ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ಪ್ರತಿಭಟನೆಗಳಿಗೆ ಕೇಂದ್ರವಾದ ಜಿಲ್ಲಾ ಪಂಚಾಯಿತಿ

ರಾಜಕೀಯ ಪಕ್ಷಗಳ ಕಾರ್ಯಕರ್ತರು, ರೈತ ಮುಖಂಡರ ಪ್ರತಿಭಟನೆ
Published : 27 ಸೆಪ್ಟೆಂಬರ್ 2024, 15:56 IST
Last Updated : 27 ಸೆಪ್ಟೆಂಬರ್ 2024, 15:56 IST
ಫಾಲೋ ಮಾಡಿ
Comments

ಮೈಸೂರು: ಜಿಲ್ಲಾ ಪಂಚಾಯಿತಿ ಸಭಾಂಗ‌ಣದಲ್ಲಿ ನಿಗದಿಯಾಗಿದ್ದ ಕೆಡಿಪಿ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರಿಂದ ಜಿಲ್ಲಾ ಪಂಚಾಯಿತಿ ಆವರಣ ಶುಕ್ರವಾರ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.

ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರೆ, ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿ ‘ಅಹಿಂದ’ ಮುಖಂಡರು ‘ಮುಖ್ಯಮಂತ್ರಿ ಜೊತೆಗೆ ನಾವಿದ್ದೇವೆ’ ಎಂದು ಸಾರಿ ಹೇಳಿದರು. ರೈತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಪ್ರತ್ಯೇಕವಾಗಿ ಪ್ರತಿಭಟಿಸಿದರು.

ಜಿ.ಪಂ ಮುತ್ತಿಗೆ ಯತ್ನ: ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಚಾಮರಾಜ ಮೊಹಲ್ಲಾದ ವಿಷ್ಣುವರ್ಧನ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಭ್ರಷ್ಟ ಮುಖ್ಯಮಂತ್ರಿಗೆ ಧಿಕ್ಕಾರ’, ‘ಅಯ್ಯಯ್ಯೋ ಅನ್ಯಾಯ’, ‘ಎಲ್ಲಿಯ ತನಕ ಹೋರಾಟ ಗೆಲ್ಲುವ ತನಕ ಹೋರಾಟ’, ‘₹4 ಸಾವಿರ ಕೋಟಿ ಹಗರಣ ನಡೆಸಿದ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ’, ‘ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ’, ‘ತನಿಖೆ ಎದುರಿಸಲು ಸಿದ್ಧರಾಗಿ ಸಿದ್ದಾರಾಮಯ್ಯನವರೇ’, ‘ಹೈಕೋರ್ಟ್ ತೀರ್ಪನ್ನು ಪೊಲಿಟಿಕಲ್ ಜಡ್ಜ್‌ಮೆಂಟ್‌ ಎಂದ ಜಮೀರ್ ಅಹಮದ್‌ಗೆ ಧಿಕ್ಕಾರ’, ‘ಬಂಧಿಸಿ, ಬಂಧಿಸಿ ಸಿದ್ದರಾಮಯ್ಯರನ್ನು ಬಂಧಿಸಿ’ ಎಂಬ ಬರಹವುಳ್ಳ ಫಲಕ ಪ್ರದರ್ಶಿಸಿದರು.

ಕೇಂದ್ರ ಮಾಜಿ ಸಚಿವ ಭಗವಾನ್‌ ಖೂಬಾ ಮಾತನಾಡಿ, ‘ಜನಪ್ರತಿನಿಧಿ ನ್ಯಾಯಾಲಯವು ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಷ್ಪಕ್ಷಪಾತ ತನಿಖೆಗಾಗಿ ರಾಜೀನಾಮೆ ನೀಡಬೇಕಿತ್ತು. ಆದರೆ, ಅವರು ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ನ್ಯಾಯಾಲಯದ ಸೂಚನೆಯನ್ನೂ ಧಿಕ್ಕರಿಸಿ ಮುಖ್ಯಮಂತ್ರಿಯ ರಕ್ಷಣೆಗೆ ನಿಲ್ಲುವ ಮೂಲಕ ಕಾಂಗ್ರೆಸ್‌ ಸರ್ಕಾರ ರಾಜ್ಯಕ್ಕೆ ಕೆಟ್ಟ ಸಂದೇಶ ರವಾನಿಸುತ್ತಿದೆ. ಅವರ ಲಜ್ಜೆಗೆಟ್ಟ ನಡೆಯನ್ನು ದೇಶ ನೋಡುತ್ತಿದೆ’ ಎಂದರು.

ಸಿದ್ದರಾಮಯ್ಯ ಪರ ನಿಂತ ಅಹಿಂದ: ಜಿಲ್ಲಾ ಪಂಚಾಯಿತಿ ಮುಂಭಾಗ ಜಮಾಯಿಸಿದ ಅಹಿಂದ ಮುಖಂಡರು ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ’ ನಾವಿದ್ದೇವೆ ಎಂಬ ಫಲಕಗಳನ್ನು ಹಿಡಿದರು. ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಖಂಡಿಸಿ ಘೋಷಣೆ ಕೂಗಿದರು.

ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ.ಎಸ್‌.ಶಿವರಾಮು ಮಾತನಾಡಿ, ‘ಈ ಹಿಂದೆ ಎರಡು ಬಾರಿ ಕೆಡಿಪಿ ಸಭೆ ರದ್ದಾಗಿತ್ತು. ಈ ಬಾರಿ ಮುಖ್ಯಮಂತ್ರಿ ಆ ಸಭೆಯಲ್ಲಿ ಭಾಗವಹಿಸುವಾಗ ಪ್ರತಿಭಟನೆ ನಡೆಸುತ್ತಿರುವುದು ಖಂಡನೀಯ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತಂಡದ ಎಲ್‌.ಆರ್‌.ಮಹದೇವಸ್ವಾಮಿ ಮತ್ತು ನಂದೀಶ್‌ ಹಂಚೆ ಹೆಸರಿನಲ್ಲಿ ಅಕ್ರಮ ಆಸ್ತಿ ಮಾಡಿದ್ದು, ಅವರಿಗೆ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆಯಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಸದಸ್ಯರು ಪ್ರತಿಭಟಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ‘ರೈತರ ಭೂಮಿ ಮೇಲೆ 66 ಕೆ.ವಿ ವಿದ್ಯುತ್‌ ಗೋಪುರ ನಿರ್ಮಿಸುವ ಯೋಜನೆ ಕೈಬಿಡಬೇಕು. ಕೃಷಿ ಪಂಪ್‌ಸೆಟ್‌ಗೆ ಸಂಪರ್ಕ ಪಡೆಯಲು ಎಲ್ಲಾ ಖರ್ಚು ರೈತರೇ ಭರಿಸಬೇಕು ಎಂಬ ನಿಯಮ ಕೈಬಿಡಬೇಕು. ಕೋಚನಹಳ್ಳಿಯ ರೈತರಿಗಾಗಿರುವ ಅನ್ಯಾಯವನ್ನು ಸರಿಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಪದಾಧಿಕಾರಿಗಳಾದ ಬಡಗಲಪುರ ನಾಗೇಂದ್ರ, ಹೊಸೂರು ಕುಮಾರ್‌, ನೇತ್ರಾವತಿ, ಆನಂದೂರು ಪ್ರಭಾಕರ್, ಮಂಡಕಳ್ಳಿ ಮಹೇಶ್‌, ಪಿ.ಮರಂಕಯ್ಯ, ನಾಗನಹಳ್ಳಿ ವಿಜೇಂದ್ರ, ಸಾಲುಂಡಿ ಬಸವರಾಜ್‌ ಭಾಗವಹಿಸಿದ್ದರು.

ರಾಜ್ಯ ಕಬ್ಬು ಬೆಳೆಗಾರರ ಸಂಘ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಸಮಸ್ಯೆ ಆಲಿಸಬೇಕು’ ಎಂದು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಪ್ರತಿಭಟಿಸಿದರು.

ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಭೆ ನಡೆಸಿ ರೈತರ ಸಮಸ್ಯೆ ಬಗ್ಗೆ ಹೇಳಿಕೊಂಡರೂ ಬಗೆಹರಿದಿಲ್ಲ. ಮುಖ್ಯಮಂತ್ರಿಯೊಂದಿಗೆ ಮಾತುಕತೆಗೆ ಅವಕಾಶ ನೀಡದಿದ್ದರೆ ಶನಿವಾರದಿಂದ ಅವರ ಮನೆ ಮುಂದೆ ಧರಣಿ ಕೂರುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಪದಾಧಿಕಾರಿಗಳಾದ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ಅರಸೀಕೆರೆ ಪ್ರಸನ್ನ, ಮಂಜಣ್ಣ, ಹಾಡ್ಯ ರವಿ, ದೇವೇಂದ್ರ ಕುಮಾರ್ ಆರಾಧ್ಯ, ಶಿವರುದ್ರಪ್ಪ, ಕಸವನಹಳ್ಳಿ ಮಂಜೇಶ್, ಸುಜಲೂರು ಜಯಸ್ವಾಮಿ, ಎಂ.ವಿ.ಕೃಷ್ಣಪ್ಪ, ಒಳಗೆರೆ ಗಣೇಶ್, ದೇವಿರಮ್ಮನಹಳ್ಳಿ ಮಹೇಶ್, ಗುರುವಿನಪುರ ಚಂದ್ರು, ಕಿಳಳ್ಳಿಪುರ ಮಂಜುನಾಥ, ದೇವಿರಮ್ನಳ್ಳಿ ಮಾದೇವಸ್ವಾಮಿ ಭಾಗವಹಿಸಿದ್ದರು.

ಕೆಡಿಪಿ ಸಭೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸದಸ್ಯರು ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಸದಸ್ಯರು ಜಿಲ್ಲಾ ಪಂಚಾಯಿತಿ ಮುಂಭಾಗ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ರೈತರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾ ನ್ಯಾಯಾಲಯ ಮುಂಭಾಗ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ರೈತರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಸದಸ್ಯರು ಜಿಲ್ಲಾ ನ್ಯಾಯಾಲಯ ಮುಂಭಾಗ ಪ್ರತಿಭಟಿಸಿದರು –ಪ್ರಜಾವಾಣಿ ಚಿತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಚೇರಿಯಿಂದ ಜಿಲ್ಲಾ ಪಂಚಾಯಿತಿ ಕಡೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಚೇರಿಯಿಂದ ಜಿಲ್ಲಾ ಪಂಚಾಯಿತಿ ಕಡೆಗೆ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು
ಬಿಜೆಪಿ ಮುಖಂಡರ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟಿಸಿದರು
ಬಿಜೆಪಿ ಮುಖಂಡರ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟಿಸಿದರು

ಸಿದ್ದರಾಮಯ್ಯ ವಿರುದ್ಧ ಹಾಡು ಕಟ್ಟಿದ ಶ್ರೀವತ್ಸ

ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಳಿ ಬಂದಿರುವ ಪ್ರಕರಣಗಳನ್ನು ಹೆಸರಿಸಿ ಶಾಸಕ ಟಿ.ಎಸ್‌.ಶ್ರೀವತ್ಸ ಹಾಡು ಹಾಡಿದರು. ‘ಕರ್ನಾಟಕದ ರಾಜ್ಯದಲ್ಲಿ ಮೈಸೂರು ಮೂಡಾದಲ್ಲಿ 14 ಸೈಟುಗಳನ್ನು ದಲಿತರ ಹೆಸರಿನಲ್ಲಿ ನುಂಗಿದರಣ್ಣ ನುಂಗಿದರಣ್ಣ ಸಿದ್ರಾಮಣ್ಣ ನುಂಗಿದರಣ್ಣ ವಾಲ್ಮೀಕಿ ನಿಗಮದಲ್ಲಿ 180 ಕೋಟಿಗಳನ್ನು ನುಂಗಿದರಣ್ಣ ನುಂಗಿದರಣ್ಣ ಸಿದ್ರಾಮಣ್ಣ ಸಿದ್ರಾಮಣ್ಣ. ರಾಜೀನಾಮೆ ನೀಡೋದಿಲ್ಲ ಭ್ರಷ್ಟಾಚಾರ ಬಿಡುವುದಿಲ್ಲ’ ಎಂದು ಹಾಡಿದರು. ಅದಕ್ಕೆ ಕಾರ್ಯಕರ್ತರು ದನಿಗೂಡಿಸಿದರು.

‘ಬಿಜೆಪಿಯಿಂದ ಮುತ್ತಿಗೆ ಯತ್ನ ಖಂಡನೀಯ’

ಮೈಸೂರು: ‘ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆದ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಿಜೆಪಿ ಮುಖಂಡರು ಮುತ್ತಿಗೆ ಹಾಕಲು ಯತ್ನಿಸಿರುವುದು ಖಂಡನೀಯ’ ಎಂದು ಆರೋಪಿಸಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟಿಸಿದರು. ‘ಶಶಿಕಲಾ ಜೊಲ್ಲೆ ಮೊಟ್ಟೆ ಕಳ್ಳಿ’ ‘ಸಿಟಿ ರವಿ ಓಟಿ ರವಿ ಲೂಟಿ ರವಿ’ ‘ಬೆಲೆ ಬಾಳುವ ಭೂಮಿ ಕುಮಾರಸ್ವಾಮಿ ಯಡಿಯೂರಪ್ಪರಿಂದ ಡಿನೋಟಿಫಿಕೇಷನ್‌’ ‘ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ₹2.50 ಕೋಟಿ’ ‘ಕೆ.ಸುಧಾಕರ್‌ ಕೋವಿಡ್‌ ಕಳ್ಳ’ ‘ಮುರುಗೇಶ್‌ ನಿರಾಣಿ ಭ್ರಷ್ಟ’ ‘ಮುನಿರತ್ನ ಅತ್ಯಾಚಾರಿ’ ಎಂಬ ಬರಹವುಳ್ಳ ಫಲಕ ಹಿಡಿದು ಘೋಷಣೆ ಕೂಗಿದರು. ಎಂ.ಕೆ.ಸೋಮಶೇಖರ್‌ ಮಾತನಾಡಿ ‘ಈ ಹಿಂದೆ ಬಿಜೆಪಿ ಆಡಳಿತಾವಧಿಯಲ್ಲಿ ಮಂತ್ರಿಗಳಾಗಿದ್ದವರ ವಿರುದ್ಧದ ಆರೋಪಗಳ ತನಿಖೆ ನಡೆಯಲಿ. ಬಿಜೆಪಿ ತಮ್ಮ ಊಟದ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಸಿದ್ದರಾಮಯ್ಯ ಅವರಿಗೆ ಪಾಠ ಹೇಳುವ ಕೆಲಸ ಮಾಡುತ್ತಿರುವುದು ನಾಚಿಕೆಗೇಡು. ಸಿದ್ದರಾಮಯ್ಯ ಅವರು ಬಡವರ ಕಲ್ಯಾಣಕ್ಕಾಗಿ ಸಭೆ ಮಾಡಲು ಬಂದರೆ ಸಕಾರಣವಿಲ್ಲದೆ ಅವರ ವಿರುದ್ಧ ಮುತ್ತಿಗೆ ಹಾಕಲು ಯತ್ನಿಸಿರುವುದು ಬಿಜೆಪಿಯವರ ಹೇಡಿತನ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಮುಖಂಡರಾದ ಜಿ.ಸೋಮಶೇಖರ್ ಶ್ರೀಧರ್ ಪುಷ್ಪಲತಾ ಚಿಕ್ಕಣ್ಣ ಟಿ.ಬಿ.ಚಿಕ್ಕಣ್ಣ ಭವ್ಯಾ ಮಹಮ್ಮದ್‌ ಫಾರೂಕ್ ಲೀಲಾ ಪಂಪಾಪತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT