ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ಸಂಗಮ

ಮೈಸೂರಿನಲ್ಲಿ ಲಲಿತ್‌ ಮಹಲ್‌ ಹೋಟೆಲ್‌ನಲ್ಲಿ ಆಯೋಜನೆ
Last Updated 6 ಜನವರಿ 2023, 12:53 IST
ಅಕ್ಷರ ಗಾತ್ರ

ಮೈಸೂರು: ಬಿಜೆಪಿಯ ಪರಿಶಿಷ್ಟ ಜಾತಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಜ.7 ಹಾಗೂ 8ರಂದು ನಡೆಯಲಿದ್ದು, ಇದಕ್ಕಾಗಿ ಲಲಿತಮಹಲ್‌ ಹೋಟೆಲ್‌ನಲ್ಲಿ ಸಿದ್ಧತೆ ಕೈಗೊಳ್ಳಲಾಗಿದೆ.

‘7ರಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ ನೆರವೇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌, ಬಿಜೆಪಿ ರಾಷ್ಟ್ರೀಯ ಪ್ರಧಾನ‌ ಕಾರ್ಯದರ್ಶಿ ಸಿ.ಟಿ.ರವಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಭಾಗವಹಿಸಲಿದ್ದಾರೆ’ ಎಂದು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್‌ ಸಿಂಗ್‌ ಆರ್ಯ ಅವರು ತಿಳಿಸಿದರು.

‘ಕೇಂದ್ರ ಸಚಿವರಾದ ಅರ್ಜುನ್‌ ಮೇಘವಾಲ್‌, ಎ.ನಾರಾಯಣಸ್ವಾಮಿ, ಎಲ್‌.ಮುರುಗನ್‌, ಮುಖಂಡರಾದ ರಮಾಪತಿ ಶಾಸ್ತ್ರಿ, ದುಶ್ಯಂತ್‌ ಗೌತಮ್‌, ಬಿಜೆಪಿಯ 10 ಮಂದಿ ಸಚಿವರು ಭಾಗಿಯಾಗಲಿದ್ದಾರೆ. ದೇಶದ ವಿವಿಧೆಡೆಯಿಂದ ಪಕ್ಷದ 150 ಪ್ರತಿನಿಧಿಗಳು ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ಹಲವು ಯೋಜನೆ ಜಾರಿ: ‘ಎಸ್‌.ಸಿ, ಎಸ್‌.ಟಿ. ಸಮುದಾಯಕ್ಕೆ ಬಿಜೆಪಿ ವಿಶ್ವಾಸ, ವಿಕಾಸ, ಸ್ವಾಭಿಮಾನದ ಬದುಕು ಕಟ್ಟಿಕೊಟ್ಟಿದೆ. ಅಂಬೇಡ್ಕರ್‌ ರಾಷ್ಟ್ರೀಯ ಸ್ಮಾರಕ ನಿರ್ಮಾಣ, ಸಂವಿಧಾನ ದಿನ ಜಾರಿ, ಗರೀಬ್‌ ಕಲ್ಯಾಣ ಕಾರ್ಯಕ್ರಮದಡಿ ಮನೆ, ಶೌಚಾಲಯ ನಿರ್ಮಿಸಿಕೊಡುತ್ತಿದೆ. ಅಡುಗೆ ಅನಿಲ ಸಂಪರ್ಕ ಸೌಲಭ್ಯವು ಶೇ 35ರಷ್ಟು ದಲಿತರಿಗೆ ಸಿಕ್ಕಿದೆ’ ಎಂದು ಹೇಳಿದರು.

ದಲಿತ ಪರ ಬಿಜೆಪಿ: ‘ರಾಷ್ಟ್ರಮಟ್ಟದಲ್ಲಿ ಅಂಬೇಡ್ಕರ್‌ಗೆ ಸಂಬಂಧಿಸಿದ ಪಂಚಕ್ಷೇತ್ರಗಳನ್ನು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿದೆ. ರಾಜ್ಯದಲ್ಲಿ ಅಂಬೇಡ್ಕರ್‌ ಓಡಾಡಿದ ಸ್ಥಳಗಳಲ್ಲಿ ಸ್ಮಾರಕ ನಿರ್ಮಾಣಕ್ಕೆ ₹20 ಕೋಟಿ ಅನುದಾನ ನೀಡಲಾಗಿದೆ. ದಲಿತರಿಗೆ 75 ಯುನಿಟ್‌ ಉಚಿತ ವಿದ್ಯುತ್‌ ಪೂರೈಕೆ, ಹೊಸ ಹಾಸ್ಟೆಲ್‌ಗಳ ನಿರ್ಮಾಣ, ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಿಸಿದ ರಾಜ್ಯ ಸರ್ಕಾರವನ್ನು ಅಭಿನಂದಿಸಿ ಕಾರ್ಯಕಾರಿಣಿಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಕಾಂಗ್ರೆಸ್‌ ಏನು ಹೇಳುತ್ತದೆಯೋ ಅದನ್ನು ಮಾಡುವುದಿಲ್ಲ. ಆದರೆ, ಬಿಜೆಪಿಯು ನುಡಿದಂತೆ ನಡೆದುಕೊಳ್ಳುತ್ತಿದೆ’ ಎಂದರು.

‘ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳದಲ್ಲಿ ಯಾವುದೇ ಗೊಂದಲವಿಲ್ಲ. ವರದಿ ಆಧರಿಸಿ, ಕ್ರಮ ತೆಗೆದುಕೊಂಡಿದ್ದು, ನ.1ರಿಂದಲೇ ಜಾರಿಗೆ ಬಂದಿದೆ. ದಲಿತರ ಶ್ರೇಯೋಭಿವೃದ್ಧಿ ನಮ್ಮ ಬದ್ಧತೆಯಾಗಿದೆ. ರಾಜ್ಯ ಸರ್ಕಾರ ಯಾವುದೇ ವಿದ್ಯಾರ್ಥಿವೇತನ ನಿಲ್ಲಿಸಿಲ್ಲ’ ಎಂದು ಬಿಜೆಪಿ ‍‍ಪ.ಜಾತಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿಕೊಂಡರು.

‘ಕಾರ್ಯಕಾರಿಣಿಯಲ್ಲಿ ಪದಾಧಿಕಾರಿಗಳ ಸಭೆ ನಡೆದಿದೆ. ‘ಪ್ರದರ್ಶಿನಿ’ ಉದ್ಘಾಟಿಸಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು, ಸ್ವಾತಂತ್ರ್ಯಕ್ಕೆ ಹೋರಾಡಿದ ದಲಿತ ಹೋರಾಟಗಾರರನ್ನು ಚಿತ್ರಣವನ್ನು ಕಟ್ಟಿಕೊಡಲಾಗಿದೆ. ಭಾನುವಾರ ಮಧ್ಯಾಹ್ನದವರೆಗೆ ಸರಣಿ ಸಭೆಗಳು ನಡೆಯಲಿವೆ. ಸಂಜೆ ನಡೆಯುವ ಸಮಾರೋಪದಲ್ಲಿ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಪಾಲ್ಗೊಳ್ಳಲಿದ್ದಾರೆ’ ಎಂದರು.

ಬಿಜೆಪಿ ಮುಖಂಡ ಮಹಾಂತ ಶಂಭುನಾಥ, ಪಕ್ಷದ ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಗಳಾ ಸೋಮಶೇಖರ್‌, ನಗರ ಘಟಕದ ಅಧ್ಯಕ್ಷ ಟಿ.ಎಸ್‌.ಶ್ರೀವತ್ಸ, ಕೃಷ್ಣಮೂರ್ತಿ, ನಂಜುಂಡಸ್ವಾಮಿ, ಎಸ್‌.ಮಹಾದೇವಯ್ಯ, ನಗರ ಘಟಕದ ಮಾಧ್ಯಮ ಸಂಚಾಲಕ ಮಹೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT