ನಂಜನಗೂಡು: ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ಸದಸ್ಯರು ಇಲ್ಲಿನ ನೆಹರು ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ಹಿಂದೂಗಳೇ ಎದೆಗುಂದದಿರಿ’, ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಿದರು.
ಹಿಂದೂ ಹಿತರಕ್ಷಣ ಸಮಿತಿ ಮುಖಂಡ ಗಿರೀಶ್ ಮಾತನಾಡಿ, ‘ನೆರೆಯ ಬಾಂಗ್ಲಾ ದೇಶದಲ್ಲಿ ವಿದ್ಯಾರ್ಥಿ ಸಂಘಟನೆಗಳ ದೌರ್ಜನ್ಯ ಎಲ್ಲೆ ಮೀರಿದೆ. ದಿನನಿತ್ಯ ಹಿಂದೂಗಳ ಕೊಲೆ, ಹಿಂಸೆ, ಅತ್ಯಾಚಾರದಂತಹ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಖ್ಯಾತ ಗಾಯಕ ರಾಹುಲ್ ಮನೆಗೆ ಬೆಂಕಿ ಇಟ್ಟು ಕ್ರೌರ್ಯ ಮುಂದುವರಿಸಿದ್ದಾರೆ. ಬಾಂಗ್ಲಾದಲ್ಲಿ ಅಧಿಕಾರಕ್ಕೆ ಬಂದ ಮಧ್ಯಂತರ ಸರ್ಕಾರ ಹಿಂದೂಗಳಿಗೆ ರಕ್ಷಣೆ ನೀಡಲು ವಿಫಲವಾಗಿದೆ’ ಎಂದು ಆರೋಪಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಹಿಂದೂಗಳ ರಕ್ಷಣೆಗೆ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.