ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ ಪರಿಣಾಮಕಾರಿ ಜಾರಿಗೆ ಕ್ರಮ: ಡಿಸಿ

ಜಿಲ್ಲೆಯಲ್ಲಿ ಮಹಿಳಾ ಮತದಾರರೇ ಹೆಚ್ಚು: ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮಾಹಿತಿ
Last Updated 30 ಮಾರ್ಚ್ 2023, 5:11 IST
ಅಕ್ಷರ ಗಾತ್ರ

ಮೈಸೂರು: ‘ಜಿಲ್ಲಾ ವ್ಯಾಪ್ತಿಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಪರಿಣಾಮಕಾರಿ ಯಾಗಿ ಜಾರಿಗೆ ತರಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇ 10ರಂದು ಚುನಾವಣೆ ನಡೆಯಲಿದ್ದು, ಬುಧವಾರದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಜಾರಿಯಲ್ಲಿ ಇರಲಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 26,22,551 ಮತದಾರರಿದ್ದು, ಮಹಿಳಾ ಮತದಾರರೇ ಹೆಚ್ಚಿದ್ದಾರೆ (13,21,316). ಈ ಬಾರಿ 47,812 ಯುವ ಮತದಾರರು ಮೊದಲ ಬಾರಿ ಮತದಾನದ ಹಕ್ಕನ್ನು ಚಲಾಯಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಪರಿಷ್ಕೃತ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ನಮೂನೆ–6 ಕೊಡಲು ಅವಕಾಶವಿದ್ದು, ಪಟ್ಟಿಯಲ್ಲಿ ಸೇರಿಸಲು 8ರಿಂದ 10 ದಿನ ಬೇಕಾಗುತ್ತದೆ. ಹೀಗಾಗಿ ಏಪ್ರಿಲ್ 11ರೊಳಗೆ ಅರ್ಜಿ ಸಲ್ಲಿಸಬೇಕು. 11ರ ನಂತರ ಬರುವ ಅರ್ಜಿಗಳ ಪ್ರಕ್ರಿಯೆಯನ್ನು ಚುನಾವಣೆ ನಂತರವೇ ನಡೆಸಲಾಗುವುದು’ ಎಂದು ಹೇಳಿದರು.

‘ಎಲ್ಲ ಮತಗಟ್ಟೆಗಳಲ್ಲೂ ಮತಗಟ್ಟೆ ಅಧಿಕಾರಿ ಹೆಸರು ಹಾಗೂ ಫೋನ್‌ ಸಂಖ್ಯೆಗಳನ್ನು ಬರೆಸಿದ್ದು, ಮತದಾರರ ಸ್ನೇಹಿಯಾಗಿ ಕೆಲಸ ಮಾಡಲಾಗಿದೆ. ಮತದಾರರು ಮೃತಪಟ್ಟಿದ್ದರೆ ಪಟ್ಟಿಯಿಂದ ತೆಗೆದುಹಾಕಲು ಕೆಲವೊಂದು ವೇಳೆ ಆಗಿರುವುದಿಲ್ಲ. ಮೃತಪಟ್ಟವರನ್ನು ಗುರುತು ಮಾಡಿ ಇಟ್ಟುಕೊಂಡಿದ್ದು, ಮತದಾನಕ್ಕೆ ಅವಕಾಶ ನೀಡುವುದಿಲ್ಲ’ ಎಂದರು.

‘31,754 ಅಂಗವಿಕಲ ಮತದಾರರು ಇದ್ದು, 80 ವರ್ಷ ಮೇಲ್ಪಟ್ಟವರು 84,917 ಮಂದಿ ಇದ್ದಾರೆ. ಮತಗಟ್ಟೆಗೆ ಬಾರಲು ಸಾಧ್ಯವಿಲ್ಲದವರಿಗೆ ಅಂಚೆ ಮತದಾನ ಮಾಡುವ ಅವಕಾಶ ನೀಡಲಾಗಿದ್ದು, ಮತಗಟ್ಟೆ ಅಧಿಕಾರಿಗಳ ಮೂಲಕ 12 ‘ಡಿ’ ಅರ್ಜಿಯನ್ನು ಮನೆ– ಮನೆಗೆ ತೆರಳಿ ಭರ್ತಿ ಮಾಡಲಾಗುವುದು. ಮತದಾನಕ್ಕೆ 3 ದಿನ ಮುಂಚಿತವಾಗಿ ವಿಶೇಷ ಮತಗಟ್ಟೆ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಭದ್ರತಾ ಸಿಬ್ಬಂದಿ, ವಿಡಿಯೊ ಗ್ರಾಫರ್‌ಗಳೊಂದಿಗೆ ಅಂಚೆ ಮತಪತ್ರಗಳನ್ನು ತೆಗೆದುಕೊಂಡು ಗುಪ್ತ ಮತದಾನಕ್ಕೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

‘2,905 ಮತಗಟ್ಟೆಗಳು ಇದ್ದು, ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚು ಮಾದರಿ ಮತಗಟ್ಟೆಗಳನ್ನು ಮಾಡಲಾಗಿದೆ. ಪ್ರತಿ ಕ್ಷೇತ್ರದಲ್ಲಿ 5 ಪಿಂಕ್‌ ಮತಗಟ್ಟೆ, ಬುಡಕಟ್ಟು ಸಮುದಾಯಗಳಿರುವ ಹಾಡಿಗಳಲ್ಲಿ ಸಾಂಪ್ರದಾಯಿಕವಾದ ‘ಎತ್ನಿಕ್‌’ ಮತಗಟ್ಟೆಗಳನ್ನು ಸ್ಥಾಪಿಸಲಾ ಗುವುದು’ ಎಂದರು.

ಇವಿಎಂ, ವಿವಿ ಪ್ಯಾಟ್‌ ನಿಗಾ: ಜಿಲ್ಲೆಯಲ್ಲಿ ಎಲ್ಲ ಮತಗಟ್ಟೆಗಳಲ್ಲಿ ಬಳಸಲಾಗುವ ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ವಿವಿ ಪ್ಯಾಟ್‌ಗಳನ್ನು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರು ಪರಿಶೀಲನೆ ನಡೆಸಿ, ಭದ್ರತೆ ಕಲ್ಪಿಸಲಾಗಿದೆ. ಮೂರ್ನಾಲ್ಕು ದಿನದಲ್ಲಿ ಪರಿಶೀಲನೆ ನಡೆಸಿ ವಿಧಾನಸಭಾ ಕ್ಷೇತ್ರಗಳ ಸ್ಟ್ರಾಂಗ್‌ರೂಂಗಳಿಗೆ ಪಾರದರ್ಶಕವಾಗಿ ಕಳುಹಿಸಿಕೊಡುವ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

‘ಕಂಟ್ರೋಲ್‌ ರೂಂಗಳನ್ನು ತೆರೆಯಲಾಗಿದ್ದು, 2,905 ಮತಗಟ್ಟೆಗಳಿಗೆ 16 ಸಾವಿರ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬೇಕಿದೆ. ನೇಮಕ ಪ್ರಕ್ರಿಯೆ ನಡೆದಿದೆ. ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಲಯಾಧಿಕಾರಿ, ಫ್ಲೈಯಿಂಗ್‌ ಸ್ಕ್ವಾಡ್‌, ಸ್ಥಿರ ಕಣ್ಗಾವಲು ತಂಡ, ವಿಡಿಯೊ ತಂಡ, ವಿಡಿಯೊ ಕಣ್ಗಾವಲು ತಂಡ, ಸಹಾಯಕ ಚುನಾವಣಾ ಪರಿಶೀಲನಾ ತಂಡಗಳನ್ನು ರಚಿಸಲಾಗಿದ್ದು, ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲಾಗಿದೆ’ ಎಂದರು.

‘ಸಿ–ವಿಜಿಲ್ ಆ್ಯಪ್‌ ಬಿಡುಗಡೆ ಮಾಡಲಾಗಿದ್ದು, ಚುನಾವಣಾ ಅಕ್ರಮಗಳು ನಡೆಯುತ್ತಿದ್ದರೆ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದರೆ ಸ್ಥಳದಿಂದಲೇ ದೂರು ದಾಖಲಿಸುವ ಅವಕಾಶವನ್ನು ನೀಡಲಾಗಿದೆ. ಹೆಸರು ದಾಖಲಾಗುವುದಿಲ್ಲ. ಪ್ರಜ್ಞಾವಂತ ಮತದಾರರು ವ್ಯಾಪಕವಾಗಿ ಬಳಕೆ ಮಾಡಬೇಕು. ದೂರು ನೀಡಿದರೆ 100 ನಿಮಿಷದಲ್ಲಿ ಸ್ಥಳ ಪರಿಶೀಲಿಸಿ, ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ತಿಳಿಸಿದರು.

‘ಅನುಮತಿ ತೆಗೆದುಕೊಂಡೇ ಚುನಾವಣಾ ಪ್ರಚಾರ ಮಾಡಬೇಕು. ಪ್ರಚಾರಕ್ಕೆ ಬಳಸುವ ಕರಪತ್ರಗಳ, ಪೋಸ್ಟರ್‌, ಬಿಲ್‌ಗಳಲ್ಲಿ ಕಡ್ಡಾಯವಾಗಿ ಪ್ರಕಾಶನದ ಮಾಹಿತಿ ಕಡ್ಡಾಯವಾಗಿ ಮುದ್ರಿಸಬೇಕು. ಜಾಹೀರಾತು ಪ್ರಕಟಿಸುವ ಮುನ್ನ ಚುನಾವಣಾ ನೀತಿ ಸಂಹಿತಿ ತಂಡಕ್ಕೆ ಗಮನಕ್ಕೆ ತಂದು ಪ್ರಮಾಣ ‍ಪತ್ರಪಡೆದುಕೊಳ್ಳಬೇಕು. ನಿಯಮ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ಪ್ರತಿನಿಧಿ ಕಾಯ್ದೆ–1951, ಚುನಾವಣಾ ಪ್ರಕ್ರಿಯೆ ನಿಯಮಗಳು ಸೇರಿದಂತೆ ಬೇರೆ ಬೇರೆ ಕಾಯ್ದೆಗಳ ಅನ್ವಯ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ಕಾರ್ಯಕ್ರಮಗಳು ನಡೆಸಲು ಸಂಘ– ಸಂಸ್ಥೆಗಳು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು. ರಾಜಕೀಯ ಪ್ರಚಾರದ ಭಾಗವಾಗಿದ್ದರೆ ಕ್ರಮ ವಹಿಸಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈಗಾಗಲೇ ಆರಂಭವಾಗಿರುವ ಅಭಿವೃದ್ಧಿ ಕಾಮಗಾರಿಗಳು ಮುಂದುವರಿ ಯಲಿವೆ’ ಎಂದು ತಿಳಿಸಿದರು

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ನಗರ ಪೊಲೀಸ್‌ ಕಮಿಷನರ್‌ ರಮೇಶ್‌ ಬಾನೋತ್‌, ಎಸ್‌ಪಿ ಸೀಮಾ ಲಾಟ್ಕರ್‌, ಜಿ.ಪಂ. ಸಿಇಒ ಕೆ.ಎಂ.ಗಾಯತ್ರಿ ಇದ್ದರು.

‘₹ 50 ಸಾವಿರದ ಮಿತಿ’

‘ದಾಖಲೆಯಿಲ್ಲದೆ ₹ 50 ಸಾವಿರಕ್ಕಿಂತ ಹೆಚ್ಚು ಹಣ ತೆಗೆದುಕೊಂಡು ಹೋಗುತ್ತಿದ್ದರೆ ವಶಕ್ಕೆ ಪಡೆಯಲಾಗುವುದು. ಕ್ರಮವಹಿಸಲಾಗುವುದು’ ಎಂದು ರಾಜೇಂದ್ರ ಹೇಳಿದರು.

‘ಚೆಕ್‌ಪೋಸ್ಟ್‌ಗಳನ್ನು ರಚಿಸಲಾಗಿದೆ. ಮೈಸೂರು ನಗರದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ನಗರದ 11 ರೌಡಿಶೀಟರ್‌ಗಳನ್ನು ಗಡಿಪಾರು ಮಾಡಲಾಗಿದೆ. ₹ 26 ಲಕ್ಷ ನಗದು, 25 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್ ರಮೇಶ್‌ ಬಾನೋತ್‌ ಮಾಹಿತಿ ನೀಡಿದರು.

‘ಪ್ರತಿ ಪ್ರದೇಶದಲ್ಲೂ ಪಥ ಸಂಚಲನ ನಡೆಸಲಾಗುವುದು. ಪ್ಯಾರಾ ಮಿಲಿಟರಿ ಪಡೆಗಳು ಬರಲಿವೆ. ಎಲ್ಲ ಚೆಕ್‌‍ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಪರವಾನಗಿ ಪಡೆದು ಬಳಸುತ್ತಿರುವ ಶಸ್ತ್ರಾಸ್ತ್ರಗಳನ್ನು ವಾಪಸ್‌ ನೀಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ‘385 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಕಳೆದ 3 ತಿಂಗಳಲ್ಲಿ ₹ 45 ಲಕ್ಷ ವಶಕ್ಕೆ ಪಡೆಯಲಾಗಿದೆ. ವಾರದಲ್ಲಿ ಜಿಲ್ಲೆಗೆ 5 ಪ್ಯಾರಾ ಮಿಲಿಟರಿ ಪಡೆಗಳು ಬರಲಿವೆ’ ಎಂದು ಮಾಹಿತಿ ನೀಡಿದರು.

ಜಾವಗಲ್ ಶ್ರೀನಾಥ್ ‘ಸ್ವೀಪ್‌’ ರಾಯಭಾರಿ

ಮತದಾನ ಹೆಚ್ಚಳಕ್ಕಾಗಿ ಸ್ವೀಪ್‌ (ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣೆಯಲ್ಲಿ ಪಾಲ್ಗೊಳ್ಳುವಿಕೆ) ಸಮಿತಿಯ ಐಕಾನ್‌ ಆಗಿ ಕ್ರಿಕೆಟಿಗ ಜಾವಗಲ್‌ ಶ್ರೀನಾಥ್‌ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವ್ಯಾಪಕವಾದ ಚುನಾವಣಾ ಜಾಗೃತಿ ಮೂಡಿಸಲಾಗುವುದು. ತೃತೀಯ ಲಿಂಗಿ, ಅಂಕವಿಕಲ, ಶತಾಯುಷಿ ಕ್ರೀಡಾಪಟುವೊಬ್ಬರನ್ನು ಐಕಾನ್ ಮಾಡಿಕೊಳ್ಳಲು ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

‘ಕಡಿಮೆ ಮತದಾನವಾಗಿರುವ ಕೃಷ್ಣರಾಜ, ಚಾಮರಾಜ ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಮತದಾನ ಜಾಗೃತಿ ನಡೆಸಲಾಗಿದೆ. ಈ ಬಾರಿ ಶೇ 90 ಮತದಾನ ಆಗುವ ನಿರೀಕ್ಷೆಯಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT