ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ‘ವಾಣಿಜ್ಯ ಕಲಿಕೆ: ಬದಲಾವಣೆ ಅಗತ್ಯ’

ಕೊಲಂಬೊ ವಿಶ್ವವಿದ್ಯಾಲಯದ ಡಾ.ತಿಸ್ಸಾ ರವೀಂದ್ರ ಪೆರೇರಾ ಅಭಿಮತ
Last Updated 9 ಫೆಬ್ರುವರಿ 2023, 6:02 IST
ಅಕ್ಷರ ಗಾತ್ರ

ಮೈಸೂರು: ‘ಭಾರತ, ಶ್ರೀಲಂಕಾ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ವಾಣಿಜ್ಯ ಶಾಲಾ– ಕಾಲೇಜುಗಳು ಕಲಿಕಾ ಮಾದರಿಯನ್ನು ಬದಲಿಸಿಕೊಳ್ಳಬೇಕಿದೆ’ ಎಂದು ಕೊಲಂಬೊ ವಿಶ್ವವಿದ್ಯಾಲಯದ ಡಾ.ತಿಸ್ಸಾ ರವೀಂದ್ರ ಪೆರೇರಾ ಪ್ರತಿಪಾದಿಸಿದರು.

ಗೋಕುಲಂನ ಕೆ.ಪುಟ್ಟಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ‘ವಾಣಿಜ್ಯ ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನದ ಸವಾಲುಗಳು’ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಭವಿಷ್ಯದಲ್ಲಿ ಆರ್ಥಿಕ ಸವಾಲುಗಳನ್ನು ಎದುರಿಸಲು ಅಭಿವೃದ್ಧಿಶೀಲ ದೇಶಗಳು ಸಜ್ಜಾಗಬೇಕಿದೆ. ಮಾನವ ಸಂಪನ್ಮೂಲಕ್ಕಿಂತ ಮಿಗಿಲಾದ ಸಂಪನ್ಮೂಲ ಜಗತ್ತಿನಲ್ಲಿ ಇಲ್ಲ. ಹೀಗಾಗಿ ಯೋಜಿತ ರೀತಿಯಲ್ಲಿ ಸಂಪನ್ಮೂಲ ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪಠ್ಯ ಬೋಧನೆಯೇ ದಕ್ಷಿಣ ಏಷ್ಯಾ, ಆಫ್ರಿಕಾ, ಆಗ್ನೇಯ ಏಷ್ಯಾ ದೇಶಗಳ ಕಲಿಕಾ ಮಾದರಿಯಾಗಿದೆ. ಪಾಶ್ಚಾತ್ಯ ದೇಶಗಳಲ್ಲಿ ಅನ್ವಯಿಕ ಕಲಿಕೆಯು ಚಾಲ್ತಿಯಲ್ಲಿದೆ. ಸಂಶೋಧನೆ ಹಾಗೂ ಪ್ರಯೋಗಾತ್ಮಕ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿಯೇ ಮಾನವ ಸಂಪನ್ಮೂಲ ಬಳಕೆಯ ರ‍್ಯಾಂಕಿಂಗ್‌ನಲ್ಲಿ ಬಹಳಷ್ಟು ಮುಂದಿವೆ’ ಎಂದು ಹೇಳಿದರು.

‘ಏಷ್ಯಾದ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿರುವ ಬೆಂಗಳೂರು ಜಾಗತಿಕ ಪೈಪೋಟಿಯನ್ನು ನೀಡುತ್ತಿದೆ. ಅದಕ್ಕೆ ಮಾನವ ಸಂಪನ್ಮೂಲದ ನೆರವು ಕಾರಣ. ಶಿಕ್ಷಣ ವ್ಯವಸ್ಥೆಯು ಪದವಿ ಹಾಗೂ ಅಂಕಗಳಿಗಿಂತಲೂ ಸಂಶೋಧನೆ, ಪುಸ್ತಕ ಪ್ರಕಟಣೆಗೆ ಮನ್ನಣೆ ನೀಡಬೇಕು. ಆ ಮಾದರಿ ಕಲಿಕೆ ವ್ಯವಸ್ಥೆ ಜಾರಿಗೊಳ್ಳಬೇಕಿದೆ’ ಎಂದರು.

‘21ನೇ ಶತಮಾನದಲ್ಲಿ ವಾಣಿಜ್ಯ ಶಾಲೆಗಳು ಮಹತ್ವವನ್ನು ಪಡೆದಿವೆ. ಜಾಗತಿಕ ಆರ್ಥಿಕತೆಯನ್ನು ಬದಲಿಸುತ್ತಿವೆ. ಹೊಸ ಕಲಿಕಾ ವಿಷಯಗಳು ಸೇರ್ಪಡೆಗೊಳ್ಳುತ್ತಿವೆ. ವಾಣಿಜ್ಯ ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ ಅಂತರ್‌ ಶಿಸ್ತೀಯ ಸಂಬಂಧವನ್ನು ಹೊಂದಿದೆ. ಉದ್ಯಮಕ್ಕೆ ಅನುಕೂಲವಾದ ಸಂಪನ್ಮೂಲ ನೀಡದ ಕಾರಣ ಪದವಿಗಳು ಪ್ರಸ್ತುತತೆ ಕಳೆದುಕೊಳ್ಳುತ್ತಿವೆ. ಓದುವ ಕ್ರಮವೂ ಬದಲಾಗಿದೆ’ ಎಂದು ವಿಶ್ಲೇಷಿಸಿದರು.

‘ಶಾಲಾ– ಕಾಲೇಜುಗಳು ಬೋಧನೆಗಿಂತ ಕೌಶಲ ತರಬೇತಿ, ಚರ್ಚೆ, ಸಂವಾದ, ಕಾರ್ಯಾಗಾರ ಹಾಗೂ ಸಂಶೋಧನೆಗಳಿಗೆ ಪ್ರಾಶಸ್ತ್ಯ ನೀಡಬೇಕು’ ಎಂದು ಸಲಹೆ ನೀಡಿದರು.

ಕೆಎಸ್‌ಒಯು ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ವಿಚಾರ ಸಂಕಿರಣ ಉದ್ಘಾಟಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿದರು.

ಸಂಸ್ಥೆಯ ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲ ರಾಮಣ್ಣನವರ್, ಪ್ರಾಂಶುಪಾಲ ಡಾ.ಎಂ.ಶಿವಲಿಂಗೇಗೌಡ, ವಾಣಿಜ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಗೌಹರ್ ಫಾತಿಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT