ಬೊಕ್ಕಹಳ್ಳಿ (ಮೈಸೂರು ಜಿಲ್ಲೆ): ‘ಸರ್ಕಾರಿ ಜಾಗ ಸಿಕ್ಕರೆ ಬೊಕ್ಕಹಳ್ಳಿ ಗ್ರಾಮದ ಸ್ಥಳಾಂತರಕ್ಕೆ ಪರಿಶೀಲಿಸಲಾಗುವುದು’ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಭರವಸೆ ನೀಡಿದರು.
ನಂಜನಗೂಡು ತಾಲ್ಲೂಕು ಬೊಕ್ಕಹಳ್ಳಿ ಗ್ರಾಮದಲ್ಲಿ ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಜತೆಗೂಡಿ ಶನಿವಾರ ಪ್ರವಾಹ ಪರಿಸ್ಥಿತಿ ವೀಕ್ಷಿಸಿ ಕಾಳಜಿ ಕೇಂದ್ರದಲ್ಲಿನ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
‘ಈ ಬಾರಿ ವಾಡಿಕೆಗಿಂತ ಶೇ 75ರಷ್ಟು ಹೆಚ್ಚು ಮಳೆ ಸುರಿದಿದ್ದರಿಂದ ಬೊಕ್ಕಹಳ್ಳಿ ಗ್ರಾಮಕ್ಕೆ ಹೆಚ್ಚು ನೀರು ನುಗ್ಗಿದೆ. ಗ್ರಾಮಸ್ಥರು ಗ್ರಾಮದ ಸ್ಥಳಾಂತರಕ್ಕೆ ಒತ್ತಾಯಿಸುತಿದ್ದಾರೆ. ಅಂತಹ ಸಂದರ್ಭ ಈಗ ಸೃಷ್ಟಿಯಾಗಿಲ್ಲ. ಅದರೂ ಗ್ರಾಮಸ್ಥರ ಮನವಿ ಮೇರೆಗೆ ಸರ್ಕಾರಿ ಜಾಗದ ಲಭ್ಯತೆ ಆಧರಿಸಿ ಕ್ರಮ ವಹಿಸಲಾಗುವುದು’ ಎಂದರು.
‘80 ಕುಟುಂಬಗಳು ಪ್ರವಾಹದಿಂದ ಬಾಧಿತವಾಗಿವೆ. ಈ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು’ ಎಂದರು.
‘ಈ ಬಾರಿ ಕಬಿನಿ ಜಲಾಶಯದಿಂದ ನದಿಗೆ 80ಸಾವಿರಕ್ಕೂ ಹೆಚ್ಚು ಕ್ಯುಸೆಕ್ ನೀರು ಬಂದುದರಿಂದ ಗ್ರಾಮದ ಕೆಲ ಜಮೀನುಗಳು ಮುಳುಗಡೆಯಾಗಿ, ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 80 ಮನೆಗಳಿಗೆ ನೀರು ನುಗ್ಗಿದ್ದು, 215 ಮಂದಿಯನ್ನು ಸ್ಥಳಾಂತರಿಸಲಾಗಿದೆ. 78 ಜನ ಕಾಳಜಿ ಕೇಂದ್ರದಲ್ಲಿ ಉಳಿದಿದ್ದಾರೆ. ಜಿಲ್ಲಾಡಳಿತದಿಂದ ತಗ್ಗು ಪ್ರದೇಶದ ಮನೆಗಳವರಿಗೆ ಜಾಗೃತಿ ಮೂಡಿಸುವುದರೊಂದಿಗೆ ಊಟ, ವಸತಿ ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
‘ಕಪಿಲಾ ನದಿಯಿಂದ ಪ್ರವಾಹ ಉಂಟಾಗಿದ್ದು ಇದರಿಂದ ಆಗಿರುವ ಮನೆ ಹಾಗೂ ಬೆಳೆ ಹಾನಿ ಕುರಿತು ಅಧಿಕಾರಿಗಳಿಂದ ವರದಿ ಪಡೆದು ಪರಿಹಾರ ನೀಡಲಾಗುವುದು. ಈಗ ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ’ ಎಂದರು.
‘ಜಿಲ್ಲೆಯಲ್ಲಿ ಮಳೆಯಿಂದಾಗಿ ಸದ್ಯದ ವರದಿ ಪ್ರಕಾರ, 345 ಮನೆಗಳಿಗೆ ಹಾನಿಯಾಗಿದ್ದು, 256 ಮನೆಗಳಿಗೆ ಪರಿಹಾರ ನೀಡಲಾಗಿದೆ. 268 ಮನೆಗಳು ಭಾಗಶಃ ಹಾನಿಯಾಗಿವೆ. ಅವುಗಳಿಗೆ ನಿಯಮಾವಳಿಯಂತೆ ಪರಿಹಾರ ಕೊಡಲಾಗಿದೆ. ಜಿಲ್ಲೆಯಲ್ಲಿ 220 ಶಾಲೆಗಳು ಹಾಗೂ 60 ಅಂಗನವಾಡಿ ಕೇಂದ್ರಗಳ ಕಟ್ಟಡಗಳು, 40ರಿಂದ 50 ಕಿ.ಮೀ. ಗ್ರಾಮೀಣ ರಸ್ತೆ ಹಾಗೂ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ 25 ಕಿ.ಮೀ. ರಸ್ತೆ ಹಾಳಾಗಿದೆ’ ಎಂದು ಮಾಹಿತಿ ನೀಡಿದರು.
ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ಸೂಕ್ತ ಜಾಗವನ್ನು ಗುರುತಿಸಿ ಅಲ್ಲಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಿ, ಸರ್ಕಾರದಿಂದ ಸಹಾಯಧನ ಕಲ್ಪಿಸಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.
‘ಗ್ರಾಮ ಪ್ರತಿ ವರ್ಷ ಮುಳುಗಡೆ ಆಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಬೇರೆ ಕಡೆ ನಿವೇಶನಗಳನ್ನು ಕೊಟ್ಟು ಮನೆ ನಿರ್ಮಿಸಿಕೊಡಬೇಕು’ ಎಂದು ಗ್ರಾಮದ ಮುಖಂಡರು ಕೋರಿದರು.
ಸಂತ್ರಸ್ತರಿಗೆ ಹೊದಿಕೆಗಳನ್ನು ವಿತರಿಸಲಾಯಿತು.
ಸಚಿವರು, ಕಾಳಜಿ ಕೇಂದ್ರದ ಪಕ್ಕದ ಅಂಗನವಾಡಿ ಕೇಂದ್ರದಲ್ಲಿ ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುತ್ತಿರುವುದನ್ನು ಪರಿಶೀಲಿಸಿದರು. ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.