ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವಡಿಗಿಂತ ಪ್ರೇರೇಪಣೆ ಮತ್ತೊಂದಿಲ್ಲ: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ

Last Updated 30 ಸೆಪ್ಟೆಂಬರ್ 2022, 15:28 IST
ಅಕ್ಷರ ಗಾತ್ರ

ಮೈಸೂರು: ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಪ್ರೇರೇಪಣೆ ಮತ್ತೊಂದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತ್ಯುತ್ಸವ ಸಮಿತಿ ಹಾಗೂ ಅರಸು ಬಳಗಗಳ ಒಕ್ಕೂಟದ ಸಹಯೋಗದಲ್ಲಿ ಅರಮನೆಯ ಮೈದಾನದಲ್ಲಿ ಶುಕ್ರವಾರ ನಡೆದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜರ್ಷಿಯು ಎಲ್ಲರಿಗೂ ಸ್ಫೂರ್ತಿಯಾಗಬೇಕು. ಅವರ ಕೊಡುಗೆಗಳ ಬಗ್ಗೆ ಎಷ್ಟು ಮೆಚ್ಚುಗೆ ವ್ಯಕ್ತಪಡಿಸಿದರೂ ಸಾಲುವುದಿಲ್ಲ. ಯಾರಾದರೂ ಜನಪರವಾಗಿ ಕೆಲಸ ಮಾಡಿದ್ದರೆ, ಸರ್ವಸ್ವವನ್ನೂ ಸಮಾಜಕ್ಕೆ ಅರ್ಪಿಸಿದ್ದರೆ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್. ಯಾವುದೇ ಸರ್ಕಾರ ಹಾಗೂ ಸಾಮ್ರಾಜ್ಯವೂ ಇಂತಹ ಕೆಲಸ ಮಾಡಿಲ್ಲ. ಎಲ್ಲರೂ ಅವರಂತೆಯೇ ಕೆಲಸ ಮಾಡಿದ್ದಿದ್ದರೆ ಪ್ರಪಂಚದಲ್ಲಿ ಅತ್ಯಂತ ಮುಂದುವರಿದ ರಾಜ್ಯ ನಮ್ಮದಾಗಿರುತ್ತಿತ್ತು’ ಎಂದರು.

ಮಕ್ಕಳಿಗೆ ಪರಿಚಯಿಸಿ:‘ಅವರನ್ನು ಸ್ಫೂರ್ತಿಯಾಗಿ ತೆಗೆದುಕೊಂಡು, ಮಾಡುವ ಕೆಲಸದಲ್ಲಿ ಉತ್ತಮ ಗುಣಮಟ್ಟ ಕಾಯ್ದುಕೊಂಡರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪೋಷಕರು ಮಕ್ಕಳಿಗೆ ನಾಲ್ವಡಿ ಅವರನ್ನು ಪರಿಚಯಿಸಿ, ಪ್ರೇರೇಪಣೆ ಕೊಡಬೇಕು’ ಎಂದು ಸಲಹೆ ನೀಡಿದರು.

ವಿಮರ್ಶಕ ಡಾ.ಎಚ್.ಎಸ್.ಸತ್ಯನಾರಾಯಣ ಮಾತನಾಡಿ, ‘ನಾಲ್ವಡಿ ಅತ್ಯಂತ ಪ್ರಜಾಪ್ರೇಮಿಯಾಗಿ ಕೆಲಸ ಮಾಡಿದವರು.‌ ಮಾತೃ ಹೃದಯಿಯಾಗಿದ್ದರು. ಆರ್ಥಿಕ, ಸಾಮಾಜಿಕವಾಗಿ ಅವರ ಕೊಡುಗೆ ಅಪಾರವಾಗಿದೆ. ಮೀಸಲಾತಿ ವ್ಯವಸ್ಥೆಯನ್ನು ಮೊದಲಿಗೆ ಪರಿಚಯಿಸಿದವವರು’ ಎಂದು ಸ್ಮರಿಸಿದರು.

ಪ್ರಶಸ್ತಿ ಪ್ರದಾನ: ಮೈಸೂರಿನ ಎಲ್.ಶಿವಲಿಂಗಪ್ಪ (ವರ್ಣಚಿತ್ರ ಕಲೆ), ರತ್ನಾ ಬಿ.ಶೆಟ್ಟಿ (ವಿಶೇಷ ಮಕ್ಕಳ ಸಬಲೀಕರಣ ಸೇವೆ), ಡಿ.ಮಾದೇಗೌಡ (ಸಮಾಜಸೇವೆ), ಬಿ.ಎಸ್.ಹರೀಶ್ (ಪತ್ರಿಕೋದ್ಯಮ), ಶ್ರೀಧರರಾಜೇ ಅರಸು (ಶಿಕ್ಷಣ), ಮಂಡ್ಯದ ಕೆ.‍ಪಿ.ಅರುಣಾಕುಮಾರಿ (ರೋಗಿಗಳ ಶುಶ್ರೂಷೆ–ಮಮತೆಯ ಮಡಿಲು), ಚಾಮರಾಜನಗರದ ಸಿ.ಎಂ.ನರಸಿಂಹಮೂರ್ತಿ (ಜಾನಪದ), ಹಾಸನದ ಜಿ.ಮಹಾಂತಪ್ಪ (ಸಮಾಜಸೇವೆ) ಅವರಿಗೆ ‘ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೈಸೂರಿನ ‘ಶಕ್ತಿಧಾಮ’ ಸಂಸ್ಥೆ ಪರವಾಗಿ ವಕೀಲೆ ಸುಮನಾ ಪ್ರಶಸ್ತಿ ಸ್ವೀಕರಿಸಿದರು. ಚಾಮರಾಜನಗರದ ಮಲೆಯೂರು ಗುರುಸ್ವಾಮಿ (ಸಾಹಿತ್ಯ) ಗೈರು ಹಾಜರಾಗಿದ್ದರು.

ನಗದು ಸೇರಿಸಿ:ಆಯ್ಕೆ ಸಮಿತಿಯಲ್ಲಿದ್ದ ಲೇಖಕ ಪ್ರೊ.ಸಿ.ನಾಗಣ್ಣ ಮಾತನಾಡಿ, ‘ಅತ್ಯಂತ ಪಾರದರ್ಶಕ, ನ್ಯಾಯ ಸಮ್ಮತವಾಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಿದ್ದೇವೆ. ವಿವಿಧ ವರ್ಗಗಳಿಗೆ ಆದ್ಯತೆ ಕೊಟ್ಟಿದ್ದೇವೆ. ಪ್ರಶಸ್ತಿಯೊಂದಿಗೆ ನಗದನ್ನೂ ನೀಡಬೇಕು’ ಎಂದು ಸಚಿವ ಎಸ್.ಟಿ.ಸೋಮಶೇಖರ್‌ ಅವರನ್ನು ಕೋರಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಡಿ.ಮಾದೇಗೌಡ, ‘ವಿವಿಧ ಸಂಸ್ಥಾನಗಳಿದ್ದರೂ ಪ್ರಗತಿಪರ ಆಡಳಿತ ನಡೆಸಿದವರು ನಾಲ್ವಡಿಯವರು ಮಾತ್ರ. ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿಯನ್ನು‌ ಮೊಟ್ಟ ಮೊದಲಿಗೆ ‌ಸ್ಥಾಪಿಸಿದ್ದರಿಂದಲೇ ಮೈಸೂರು ಇಂದು ವ್ಯವಸ್ಥಿತವಾಗಿ ರೂಪಗೊಂಡಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ನಾಡಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡೆಗೆ ಅಪಾರವಾಗಿದೆ. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುವ ಮೂಲಕ ಅಳಿಲು ಸೇವೆ ಮಾಡುತ್ತಿದ್ದೇನೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿ.ಪಂ. ಸಿಇಒ ಡಾ.ಬಿ.ಆರ್.ಪೂರ್ಣಿಮಾ, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಇದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT