ಮೈಸೂರು: ‘ಭಗವಾನ್ ಬುದ್ಧನ ತತ್ವಗಳು ಮತ್ತು ಬೋಧನೆಗಳನ್ನು ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಸಲಹೆ ನೀಡಿದರು.

ಇಲ್ಲಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಭಗವಾನ್ ಬುದ್ಧ ಜಯಂತ್ಯುತ್ಸವ ಸಮಿತಿಯಿಂದ ಶುಕ್ರವಾರ ಆಯೋಜಿಸಿದ್ದ ಬುದ್ಧ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧ ಇಡೀ ಜಗತ್ತಿಗೆ ಶಾಂತಿ ಮತ್ತು ಜ್ಞಾನದ ಬೆಳಕು ನೀಡಿದ ಮಹಾಪುರುಷ. ಅವರ ದಮ್ಮದ ಹಾದಿಯಲ್ಲಿ ನಡೆದರೆ ಮಾತ್ರ ಸಮ ಸಮಾಜದ ನಿರ್ಮಾಣ ಸಾಧ್ಯ. ಅಜ್ಞಾನದ ಕತ್ತಲೆ ಹೋಗಲಾಡಿಸಿ ಸುಜ್ಞಾನದ ಹಾದಿಯಲ್ಲಿ ನಡೆಸುವ ಶಕ್ತಿ ಬುದ್ಧನ ಬೋಧನೆಗಳಿಗಿವೆ’ ಎಂದು ನುಡಿದರು.

‘ಬುದ್ಧನ ತತ್ವಗಳಿಂದ ಪ್ರೇರಿತರಾದ ಡಾ.ಬಿ.ಆರ್. ಅಂಬೇಡ್ಕರ್ ಅವರು ಭಾರತಕ್ಕೆ ಉತ್ತಮ ಸಂವಿಧಾನ ನೀಡುವ ಮೂಲಕ ಸಮಾನತೆಯ ಆಶಯವನ್ನು ಎತ್ತಿ ಹಿಡಿದಿದ್ದಾರೆ. ಆ ದಾರಿಯಲ್ಲಿ ಸಾಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ’ ಎಂದರು.

ಪ್ರಸ್ತುತವಾಗಿದೆ

‘ಇಂದಿನ ಜಗತ್ತಿಗೆ ಬುದ್ಧನ ಶಾಂತಿ ಮಂತ್ರ ಬಹಳ ಪ್ರಸ್ತುತವಾಗಿದೆ’ ಎಂದು ಹೇಳಿದರು.

‘2,500 ವರ್ಷಗಳ ಹಿಂದಿನ ಬುದ್ಧನ ಜ್ಞಾನದ ದೀಪ್ತಿ ಇಂದಿಗೂ ಪ್ರಜ್ವಲಿಸುತ್ತಿದೆ. ಮುಂದಿನ ಪೀಳಿಗೆಗೆ ಈ ಬೋಧನೆಗಳನ್ನು ತಲುಪಿಸುವುದು ನಮ್ಮ ಜವಾಬ್ದಾರಿ’ ಎಂದರು.

ವಿಶ್ವಮೈತ್ರಿ ಬುದ್ಧ ವಿಹಾರದ ಕಲ್ಯಾಣಸಿರಿ ಭಂತೇಜಿ ಮಾತನಾಡಿ, ‘ಪ್ರತಿಯೊಬ್ಬರೂ ಕೋಪ, ಅಸೂಯೆ ಮತ್ತು ದ್ವೇಷ ಗುಣವನ್ನು ತ್ಯಜಿಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಇದಕ್ಕಾಗಿ ಬುದ್ಧನನ್ನು ನಾವು ಪಾಲಿಸಬೇಕು. ಬುದ್ಧನು ತೋರಿದ ಅಹಿಂಸೆಯ ಮಾರ್ಗವು ಇಂದಿನ ಅಶಾಂತಿಯುತ ಜಗತ್ತಿಗೆ ಅತ್ಯವಶ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ಪಂಚಶೀಲ ತತ್ವ ಪಾಲಿಸಬೇಕು

‘ಮನುಷ್ಯನು ಸುಸಂಸ್ಕೃತನಾಗಿ ಬಾಳಲು ಪಂಚಶೀಲ ತತ್ವಗಳನ್ನು ಅನುಸರಿಸಬೇಕು. ಸುಳ್ಳು ಹೇಳದಿರುವುದು, ಹಿಂಸೆ ಮಾಡದಿರುವುದು ಮತ್ತು ಮದ್ಯಪಾನದಿಂದ ದೂರವಿರುವುದು ವ್ಯಕ್ತಿಯ ಗೌರವವನ್ನು ಹೆಚ್ಚಿಸುತ್ತದೆ’ ಎಂದು ತಿಳಿಸಿದರು.

‘ಬುದ್ಧ ಸಾರಿದ ಸಮಾನತೆಯ ಸಂದೇಶವನ್ನು ಅಂಬೇಡ್ಕರ್ ಅವರು ಭಾರತೀಯರಿಗೆ ಧಮ್ಮ ದೀಕ್ಷೆಯ ಮೂಲಕ ನೀಡಿದರು. ಜಾತಿ ವ್ಯವಸ್ಥೆಯ ಕಪಿಮುಷ್ಠಿಯಿಂದ ಹೊರಬಂದು ಮನುಷ್ಯತ್ವವನ್ನು ಗೌರವಿಸುವ ಸಂಸ್ಕೃತಿ ಬೆಳೆಯಬೇಕು’ ಎಂದರು.

‘ಬುದ್ಧನ ಪ್ರತಿಮೆಗೆ ಪೂಜೆ ಮಾಡುವುದು ಎಷ್ಟು ಮುಖ್ಯವೋ, ಅವರ ವಿಚಾರಗಳನ್ನು ನಮ್ಮ ನಡವಳಿಕೆಯಲ್ಲಿ ತರುವುದೂ ಮುಖ್ಯ. ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನತ್ತ ಸಾಗುವುದೇ ನಿಜವಾದ ಬುದ್ಧ ಜಯಂತಿ’ ಎಂದು ತಿಳಿಸಿದರು.

ಅದೊಂದು ಜ್ಞಾನದ ಧಾರೆ

‘ಬುದ್ಧ ಎಂದರೆ ವ್ಯಕ್ತಿಯಲ್ಲ, ಅದೊಂದು ನಿರಂತರವಾಗಿ ಹರಿಯುವ ಜ್ಞಾನದ ಧಾರೆ. ನಮಗೆ ಆಯುಧ ಹಿಡಿಯುವ ಯುದ್ಧ ಬೇಡ; ಜನರ ಮನಸ್ಸನ್ನು ಗೆಲ್ಲುವ ಬುದ್ಧ ಬೇಕು. ಕರುಣೆ ಮತ್ತು ಮೈತ್ರಿಯ ಮೂಲಕ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ’ ಎಂದು ನುಡಿದರು.

ಪ್ರಜಾಪರಿವರ್ತನ ವೇದಿಕೆಯ ಬಿ. ಗೋಪಾಲ್ ಮಾತನಾಡಿ, ‘ಬುದ್ಧನ ಬೋಧನೆಗಳು ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿಲ್ಲ. ಅವು ವೈಜ್ಞಾನಿಕ ಮತ್ತು ಮಾನವೀಯ ಮೌಲ್ಯಗಳಾಗಿವೆ’ ಎಂದು ಹೇಳಿದರು.

‘ಸಮಾಜದಲ್ಲಿ ಹಾಸುಹೊಕ್ಕಾಗಿರುವ ಮೂಢನಂಬಿಕೆಗಳನ್ನು ಕಿತ್ತೊಗೆಯಲು ಬುದ್ಧನ ‘ಬೌದ್ಧಿಕ ಕ್ರಾಂತಿ’ ಇಂದಿಗೂ ಬೇಕಾಗಿದೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದೇ ಬುದ್ಧನಿಗೆ ನಾವು ಸಲ್ಲಿಸುವ ನಿಜವಾದ ಗೌರವ’ ಎಂದು ತಿಳಿಸಿದರು.

‘ಸಮಾಜದಲ್ಲಿ ಇಂದಿಗೂ ಬೇರೂರಿರುವ ಅಸ್ಪೃಶ್ಯತೆಯಂತಹ ಪಿಡುಗುಗಳನ್ನು ತೊಡೆದುಹಾಕಲು ಬುದ್ಧನ ‘ಧಮ್ಮ’ ಮಾರ್ಗವು ದಾರಿದೀಪವಾಗಿದೆ. ಸಂವಿಧಾನದ ಆಶಯಗಳಾದ ಸಮಾನತೆ ಮತ್ತು ಭ್ರಾತೃತ್ವವು ಬುದ್ಧನ ತತ್ವಗಳಿಂದಲೇ ಬಂದಿವೆ’ ಎಂದರು.

ಮಹಾಬೋಧಿ ಶಾಖೆ ಸೋಭಾನ ಭಂತೇಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಮಾಜಿ ಮೇಯರ್ ಪುರುಷೋತ್ತಮ್, ದಲಿತ ಮುಖಂಡ ಸೋಮಯ್ಯ ಮಲೆಯೂರು, ಭಗವಾನ ಬುದ್ಧ ಜಯಂತ್ಯುತ್ಸವ ಸಮಿತಿ ಮುಖಂಡರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ, ಪುರಭವನದ ಆವರಣದಿಂದ ಕಲಾಮಂದಿರದವರೆಗೆ ಬುದ್ಧನ ಪ್ರತಿಮೆಯ ಮೆರವಣಿಗೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.