ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವರ ಸ್ಥಿತಿ: ಗಂಭೀರ ಆಲೋಚನೆ ಅಗತ್ಯ: ಬಿ.ವೈ.ವಿಜಯೇಂದ್ರ

Last Updated 11 ಡಿಸೆಂಬರ್ 2022, 13:00 IST
ಅಕ್ಷರ ಗಾತ್ರ

ಮೈಸೂರು: ‘ವೀರಶೈವ ‌ಲಿಂಗಾಯತ ಸಮಾಜವು ಎಲ್ಲ ಜಾತಿಯವರನ್ನೂ ಒಳಗೊಳಿಸಿಕೊಂಡು ನೆರಳು‌ ಕೊಡುವ ಆಲದ ಮರ. ಆದರೆ, ಈಗ ಅದರ ಸ್ಥಿತಿಗತಿ ಹೇಗಿದೆ, ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ನಗರದ ಸುತ್ತೂರು ಶಾಖಾ ಮಠದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ, ವೀರಶೈವ ಲಿಂಗಾಯತ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಬಸವ ಬಳಗಗಳ ಒಕ್ಕೂಟದ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ‘ಬೆಳ್ಳಿ ಬೆಳಗು’ ಕಾರ್ಯಕ್ರಮದಲ್ಲಿ ಭಾನುವಾರ ನಡೆದ ‘ಯುವಸಂಕಲ್ಪ’ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಇಂದಿನ ಸೂಕ್ಷ್ಮ ರಾಜಕೀಯ ‌ಪರಿಸ್ಥಿತಿಯಲ್ಲಿ‌ ನಮ್ಮ ಸಂಸ್ಕೃತಿಯನ್ನು ಸರಿ ದಾರಿಗೆ ತೆಗೆದುಕೊಂಡು ಹೋಗಬೇಕು. ಹರಗುರುಚರಮೂರ್ತಿಗಳ ಮಾರ್ಗದರ್ಶನದಲ್ಲಿ ಯುವಜನರು ಸಮಾಜವನ್ನು ಕಟ್ಟಬೇಕು. ಸಮಾಜ ಇರುವುದೇ ನಮಗಾಗಿ ಎಂಬ ಮನೋಭಾವ ಬಿಟ್ಟು, ಸಮಾಜಕ್ಕೋಸ್ಕರ ನಾವು ಎಂಬ ಮನೋಭಾವ ಬರಬೇಕು’ ಎಂದು ಆಶಿಸಿದರು.

ಸಂಘಟಿತರಾಗಬೇಕು:

‘ಎಲ್ಲರೂ ಒಗ್ಗಟ್ಟಾಗಬೇಕು.‌ ಸಂಘಟಿತರಾಗಬೇಕು. ಈ ಮೂಲಕ‌ ರಾಜ್ಯಕ್ಕೆ ‌ಉತ್ತಮ‌ ಸಂದೇಶ ಕೊಡಬೇಕು’ ಎಂದು ತಿಳಿಸಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಮ್ಮೆಲ್ಲರ ಒತ್ತಾಸೆ ಮೇರೆಗೆ ನಗರದಲ್ಲಿ ಮಹಾಸಭಾಕ್ಕೆ ನಿವೇಶನ ಕೊಟ್ಟರು. ಆದರೆ, ಅದು ಬಳಕೆಯಾಗಿಲ್ಲ. ಅಲ್ಲಿ ಆಧುನಿಕ ಅನುಭವ ಮಂಟಪವನ್ನು ನಿರ್ಮಿಸಿ ಸಮಾಜದವರಿಗೆ ಮಾರ್ಗದರ್ಶನ ನೀಡಲು ಎಲ್ಲರೂ ಕ್ರಮ ವಹಿಸಬೇಕು’ ಎಂದು ತಿಳಿಸಿದರು.

‘ನಾನು ರಾಜಕಾರಣಕ್ಕೆ ಬರಬೇಕು ಎಂದುಕೊಂಡಿರಲಿಲ್ಲ. ಕಳೆದ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ಆಗಲಿಲ್ಲ. ಆದರೆ, ಇಡೀ ರಾಜ್ಯಕ್ಕೆ ನನ್ನನ್ನು ಪರಿಚಯವಾಯಿತು. ಹಳೇ ಮೈಸೂರು ಜನರು ಹಾಗೂ ವರುಣಾದ ಕಾರ್ಯಕರ್ತರನ್ನು ಮರೆಯಲಾಗದು. ನನಗೆ ಯಾವ ಸ್ಥಾನಮಾನ ಕೂಡ ಇಲ್ಲದಿದ್ದರೂ ಇಡೀ ನಾಡಿನ ಜನರು ಗೌರವದಿಂದ ಕಾಣುತ್ತಿದ್ದಾರೆ. ಹೀಗಾಗಿ ನನ್ನ ಜವಾಬ್ದಾರಿ ಜಾಸ್ತಿಯಾಗಿದೆ. ತಂದೆಯಂತೆಯೇ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿಕೊಂಡು ಸೇವಾ ಕಾರ್ಯ ಮುಂದುವರಿಸುತ್ತೇನೆ’ ಎಂದರು.

ಬಸವಣ್ಣ ನಮ್ಮನವು:ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ‘ಬಸವಣ್ಣ ಒಂದು ಜಾತಿಗೆ ಸೀಮಿತವಾದವರಲ್ಲ ನಿಜ. ಆದರೆ, ಬಸವಣ್ಣ ನಮ್ಮವನು‌. ಆತನ ಹಕ್ಕುಸ್ವಾಮ್ಯವನ್ನು ನಾವು ಪಡೆದುಕೊಂಡಿದ್ದೇವೆ’ ಎಂದು ಪ್ರತಿಪಾದಿಸಿದರು.

‘ಗುರು ಹಾಕಿಕೊಟ್ಟ ಮಾರ್ಗದಲ್ಲಿ ಉತ್ತಮವಾಗಿ ಬೆಳೆದು ಹೋಗುವವರು ನಿಜವಾದ ಶಿಷ್ಯರಾಗುತ್ತಾರೆ. ಹೀಗಿರುವಾಗ, ಬಸವಣ್ಣನಂತಹ ಮಹಾನ್ ಸಂತರ ವಾರಸುದಾರರಾಗಬೇಕಾದರೆ ನಮಗೆಷ್ಟು ಜವಾಬ್ದಾರಿ ಇರಬೇಕಲ್ಲವೇ? ನಾವೆಲ್ಲರೂ ಬಸವಣ್ಣನ ನಿಜವಾದ ವಾರಸುದಾರರಾಗಬೇಕು’ ಎಂದರು.

‘ಸಮಾಜ ಸಂಕೀರ್ಣ ಸ್ಥಿತಿಯಲ್ಲಿದೆ. ಬಹಳಷ್ಟು ಗೊಂದಲ, ಅವ್ಯವಸ್ಥೆಗಳಿವೆ. ಯುವಜನರು ಯಾವ ಕಡೆ ಹೋಗುತ್ತಿದ್ದಾರೆ ಎನ್ನುವುದು ಮುಖಂಡರು ಹಾಗೂ ಮಠಾಧಿಪತಿಗಳಿಗೆ ಅರ್ಥವಾಗುತ್ತಿಲ್ಲ. ಸಮಸ್ಯೆ ಅರಿಯದೇ ಪರಿಹಾರ ಕೊಡುವುದು ಸಾಧ್ಯವಾಗುವುದಿಲ್ಲ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಕೆ.ಅಬ್ಬಿಗೆರೆ ಮಾತನಾಡಿದರು.

‘ಮಠಗಳ ಉಳಿವು ಯುವ ಸಂಕಲ್ಪವಾಗಲಿ’
‘ಯುವಜನರಿಗೆ ಆದರ್ಶಗಳಿಲ್ಲ. ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವವರಿಲ್ಲ. ಅವರು ಕೆಟ್ಟರೆ ದೇಶಕ್ಕೆ ಭವಿಷ್ಯವಿಲ್ಲ. ಹದ ತಪ್ಪಿ ಕುಟ್ಟಿದರೆ ಭತ್ತವು ಅಕ್ಕಿಯಾಗುವುದಿಲ್ಲ, ನುಚ್ಚಾಗುತ್ತದೆ’ ಎಂದು ಶರತ್‌ಚಂದ್ರ ಸ್ವಾಮೀಜಿ ಉದಾಹರಣೆ ನೀಡಿದರು.

‘ಪ್ರತಿ ಕ್ಷೇತ್ರದಲ್ಲೂ ನಮ್ಮ ಸಮಾಜದವರ ಸಂಖ್ಯೆ ಕ್ಷೀಣಿಸಿದೆ. ಪರಿಣಾಮ, ಶೂನ್ಯಾವಸ್ಥೆಯಲ್ಲಿ ಸಿಲುಕಿದೆ. ನಾಯಕರು ಐದುನೂರು ಉಪನಾಯಕರನ್ನು ಬೆಳೆಸಬೇಕು. ಆಗ ಸಮಾಜವನ್ನು ಬೆಳೆಸಬಹುದಾಗಿದೆ’ ಎಂದರು.

‘ಮಠಗಳಿದ್ದರಷ್ಟೆ ನಾವು ಎನ್ನುವುದನ್ನು ಮರೆಯಬಾರದು. ಎಲ್ಲ ಮಠಗಳಿಗೂ ಉದಾರವಾಗಿ ಅನುದಾನ ನೀಡಿ ಅನುಕೂಲ ಮಾಡಿಕೊಟ್ಟ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ಮರಿಸಬೇಕು. ಮಠಗಳನ್ನು ಉಳಿಸುವುದು ಯುವ ಸಂಕಲ್ಪವಾಗಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT