ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರೀದಿ ಕೇಂದ್ರ: ಸರ್ವರ್ ಸಮಸ್ಯೆಗೆ ಬೇಸತ್ತ ರೈತ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ, ಭತ್ತ ನೋಂದಣಿ ಮಾಡಿಸಿರುವ ಅನ್ನದಾತರು
Last Updated 6 ಫೆಬ್ರುವರಿ 2023, 5:13 IST
ಅಕ್ಷರ ಗಾತ್ರ

ಮೈಸೂರು: ಮುಂಗಾರು ಋತುವಿನಲ್ಲಿ ಬೆಳೆದ ಭತ್ತ ಹಾಗೂ ರಾಗಿಯನ್ನು ಕಟಾವು ಮಾಡಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿರುವ ರೈತರಿಗೆ ಇನ್ನೂ ನೆಮ್ಮದಿ ಸಿಕ್ಕಿಲ್ಲ. ಸರ್ಕಾರದ ಹೊಸ ಷರತ್ತುಗಳು ಸೇರಿದಂತೆ ಸರ್ವರ್‌ ಸಮಸ್ಯೆಯಿಂದ ನಲುಗಿ ಹೋಗಿದ್ದಾರೆ.

2022–23ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ನೋಂದಣಿ, ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ರೈತರು ಭತ್ತ ಹಾಗೂ ರಾಗಿಯನ್ನು ಮಾರಲು ಸಿದ್ಧರಾಗಿದ್ದಾರೆ. ಎರಡು ತಿಂಗಳ ಹಿಂದೆಯೇ ಕಟಾವು
ಮಾಡಿಕೊಂಡು ಮನೆ, ಬಾಡಿಗೆ ಸ್ಥಳಗಳಲ್ಲಿ ದಾಸ್ತಾನು ಮಾಡಿದ್ದಾರೆ. ಈಗಾಗಲೇ ನೋಂದಣಿ ಮಾಡಿಸಿರುವ ರೈತರಿಗೆ ಕೇಂದ್ರದಿಂದ ಟೋಕನ್‌ ನೀಡಲಾಗಿದೆ. ಖರೀದಿ ಸಮಯ ಆರಂಭವಾಗಿ ಒಂದು ತಿಂಗಳು ಕಳೆದರೂ ಸರ್ವರ್‌ ಸಮಸ್ಯೆಯಿಂದಾಗಿ ಮಾರುಕಟ್ಟೆಗೆ ತರಲಾಗದೆ ಪರಿತಪ್ಪಿ ಸುತ್ತಿದ್ದಾರೆ. ರೈತರ ಒತ್ತಡ ಹೆಚ್ಚಾದ್ದರಿಂದ ಅಧಿಕಾರಿಗಳು ಈಗ ಮ್ಯಾನುವಲ್‌ ಆಗಿಯೇ ಖರೀದಿ ಮಾಡುವಂತೆ ಕೇಂದ್ರದವರಿಗೆ ಸೂಚಿಸಿದ್ದಾರೆ.

ರಾಜ್ಯ ಕೃಷಿ ಮಾರಾಟ ಮಂಡಳಿಯು ಖರೀದಿ ಕೇಂದ್ರದ ಮೂಲಕ ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ₹2,040 (ಸಾಮಾನ್ಯ), ₹2,060 (ಗ್ರೇಡ್‌ ಎ) ಹಾಗೂ ರಾಗಿಗೆ ₹3,578 ನಿಗದಿ ಮಾಡಿದೆ. ಡಿ.15ರಿಂದ ನೋಂದಣಿ ಆರಂಭವಾಗಿದ್ದು, ಖರೀದಿ ಮಾಡಲು ಜ.1ರಿಂದ ಮಾರ್ಚ್‌ 31ರವರೆಗೆ ಅವಧಿ ನೀಡಿದೆ.

‘ಎನ್‌ಐಸಿ (ನ್ಯಾಷನಲ್‌ ಇನ್ಫರ್ಮೇಟಿಕ್ಸ್‌ ಸೆಂಟರ್‌) ಪೋರ್ಟಲ್‌ ಸಮಸ್ಯೆಯಿಂದಾಗಿ ಗ್ರೇಡರ್‌ ಲಾಗಿನ್‌ ಆಗುತ್ತಿಲ್ಲ, ಸರಿಯಾದ ತಕ್ಷಣ ರೈತರಿಗೆ ಮಾಹಿತಿ ನೀಡುತ್ತೇವೆ’ ಎಂದು ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಅಧಿಕಾರಿ ರಾಹುಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಹೊಸ ‌ನಿಯಮದ ಪ್ರಕಾರ ಒಬ್ಬ ರೈತರಿಂದ ಪ್ರತಿ ಎಕರೆಗೆ 25 ರಿಂದ 40 ಕ್ವಿಂಟಲ್‌ ಭತ್ತ, 10ರಿಂದ 20 ಕ್ವಿಂಟಲ್‌ ರಾಗಿ ಖರೀದಿಸಲಾಗುತ್ತಿದೆ. ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರಿವೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ನಂತರವೇ ಖರೀದಿಸಲಾಗುತ್ತಿದೆ. ರೈತರೇ ಸ್ವಂತ ಖರ್ಚಿನಲ್ಲಿ ಕೇಂದ್ರಗಳಿಗೆ ಧಾನ್ಯಗಳನ್ನು ತರಬೇಕು, ರಾಗಿಯನ್ನು ಮಾರುಕಟ್ಟೆ ಆವರಣದಲ್ಲಿ ರಾಶಿ ಮಾಡಿ ಸರ್ಕಾರದಿಂದ ಕೊಡುವ ಚೀಲದಲ್ಲಿ ತುಂಬಿಸಿ ತೂಕ ಮಾಡಬೇಕಿದೆ. ಈ ನಿಯಮ ರೈತರಿಗೆ ತಲೆನೋವಾಗಿ ಪರಿಣಮಿಸಿದೆ.

ಬಹಳಷ್ಟು ರೈತರು ಈಗಾಗಲೇ ಭತ್ತವನ್ನು ಖರೀದಿ ಕೇಂದ್ರಗಳಿಗೆ ತರದೇ ಮಿಲ್‌ಗಳಿಗೆ ಮಾರಿದ್ದಾರೆ. ಮಿಲ್‌ನವರಾದರೆ ಗದ್ದೆಗಳಿಗೆ ಹೋಗಿ ಖರೀದಿ ಮಾಡುತ್ತಾರೆ. ಸಾಗಣೆ ವೆಚ್ಚ, ಚೀಲಗಳನ್ನು ಕೊಳ್ಳುವ ತಾಪತ್ರಯವೂ ತಪ್ಪುತ್ತದೆ. ಸಕಾಲಕ್ಕೆ ಹಣವೂ ಸಿಗುತ್ತದೆ ಎಂಬುದು ರೈತರ
ಅಭಿಪ್ರಾಯವಾಗಿದೆ.

ಸರ್ಕಾರದ ಹಣ ವಿಳಂಬ: ‘ದಲ್ಲಾಳಿಗಳು ಜಮೀನಿನಲ್ಲಿ ಭತ್ತ ಖರೀದಿ ಮಾಡಿ ಸ್ಥಳದಲ್ಲೇ ಹಣ ಪಾವತಿಸುವುದರಿಂದ ರೈತರು ₹1,600 ರಿಂದ ₹1,800ಕ್ಕೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ತೆರೆದಿರುವ ಖರೀದಿ ಕೇಂದ್ರಕ್ಕೆ ಸಾಗಿಸಿ, ಭತ್ತ ತೂಕ ಮಾಡಿ ಕೊಟ್ಟ ಒಂದು ತಿಂಗಳ ನಂತರ ರೈತರಿಗೆ ಹಣ ಪಾವತಿ ಮಾಡುತ್ತಾರೆ. ಕೈಸಾಲ ಮಾಡಿರುವ ರೈತರು ಒಂದು ತಿಂಗಳ ಕಾಲ ಕಾಯಲು ಸಾಧ್ಯವಾಗದ್ದರಿಂದ ದಲ್ಲಾಳಿಗಳ ಮೊರೆ ಹೋಗುತ್ತಿದ್ದಾರೆ’ ಎಂದು ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿಯ ರೈತ ಸತೀಶ್ ಮಾಹಿತಿ ನೀಡುತ್ತಾರೆ.

ಹುಣಸೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಭತ್ತ ಖರೀದಿ ಕೇಂದ್ರಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದರೂ ಇಲ್ಲಿನ ಕೇಂದ್ರ ಆರಂಭವಾಗದೆ ರೈತರು ಹೈರಾಣಾಗಿದ್ದಾರೆ. ಖರೀದಿ ಕೇಂದ್ರದಲ್ಲಿ ಸರ್ವರ್‌ ಸಮಸ್ಯೆ ಎದುರಾಗಿ ಮಾರಾಟಕ್ಕೆ ನೋಂದಣಿ ಮಾಡಿಸಿದ ರೈತರಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಸಾಲಿನಲ್ಲಿ ಜನವರಿ ಅಂತ್ಯಕ್ಕೆ ಭತ್ತ ಖರೀದಿ ಪ್ರಕ್ರಿಯೆ ಪೂರ್ಣವಾಗಿ ರಾಗಿ ಖರೀದಿ ಆರಂಭಿಸಿದ್ದರು. ಈ ವರ್ಷ ನೋಂದಣಿ ಪ್ರಕ್ರಿಯೆ ಮುಗಿದು ಖರೀದಿ ಕೇಂದ್ರ ಆರಂಭವಾಗಿದ್ದರೂ ರೈತರು ಕಾಯುವಂತಾಗಿದೆ. ಇಂಥ ಸಮಸ್ಯೆಗಳಿಂದಾಗಿ ಮಧ್ಯವರ್ತಿಗಳಿಗೆ ಮಾರಾಟ ಮಾಡುವುದೇ ಲೇಸು’ ಎಂದು ಪ್ರಗತಿಪರ ರೈತ ಮಹೇಶ್ ಹೇಳುತ್ತಾರೆ.

‘ಬೆಂಬಲ ಬೆಲೆಯೊಂದಿಗೆ ರಾಗಿ ಖರೀದಿಸಿದರೂ ಪ್ರತಿ ಚೀಲಕ್ಕೆ ₹25, ಒಂದು ಮೂಟೆ ಸಾಗಿಸಲು ₹10 ಕೂಲಿ ಮತ್ತು ಹಳ್ಳಿಯಿಂದ ಖರೀದಿ ಕೇಂದ್ರಕ್ಕೆ ಸಾಗಣೆ ವೆಚ್ಚ ಎಲ್ಲವೂ ನಮಗೆ ಹೊರೆಯಾಗಲಿದೆ’ ಎಂದು ಅವರು ಅಳಲು ತೋಡಿಕೊಂಡರು.

ನಿರ್ವಹಣೆ: ರಮೇಶ ಕೆ.
ಪೂರಕ ಮಾಹಿತಿ: ಎಚ್‌.ಎಸ್.ಸಚ್ಚಿತ್,
ಪಂಡಿತ್ ನಾಟೀಕರ್, ಬಿ.ಆರ್.ಗಣೇಶ್‌, ಸತೀಶ್‌ ಬಿ.ಆರಾಧ್ಯ, ಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT