ಬೆಟ್ಟದಪುರ: ಸಮೀಪದ ಭುವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಣಸೂರಿನ ಸರ್ಕಾರಿ ಜಾಗ ಮಾಲೀಕತ್ವ ಸಂಬಂಧ ಎರಡು ಸಮುದಾಯಗಳ ನಡುವೆ ಉಂಟಾಗಿದ್ದ ಘರ್ಷಣೆಯನ್ನು ಪೊಲೀಸರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಬಗೆಹರಿಸಿದರು.
ಗ್ರಾಮದ ಮಧ್ಯ ಭಾಗದ ಸರ್ಕಾರಿ ಜಾಗದ ಮಾಲೀಕತ್ವದ ಸಂಬಂಧ ಗ್ರಾಮದ ಮೇದಗಿರಿ ಸಮುದಾಯ ಹಾಗೂ ಕುಂಬಾರ ಶೆಟ್ಟಿ ಸಮುದಾಯದ ನಡುವೆ ಹಲವು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು.
ಕೆಲ ದಿನಗಳ ಹಿಂದೆ ಮೇದಗಿರಿ ಸಮುದಾಯದವರು ಅಲ್ಲಿ ಮೇದರ ಕೇತೇಶ್ವರ ಕ್ಷೇಮಾಭಿವೃದ್ಧಿ ಸಂಘ ಎಂಬ ನಾಮಫಲಕ ಅಳವಡಿಸಿದ ಬಳಿಕ ಮಾತಿನ ಚಕಮಕಿ ನಡೆದಿತ್ತು.
ದಲಿತ ಮುಖಂಡ ಕೆ.ಬಿ.ಮೂರ್ತಿ ಮಾತನಾಡಿ, ‘ದಲಿತರಿಗೆ ಅನ್ಯಾಯವಾಗುತ್ತಿದೆ. ಮೇದಗಿರಿ ಸಮುದಾಯದವರಿಗೆ ಗುಡಿ ಕೈಗಾರಿಕೆ ಪ್ರಾರಂಭಿಸಲು ಗುರುತಿಸಿರುವ ಸ್ಥಳವನ್ನು ನಿಗದಿ ಮಾಡಿಕೊಡಬೇಕೆಂಬ ಮನವಿಗೆ ಸ್ಪಂದನೆ ದೊರೆತಿಲ್ಲ’ ಎಂದು ದೂರಿದರು.
‘ಕುಂಬಾರಶೆಟ್ಟಿ ಸಮುದಾಯಕ್ಕೆ ಸಮುದಾಯ ಭವನ, ರಾಮಮಂದಿರವಿದ್ದರೂ ನಮಗೆ ಮೀಸಲಾಗಿರುವ ಜಾಗಕ್ಕಾಗಿ ವಾದ ಮಾಡುತ್ತಿದ್ದಾರೆ’ ಎಂದು ದೂರಿದರು.
ಮೇದ ಗಿರಿ ಸಮುದಾಯದ ಮುಖಂಡ ಪಾಲಾಕ್ಷ ಮಾತನಾಡಿ, ‘ಕ್ಷೇಮಾಭಿವೃದ್ಧಿ ಸಂಘದ ಸಭೆ ನಡೆಸಲು ಸ್ಥಳವಿಲ್ಲ. ಗ್ರಾಮ ಪಂಚಾಯಿತಿಗೆ ಸಲ್ಲಿಸಿದ ಅರ್ಜಿಗೆ ಸ್ಪಂದನೆ ಸಿಗದೆ ನಾಮಫಲಕ ಅಳವಡಿಸಿದ್ದೇವೆ’ ಎಂದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜೇಗೌಡ ಮಾತನಾಡಿ, ‘ಸರ್ಕಾರದ ಈ ಜಾಗಕ್ಕೆ ಎರಡು ಸಮುದಾಯದವರು ಅರ್ಜಿ ಸಲ್ಲಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
ಇದೇ ವೇಳೆ ಮೇದ ಗಿರಿ ಸಮುದಾಯದವರು ಅಳವಡಿಸಿದ್ದ ನಾಮಫಲಕವನ್ನು ಪೊಲೀಸರು ತೆರವುಗೊಳಿಸಿದರು. ಅತಿ ಕ್ರಮ ಪ್ರವೇಶ ನಿಷೇಧಿಸಲಾಗಿದೆ ಎಂದು ಪಂಚಾಯಿತಿಯಿಂದ ನಾಮಫಲಕ ಅಳವಡಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ದೇವರಾಜು, ಉಪಾಧ್ಯಕ್ಷ ಮಮತಾ, ಪಿಎಸ್ಐ ಪ್ರಕಾಶ್ ಎಂ.ಎತ್ತಿನಮನಿ, ರಾಜಶೇಖರ್, ಶಿವಣ್ಣ, ಗಿರೀಶ್, ಕುಮಾರ್ ಸೀನಾ, ಸತ್ಯಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.