ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ಅರಮನೆ ಮಂಡಳಿಯಿಂದ ಮಾವುತರು, ಕಾವಾಡಿಗರ ಕುಟುಂಬದವರಿಗೆ ಉಪಹಾರ ಕೂಟ

Published : 21 ಸೆಪ್ಟೆಂಬರ್ 2024, 7:55 IST
Last Updated : 21 ಸೆಪ್ಟೆಂಬರ್ 2024, 7:55 IST
ಫಾಲೋ ಮಾಡಿ
Comments

ಮೈಸೂರು: ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಮೈಸೂರು ದಸರಾ ಅಂಗವಾಗಿ ಗಜಪಡೆಯೊಂದಿಗೆ ಬಂದಿರುವ ಮಾವುತರು ಹಾಗೂ ಕಾವಾಡಿಗಳ ಕುಟುಂಬದವರಿಗೆ ಇಲ್ಲಿನ ಅರಮನೆ ಆವರಣದಲ್ಲಿ ಶನಿವಾರ ಉಪಾಹಾರ ಬಡಿಸಿ, ಅವರೊಂದಿಗೆ ತಾವೂ ಸೇವಿಸಿದರು.

ಅರಮನೆ ಮಂಡಳಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡ ಉಪಾಹಾರ ಸೇವಿಸಿದರು.

ಬಳಿಕ ಮಾವುತರು ಹಾಗೂ ಕಾವಾಡಿಗಳ ಮಕ್ಕಳಿಗೆ ತಾತ್ಕಾಲಿಕವಾಗಿ ತೆರೆದಿರುವ ಟೆಂಟ್ ಶಾಲೆಗೆ ಚಾಲನೆ ನೀಡಿದರು. ಇದೇ ವೇಳೆ ಮಕ್ಕಳು ಪ್ರಸ್ತುತಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ, ಅವರೊಂದಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ದಸರಾ ಆನೆಗಳಿಗೆ ಕಬ್ಬು, ಬೆಲ್ಲ ತಿನ್ನಿಸಿ ಗಜಪಡೆಯ ಪಾಲನೆ, ಪೋಷಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾವಾಡಿಗಳು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಅವರ ಯೋಗಕ್ಷೇಮ ವಿಚಾರಿಸಿದರು.

ಅರಮನೆ ಆವರಣದಲ್ಲಿ ತೆರೆಯಲಾಗಿರುವ ತಾತ್ಕಾಲಿಕ ಆರೋಗ್ಯ ತಪಾಸಣೆ ಕೇಂದ್ರವನ್ನು ವೀಕ್ಷಿಸಿ, ಗಜಪಡೆಯೊಂದಿಗೆ ಬಂದಿರುವವರನ್ನು ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ತನ್ವೀರ್ ಸೇಠ್, ವಿಧಾನಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆಯೂಬ್ ಖಾನ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯಿತ್ರಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಎನ್. ವಿಷ್ಣುವರ್ಧನ್, ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕಿ ಶೀಲಾ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ, ಅರಣ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT