ಶುಕ್ರವಾರ, ಜನವರಿ 27, 2023
25 °C

ಸಾಮಾಜಿಕ ವ್ಯವಸ್ಥೆಯಲ್ಲಿ ನೋವು ಅನುಭವಿಸದಿದ್ದರೆ ಸುಧಾರಣೆ ಅಸಾಧ್ಯ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಮಾಜಿಕ ವ್ಯವಸ್ಥೆಯಲ್ಲಿ ನೋವು ಅನುಭವಿಸದಿದ್ದರೆ ಸುಧಾರಣೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಕನಕದಾಸರನ್ನೂ ಹೆಜ್ಜೆ ಹೆಜ್ಜೆಗೂ ಅವಮಾನಿಸಿದ್ದಾರೆ. ವ್ಯಾಸರಾಯರೇ ಮಂತ್ರ ಹೇಳಿಕೊಡಲು ಅವಮಾನಿಸಿದ್ದರು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. 

ಕರ್ನಾಟಕ ಪ್ರದೇಶ ಕುರುಬರ ಸಂಘ ನಗರ, ತಾಲ್ಲೂಕು ಹಾಗೂ ಜಿಲ್ಲಾ ಘಟಕದಿಂದ ಇಲ್ಲಿನ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕನಕ ಜಯಂತಿ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್‌, ಗಾಂಧೀಜಿ ಮೊದಲಾದ ಸುಧಾರಣಾವಾದಿಗಳು ಬಹಳಷ್ಟು ಪ್ರಯತ್ನಿಸಿದರೂ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಹಾಗೆಯೇ ಉಳಿದಿದೆ’ ಎಂದು ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

‘ಜಾತಿ ವ್ಯವಸ್ಥೆ ನಿಂತ ನೀರಾಗಿದೆ. ಚಲನೆ ಇಲ್ಲದಿದ್ದರೆ ಬದಲಾವಣೆ ಸಾಧ್ಯವಾಗದು’ ಎಂದು ಪ್ರತಿಪಾದಿಸಿದರು.

ಈ ಬೊಮ್ಮಾಯಿ ಅಲ್ಲ!: ‘1988ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ, ಎಸ್.ಆರ್.ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದರು. 500ನೇ ಕನಕ ಜಯಂತಿಯನ್ನು ಸರ್ಕಾರದಿಂದ ವರ್ಷವಿಡೀ ಆಚರಿಸೋಣ ಎಂದಿದ್ದೆ. ಅವರು ಒಪ್ಪಿದ್ದರು. ಆದರೆ, ನಮ್ಮ ಸರ್ಕಾರ ಮಧ್ಯದಲ್ಲೇ ‌ಹೋಯಿತು. ಮುಂದೆ ಬಂದ ಸರ್ಕಾರ ಸಮಾರೋಪ ಸಮಾರಂಭ ಮಾಡಲೇ ಇಲ್ಲ. ಇದನ್ನೆಲ್ಲ ತಿಳಿದುಕೊಳ್ಳಬೇಕು’ ಎಂದರು.

‘ಕನಕದಾಸರ ಸಾಹಿತ್ಯ ಜನರಿಗೆ ಸಿಗಲೆಂದು ಕಡಿಮೆ ದರದಲ್ಲಿ ಪುಸ್ತಕಗಳನ್ನು ಮುದ್ರಿಸಿ ಹಂಚುವ ಕೆಲಸವನ್ನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದೆ. ಹಿಂದೆ ಕನಕದಾಸರಿಗೆ ಅಷ್ಟೊಂದು ಪ್ರಾಮುಖ್ಯತೆ ಸಿಕ್ಕಿರಲಿಲ್ಲ.‌ ನಾನು ರಾಜ್ಯದಾದ್ಯಂತ ಸಂಚರಿಸಿ ಜಯಂತಿ ಕಾರ್ಯಕ್ರಮ ಮಾಡಿದ್ದರಿಂದ ಜಾಗೃತಿ ಮೂಡಲು ಶುರುವಾಯಿತು’ ಎಂದು ತಿಳಿಸಿದರು.

ಕುರುಬರು ಎನ್ನಲು ಹಿಂಜರಿಯುತ್ತಿದ್ದರು: ‘ಹಿಂದೆ ಕುರುಬರು ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದರು. ಗೌಡ ಎಂದೇ ಹೇಳಿಕೊಳ್ಳುತ್ತಿದ್ದರು. ನನ್ನ ಸಹೋದರರ ಹೆಸರಿನ ಮುಂದೆ ಗೌಡ ಇದೆ. ಆದರೆ, ನಮ್ಮ ಶಿಕ್ಷಕರು ಸಿದ್ದರಾಮಯ್ಯ ಎಂದಷ್ಟೇ ನನ್ನ ಹೆಸರು ಬರೆದುಕೊಂಡರು. ಕಾನೂನು ವಿದ್ಯಾರ್ಥಿಗಳಾಗಿದ್ದಾಗ ನಾನು ಮತ್ತು ವಿಶ್ವನಾಥ್ ಸೇರಿ ಕಾಳಿದಾಸ ಕನಕ ಬಳಗ ಮಾಡಿದ್ದೆವು. ಆಗಲೂ ವಿದ್ಯಾರ್ಥಿಗಳು ಜಾತಿ ಹೆಸರು ಹೇಳಲು ನಾಚಿಕೆಪಡುತ್ತಿದ್ದರು’ ಎಂದು ವಿಶ್ವನಾಥ್‌ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದರು.

‘ವಿಧಾನಸೌಧದ ಮುಂಭಾಗ ವಾಲ್ಮೀಕಿ, ಕನಕದಾಸರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು ನಾವೇ. ಆದರೆ, ಇದರ ಲಾಭ ಪಡೆಯುತ್ತಿರುವುದು ಬೇರೆಯವರು. ಅಸಮಾನತೆ, ಜಾತಿ ವ್ಯವಸ್ಥೆ ಮಾಡಿದವರೊಂದಿಗೆ ನಾವು ಹೋಗಬೇಕೇ, ಬೇಡವೇ ಎಂದು ಜನರು ಯೋಚಿಸಬೇಕು’ ಎಂದು ತಿಳಿಸಿದರು.

ಪ್ರೊ.ಅರವಿಂದ ಮಾಲಗತ್ತಿ ಮಾತನಾಡಿ, ‘ಭಾರತದ ಸಂತ ಪರಂಪರೆಯನ್ನು ಹಾಗೂ ಸಂತ ಭಾರತವನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಯಾರು ನೋವನ್ನು ಅನುಭವಿಸಿರುತ್ತಾರೆಯೋ ಅವರು ಸಮಾಜದ ಸಶಕ್ತ ನಾಯಕರಾಗಬಲ್ಲರು. ನೋವು ಅನುಭವಿದಿರುವವರನ್ನು ಸಮಾಜ ಪಕ್ಕಕ್ಕೆ ತಳ್ಳುತ್ತದೆ’ ಎಂದರು.

‘ಮಾಧ್ವ ಸಿದ್ಧಾಂತದ ವಿಚಾರಗಳನ್ನು ಕನಕರು‌ ತಿಳಿಯಾಗಿಸಿದ್ದಾರೆ ಎಂದು ಕನಕ ಜಯಂತಿಗೆ ಮುನ್ನ ಹೇಳುತ್ತಿದ್ದರು. ಅವರ ಆಲೋಚನಾ ಕ್ರಮಗಳಲ್ಲಿ ವಿರೋಧಾಭಾಸ ಇವೆ ಎಂದೂ ಹೇಳಿದ್ದರು. 2000ದ ನಂತರದ ಅಧ್ಯಯನಗಳ‌ ದೃಷ್ಟಿಕೋನ ಬೇರೆಯಾಗಿದೆ. ಸಂಶೋಧಕರು ಮತೀಯ ಆಲೋಚನಾ ಕ್ರಮದಿಂದ ತಮ್ಮ ತಮ್ಮ ಗರ್ಭಗುಡಿಗಳಲ್ಲಿ ನಿಂತು ಕಿಟಕಿಯೊಳಗಿಂದ ನೋಡಿದ್ದರಿಂದ ಹೀಗಾಗಿದೆ. ವಿಶಾಲವಾಗಿ‌ ನೋಡಿರಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕನಕರ ಕೀರ್ತನೆಗಳು ಬಿಲ್ಲಾಗಿ, ಬಾಣವಾಗಿ ಹಾಗೂ‌ ಬಾಣದಿಂದ ಬರುವ ಹೂಗಳಾಗಿಯೂ ಕಾಣಿಸುತ್ತವೆ. ಅವರಂತೆಯೇ ಸಿದ್ದರಾಮಯ್ಯ ಸ್ವಾಭಿಮಾನದ ಪ್ರತೀಕ‌ವಾಗಿ ಕಾಣಿಸುತ್ತಾರೆ. ಅನ್ನವಿಲ್ಲದೆ ಬದುಕಬಹುದು, ಸ್ವಾಭಿಮಾನವಿಲ್ಲದೆ ಬದುಕಲಾಗದು ಎಂಬ ಸಂದೇಶವನ್ನು ಸಿದ್ದರಾಮಯ್ಯ ನೀಡಿದ್ದಾರೆ. ಕೆಳ ಸಮುದಾಯದವರು ಹೇಗಿರಬೇಕು ಎಂಬುದಕ್ಕೆ ಪ್ರತೀಕವಾಗಿದ್ದಾರೆ. ಅವರ ಭಾಷಣಗಳ ಸಂಗ್ರಹದ ಪುಸ್ತಕಗಳು ಹೊರಬರಬೇಕು’ ಎಂದರು.

‘ದೇಶದ ಯಾವುದೇ ಧರ್ಮಕ್ಕೆ ಸಂಪೂರ್ಣವಾದ ಸಾಮರ್ಥ್ಯವಿಲ್ಲ. ಸಂವಿಧಾನವನ್ನು ಕಾಯ್ದುಕೊಳ್ಳಬೇಕು ಎಂದಾದರೆ ಭಾರತೀಯ ಸಂತರ ಸಾಹಿತ್ಯ-ಆಲೋಚನೆಯಿಂದ ಮಾತ್ರ ಸಾಧ್ಯ. ಇದಕ್ಕಾಗಿ ಎಲ್ಲರೂ ಒಗ್ಗೂಡಬೇಕು’ ಎಂದು ಹೇಳಿದರು.

ಸಮಾಜದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಧಕರನ್ನು ಸನ್ಮಾನಿಸಲಾಯಿತು. ಸಮಾಜದ ಮುಖಂಡರು, ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿದರು. ಇದಕ್ಕೂ ಮುನ್ನ ನಂಜರಾಜ ಬಹದ್ದೂರ್‌ ಛತ್ರದಿಂದ ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು. ಕಲಾತಂಡಗಳು ಮೆರುಗು ನೀಡಿದವು.

*
ಸಾಮಾಜಿಕ ವ್ಯವಸ್ಥೆಯಲ್ಲಿ ನೋವು ಅನುಭವಿಸದಿದ್ದರೆ ಸುಧಾರಣೆ ತರುವುದಕ್ಕೆ ಸಾಧ್ಯವಾಗುವುದಿಲ್ಲ. ಕನಕದಾಸರನ್ನೂ ಹೆಜ್ಜೆ ಹೆಜ್ಜೆಗೂ ಅವಮಾನಿಸಿದ್ದಾರೆ. ವ್ಯಾಸರಾಯರೇ ಮಂತ್ರ ಹೇಳಿಕೊಡಲು ಅವಮಾನಿಸಿದ್ದರು.
–ಸಿದ್ದರಾಮಯ್ಯ, ವಿಧಾನಸಭೆಯ ವಿರೋಧ ಪಕ್ಷದ ನಾಯಕ

ಓದಿ... ಆರ್‌ಎಸ್‌ಎಸ್‌ನವರು ಕಳ್ಳರು, ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು