ಶುಕ್ರವಾರ, ಮಾರ್ಚ್ 24, 2023
31 °C
‘ಕ್ಯಾಮರಾ v/s ಕುವೆಂಪು’ ಪುಸ್ತಕ ಬಿಡುಗಡೆ

ಕುವೆಂಪುಗೆ ಭಾರತರತ್ನ: ಮೂಡ್ನಾಕೂಡು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಯಾರ್‍ಯಾರಿಗೋ ಪ್ರಶಸ್ತಿಗಳು ಸಿಗುತ್ತಿವೆ. ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತರತ್ನ ಪುರಸ್ಕಾರ ನೀಡಬೇಕು’ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

ಶಾಂತವೇರಿ ಜನವೇದಿಕೆ ಕರ್ನಾಟಕ ಸಹಕಾರದಲ್ಲಿ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಭಾನುವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಪಾಕರ–ಸೇನಾನಿ ವಿರಚಿತ ‘ಕ್ಯಾಮರಾ v/s ಕುವೆಂಪು’ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ಕುವೆಂಪು ಮುಂದಿನ ಜನಾಂಗಕ್ಕೆ ಏನು ಬೇಕು ಮತ್ತು ಏನಾಗಬಹುದು ಎಂಬುದನ್ನು ಹೇಳಿರುವ ಮಹಾಶಯರು. ಕುವೆಂಪು ಕ್ರಾಂತಿಕಾರಿ ಕವಿತೆಗಳು ಇಂದಿಗೂ ಸಲ್ಲುವಂಥವು. ದಾರ್ಶನಿಕ ಕವಿಯಾದ ಅವರು, ಪಂಚಮಂತ್ರ ಹಾಗೂ ಸಪ್ತಸೂತ್ರಗಳನ್ನು ನೀಡಿದ್ದಾರೆ. ಅವುಗಳಿಗೆ ತದ್ವಿರುದ್ಧವಾಗಿ ಇಂದಿನ ವಿದ್ಯಮಾನಗಳೆಲ್ಲವೂ ನಡೆಯುತ್ತಿವೆ’ ಎಂದರು.

‘ಇಂದು ವಿಶ್ವಪಥವಿಲ್ಲ. ಸರ್ವೋದಯವಿಲ್ಲ. ಸಮನ್ವಯವನ್ನು ಕೇಳುವಂತೆಯೇ ಇಲ್ಲ. ಮನುಜ ಮತವಿಲ್ಲ; ಪೂರ್ಣದೃಷ್ಟಿಯಂತೂ ಇಲ್ಲವೇ ಇಲ್ಲ. ಕುವೆಂಪು ಹಾಗೂ ಅಂಬೇಡ್ಕರ್‌ ದಾರ್ಶನಿಕತೆಗೆ ವಿರುದ್ಧವಾದ ಕಾಲದಲ್ಲಿ ನಾವು ಬದುಕುತ್ತಿದ್ದೇವೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ವರ್ಣಾಶ್ರಮವನ್ನು ಧಿಕ್ಕರಿಸಿ, ಜಾತಿ ಪ್ರಜ್ಞೆಯನ್ನು ನಿರಾಕರಿಸಿ ಎಂದು ಕುವೆಂಪು ಹೇಳಿದ್ದರು. ಆದರೆ, ಅದು ಆಗುತ್ತಿಲ್ಲ. ಅಧ್ಯಾತ್ಮವನ್ನು ವೈಜ್ಞಾನಿಕವಾಗಿ ಗ್ರಹಿಸಬೇಕು ಎಂದಿದ್ದರು. ಅದು ಸಾಧ್ಯವೇ ಆಗುತ್ತಿಲ್ಲ. ವಿಶ್ವಮಾನವರೂ ಆಗುತ್ತಿಲ್ಲ. ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಈ ಯಾವುದೂ ಏಕೈಕ ಪರಮ‍ಪೂಜ್ಯ ಗ್ರಂಥವಾಗಬಾರದು. ಆದರೆ, ಈಗ ಅದಕ್ಕೆ ವಿರುದ್ಧವಾಗಿ ಎಲ್ಲವೂ ನಡೆಯುತ್ತಿದೆ. ಒಂದು ಗ್ರಂಥವನ್ನು ಪರಮಪೂಜ್ಯ ಎನ್ನಲಾಗುತ್ತಿದೆ’ ಎಂದು ಹೇಳಿದರು.

‘ಯಥಾಸ್ಥಿತಿವಾದಕ್ಕೆ ನಮ್ಮನ್ನು ತಳ್ಳುತ್ತಿದ್ದಾರೆ. ಹೀಗಾಗಿ, ಬದಲಾವಣೆ ಕಷ್ಟ’ ಎಂದರು.

ಚಿತ್ರನಟ ಪ್ರಕಾಶ್ ರಾಜ್ ಮಾತನಾಡಿದರು. ಪುಸ್ತಕ ಪ್ರಕಾಶನದ ಪ್ರೊ.ಬಿ.ಎನ್.ಶ್ರೀರಾಮ್‌, ಕೃಪಾಕರ–ಸೇನಾನಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು