ಮೈಸೂರು: ‘ಮಹಿಳಾ ಮೋರ್ಚಾದ ಪದಾಧಿಕಾರಿಗಳು ತಮ್ಮ ಬೂತ್‌ಗಳಲ್ಲಿ ಹೆಚ್ಚಿನ ಜನರನ್ನು ಸದಸ್ಯತ್ವ ಮಾಡಿಸುವ ಮೂಲಕ ಪಕ್ಷಕ್ಕೆ ಮಹಿಳಾ ಬಲ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಹೇಳಿದರು.
ಬಿಜೆಪಿ ಜಿಲ್ಲಾ ಗ್ರಾಮಾಂತರ ಮಹಿಳಾ ಮೋರ್ಚಾವು ಪಕ್ಷದ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ವಿಕಸಿತ ಭಾರತ ಪರಿಕಲ್ಪನೆಯಡಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಜನಸಾಮಾನ್ಯರಿಗೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.
‘ಕಾಂಗ್ರೆಸ್ ಸರ್ಕಾರ ಮುಡಾ ಸೇರಿದಂತೆ ಹಲವು ಭ್ರಷ್ಟಾಚಾರ, ಹಗರಣಗಳಲ್ಲಿ ಭಾಗಿಯಾಗಿದೆ. ಬಿಟ್ಟಿ ಭಾಗ್ಯಗಳಿಗೆ ಹಣ ಒದಗಿಸಲು ಆಗದೇ ಬೇರೆ ಬೇರೆ ಯೋಜನೆಗಳ ಅನುದಾನವನ್ನೂ ಬಳಸಿಕೊಳ್ಳುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಎಂ.ಬಿ ಪಾಟೀಲರಂತಹ ಕಾಂಗ್ರೆಸ್ ನಾಯಕರು ಟೀಕಿಸುವ ಭರದಲ್ಲಿ ಮಾತಿನ ಮೇಲೆ ಹಿಡಿತ ತಪ್ಪುತ್ತಿದ್ದಾರೆ. ಅವರ ಮಾತುಗಳ ಮೇಲೆ ಹಿಡಿತ ಇರಬೇಕು’ ಎಂದು ಆಗ್ರಹಿಸಿದರು.
ಪಕ್ಷದ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಕಾರ್ಯದರ್ಶಿ ಲೋಕೇಶ್ ಅಂಬೆಗಲ್ ಮಾತನಾಡಿದರು. ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ನಳಿನಿ ಗೌಡ, ಪ್ರಧಾನ ಕಾರ್ಯದರ್ಶಿ ನಂದಿನಿ, ರಾಧಿಕಾ ಇದ್ದರು.