ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್ ಹಗರಣದ ವರದಿ ಸಂಪುಟದಲ್ಲಿ ಮಂಡನೆ: ಸಿದ್ದರಾಮಯ್ಯ

Published : 4 ಸೆಪ್ಟೆಂಬರ್ 2024, 5:18 IST
Last Updated : 4 ಸೆಪ್ಟೆಂಬರ್ 2024, 5:18 IST
ಫಾಲೋ ಮಾಡಿ
Comments

ಮೈಸೂರು: ‘ಕೋವಿಡ್ ಅವಧಿಯಲ್ಲಿ ನಡೆದ ಅಕ್ರಮಗಳ ಕುರಿತು ತನಿಖಾ ಆಯೋಗವು ನೀಡಿರುವ ವರದಿಯನ್ನು ಗುರುವಾರ ಸಂಪುಟ ಸಭೆಯ ಮುಂದೆ ಇಡಲಾಗುವುದು. ನಂತರವಷ್ಟೇ ಕ್ರಮದ ಕುರಿತು ನಿರ್ಧರಿಸುತ್ತೇವೆ’ ಎಂದು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ತನಿಖೆಯ ವರದಿಯನ್ನು ನಾನೇ ಇನ್ನೂ ನೋಡಿಲ್ಲ. ವಿರೋಧ ಪಕ್ಷಗಳಿಗೆ ಕೊಟ್ಟವರು ಯಾರು? ಅದನ್ನು ನೋಡದೆಯೇ ಮಾತನಾಡುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ರಾಜಕೀಯ ಉದ್ದೇಶದಿಂದ ವರದಿ ತರಿಸಲಾಗಿದೆ’ ಎಂದು ಸಂಸದ ಸುಧಾಕರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರಿಗೆ ತಾನೇನು ತಪ್ಪು ಮಾಡಿದ್ದೇನೆ ಎಂಬ ಅರಿವಿದೆ. ಹೀಗಾಗಿ ವರದಿ ಬಹಿರಂಗವಾಗುವುದಕ್ಕೂ ಮುಂಚೆಯೇ ಟೀಕಿಸುತ್ತಿದ್ದಾರೆ. ಕುಂಬಳಕಾಯಿ‌ ಕಳ್ಳ ಎಂದರೆ ಅವರು ಹೆಗಲು ಮುಟ್ಟಿ ನೋಡಿಕೊಳ್ಳುವುದು ಏಕೆ’ ಎಂದು ಪ್ರಶ್ನಿಸಿದರು.

‘ಆಯೋಗದ ವರದಿ ಆಧರಿಸಿ ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಯಾರು ತಪ್ಪು ಮಾಡಿದ್ದರೂ ಕ್ರಮ ವಹಿಸಲಾಗುವುದು’ ಎಂದರು.

‘2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗುವುದಿಲ್ಲವಾದರೂ ಅನ್ವಯ ಮಾಡಿದ್ದಾರೆ ಎಂದು ಅಮಾನತು ಆದೇಶದಲ್ಲಿದೆ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ‘ಆ ಬಗ್ಗೆ ಮಾಹಿತಿ ಇಲ್ಲ’ ಎಂದರು.

‘ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ. ಅವರು ಒಪ್ಪಿಗೆ ಕೊಟ್ಟರೆ ಸಿ.ಎಂ ಆಗುವೆ’ ಎಂಬ ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆಗೆ ಪ್ರತಿಕ್ರಿಯಿಸಿ ‘ಮುಖ್ಯಮಂತ್ರಿಯನ್ನು ಶಾಸಕರು, ಪಕ್ಷದ ವರಿಷ್ಠರು ಆಯ್ಕೆ ಮಾಡುತ್ತಾರೆ’ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ವಿಳಂಬ ಕುರಿತು ಪ್ರತಿಕ್ರಿಯಿಸಿ, ‘ಬಹುತೇಕರಿಗೆ ವೇತನ ನೀಡಲಾಗಿದೆ. ವಿಳಂಬವಾಗಿದ್ದರೆ ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT