತ್ತಿದವು. ಕಾಂಗ್ರೆಸ್‌ಮಯವಾಗಿದ್ದ ಬೃಹತ್‌ ವೇದಿಕೆಯನ್ನು ಮರುವಿನ್ಯಾಸಗೊಳಿಸುವ ಕಾರ್ಯವೂ ಭರದಿಂದ ಸಾಗಿತ್ತು.
ವಿಪಕ್ಷಗಳ ಬಗ್ಗೆ ಸಿದ್ದರಾಮಯ್ಯ ಆಡಿದ ಮಾತುಗಳಿಗೆ ಸಮಾವೇಶದಲ್ಲಿ ತಕ್ಕ ಉತ್ತರ ಕೊಡುತ್ತೇವೆ. ಸರ್ಕಾರದ ಬಗ್ಗೆ ಇರುವ ಜನಾಕ್ರೋಶ ಏನೆಂಬುದು ಅಲ್ಲಿ ತಿಳಿಯಲಿದೆ
ಆರ್‌. ಅಶೋಕ್‌ ವಿಪಕ್ಷ ನಾಯಕ
ಅನುಮತಿಗೆ ವಿಳಂಬ: ಮಳೆಯಲ್ಲೂ ಹೆಜ್ಜೆ
‘ಮೈಸೂರು ಚಲೋ’ ಪಾದಯಾತ್ರೆಯು ಶುಕ್ರವಾರ ಸಂಜೆ ನಗರದ ಹೊರವಲಯಕ್ಕೆ ಬಂದಿದ್ದು ನಗರ ಪ್ರವೇಶಕ್ಕೆ ಪೊಲೀಸರು ಕೆಲಹೊತ್ತು ಅನುಮತಿ ನೀಡಲಿಲ್ಲ. ಹೀಗಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರಿಗಳು ಬೆಂಗಳೂರು–ಮೈಸೂರು ಹೆದ್ದಾರಿಯಲ್ಲೇ ಕುಳಿತರು. ಮೈಸೂರು ಪ್ರವೇಶಕ್ಕೆ ನಗರ ಪೊಲೀಸರು ರಾತ್ರಿ 7ರ ಬಳಿಕ ಅನುಮತಿ ನೀಡಿದ್ದರು. ಆದರೆ ಸಂಜೆ 5ರ ವೇಳೆಗೆಲ್ಲ ಪಾದಯಾತ್ರೆ ನಗರದ ಹೊರವಲಯಕ್ಕೆ ಬಂದಿದ್ದು ಆಗಿನ್ನೂ ಕಾಂಗ್ರೆಸ್ ಸಮಾವೇಶಕ್ಕೆ ಬಂದವರು ಹೊರ ಹೋಗುತ್ತಿದ್ದುದರಿಂದ ಅನುಮತಿ ನೀಡಲಿಲ್ಲ. ನಂತರ ಪಾದಯಾತ್ರೆ ಮುಂದುವರಿದಿದ್ದು ಮಬ್ಬುಗತ್ತಲಲ್ಲಿ ಮಳೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳು ರಾತ್ರಿ 8ರ ವೇಳೆಗೆ ನಗರದ ಜೆ.ಕೆ. ಮೈದಾನಕ್ಕೆ ಬಂದು ತಲುಪಿದರು. ಏಳನೇ ದಿನದ ಪಾದಯಾತ್ರೆಯು ಶುಕ್ರವಾರ 20 ಕಿಲೋಮೀಟರ್‌ನಷ್ಟು ಕ್ರಮಿಸಿತು. ಆರಂಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪ್ರತ್ಯೇಕವಾಗಿ ಹೊರಟಿದ್ದು ನಂತರ ಒಂದಾದವು. ಮಹಿಳೆಯರು ಒನಕೆ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್‌ ಮೈಸೂರು–ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಜಿ ಸಂಸದ ಪ್ರತಾಪ ಸಿಂಹ ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಟಿ.ಎಸ್. ಶ್ರೀವತ್ಸ ಜಿ.ಡಿ. ಹರೀಶ್‌ ಗೌಡ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಿ.ಎಸ್. ಶ್ರೀರಾಮುಲು ಮತ್ತಿತರರು ಜೊತೆಯಾಗಿ ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT