ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಚುನಾವಣೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲು ನಿರ್ಧಾರ
Last Updated 3 ಫೆಬ್ರುವರಿ 2023, 14:08 IST
ಅಕ್ಷರ ಗಾತ್ರ

ಮೈಸೂರು: ಮಹಾನಗರಪಾಲಿಕೆಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ನಡೆಸದಿರುವ ಮೇಯರ್‌ ಶಿವಕುಮಾರ್‌ ವಿರುದ್ಧ ಕಾಂಗ್ರೆಸ್ ಸದಸ್ಯರು ಮತ್ತು ಆ ಪಕ್ಷದ ನಗರ ಘಟಕದ ಕಾರ್ಯಕರ್ತರು ಪಾಲಿಕೆಯ ಎದುರು ಶುಕ್ರವಾರ ಪ್ರತಿಭಟಿಸಿದರು.

ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಲು ನಿಗದಿಯಾಗಿದ್ದ ಸಭೆಯನ್ನು ದಿಢೀರ್‌ ಮುಂದೂಡಿದ್ದರಿಂದ ಆಕ್ರೋಶಗೊಂಡಿದ್ದ ಕಾಂಗ್ರೆಸ್‌ ಸದಸ್ಯರು ಆಯುಕ್ತರ ಕಚೇರಿ ಕೊಠಡಿಗೆ ಬೀಗ ಹಾಕಿ ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದರು. 2ನೇ ದಿನವಾದ ಶುಕ್ರವಾರ ಪಾಲಿಕೆ ಎದುರು ಕಾಂಗ್ರೆಸ್‌ ನಗರ ಘಟಕದ ನೇತೃತ್ವದಲ್ಲಿ ಪ್ರತಿಭಟಿಸಿ, ಮೇಯರ್‌ ವಿರುದ್ಧ ಕಿಡಿಕಾರಿದರು.

ಪಾಲಿಕೆ ಸದಸ್ಯೆ ಪಲ್ಲವಿ ಬೇಗಂ ಮಾತನಾಡಿ, ‘ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರಿಲ್ಲದಿರುವುದರಿಂದ ಸದಸ್ಯರು ಅಭಿವೃದ್ಧಿ ಕಾರ್ಯದಲ್ಲಿ ‌ತೊಡಗಲು ಸಾಧ್ಯವಾಗುತ್ತಿಲ್ಲ’ ಎಂದು ದೂರಿದರು.

ಸದಸ್ಯೆ ಶೋಭಾ ಸುನೀಲ್ ಮಾತನಾಡಿ, ‘ಮೇಯರ್ ಯಾವ ಉದ್ದೇಶದಿಂದ ಚುನಾವಣೆ ‌ಮುಂದೂಡಿದರು ಎಂದು ಸಾರ್ವಜನಿಕವಾಗಿ ‌ತಿಳಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಬಿಜೆಪಿ:

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಎಂ.ಲಕ್ಷ್ಮಣ ಮಾತನಾಡಿ, ‘ಬಿಜೆಪಿಯು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದ ಪಕ್ಷ.‌ ಅಧಿಕಾರ ಕೇಂದ್ರೀಕೃತವಾಗಿರಬೇಕು ಎನ್ನುವುದು ಅವರ ಉದ್ದೇಶ. ತಾವೊಬ್ಬರೇ ಅಧಿಕಾರ ಅನುಭವಿಸಬೇಕು ಎನ್ನುವ ಮನೋಭಾವದವರು. ಹೀಗಾಗಿಯೇ ಪಾಲಿಕೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ನಡೆಸುತ್ತಿಲ್ಲ. ಕೊನೆಯ ವ್ಯಕ್ತಿವರೆಗೂ ಅಧಿಕಾರ ಹೋಗಬೇಕು ಎಂಬ ಸಂವಿಧಾನದ ಆಶಯವನ್ನು ಬುಡಮೇಲು ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸದೇ ಕಾನೂನು ಉಲ್ಲಂಘನೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ತ್ರಿಬಲ್ ಎಂಜಿನ್‌ ಸರ್ಕಾರಗಳು ಡಕೋಟಾ ಎಂಜಿನ್‌ಗಳಾಗಿ ಕೆಲಸ ಮಾಡುತ್ತಿವೆ. ಇದನ್ನು ಖಂಡಿಸಿ, ಪ್ರಾದೇಶಿಕ ಆಯುಕ್ತರನ್ನು ಶನಿವಾರ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ವಾರದೊಳಗೆ ಚುನಾವಣೆ ನಡೆಸಲು ಕ್ರಮ ವಹಿಸಬೇಕು, ಇಲ್ಲದಿದ್ದರೆ ಸೂಪರ್ ಸೀಡ್ ಮಾಡುವಂತೆ ಒತ್ತಾಯಿಸಲಾಗುವುದು. ಪಕ್ಷದ ಮೂಲಕ ಕಾನೂನು ಹೋರಾಟವನ್ನೂ ನಡೆಸಲಾಗುವುದು’ ಎಂದು ತಿಳಿಸಿದರು.

ಸಂವಿಧಾನ ವಿರೋಧಿಯಾಗಿ: ಪಾಲಿಕೆಯ ವಿರೋಧ ಪಕ್ಷದ ನಾಯಕ ಅಯೂಬ್ ಖಾನ್ ಮಾತನಾಡಿ, ‘ಮೇಯರ್ ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿಲ್ಲ. ಸದಸ್ಯರು ಕೌನ್ಸಿಲ್‌ನಲ್ಲಿ ಪ್ರತಿಭಟಿಸಿದ್ದಾಗ, 15 ದಿನಗಳೊಳಗೆ ಚುನಾವಣೆ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದರು. ಆದರೆ, ಮಾತು ತಪ್ಪಿದರು. ಈಚೆಗೆ ದಿನಾಂಕ ಪ್ರಕಟಿಸಿದ್ದರು. ಆದರೆ, ಚುನಾವಣೆ ನಡೆಸಲಿಲ್ಲ. ಸಂವಿಧಾನಕ್ಕೆ ಗೌರವ ಕೊಡದೇ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ. ವಿಧಾನಸಭೆ ಚುನಾವಣೆ ನೀತಿಸಂಹಿತೆ ಜಾರಿಯಾಗಲಿ ಎಂದು ಕಾಯುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಮೇಯರ್‌ಗೆ ಅನಾರೋಗ್ಯವೆಂದು ಕೌನ್ಸಿಲ್ ಸಭೆಯನ್ನೂ ಮುಂದೂಡಲಾಗಿದೆ. ಹೀಗಾದಾಗ, ಉಪ ಮೇಯರ್ ಅಧ್ಯಕ್ಷತೆಯಲ್ಲೇ ಸಭೆ ನಡೆಸಲು ಅವಕಾಶವಿದೆ. ಆದರೆ, ಕಾಂಗ್ರೆಸ್‌ನವರ ಪ್ರಶ್ನೆ ಎದುರಿಸಲಾಗದೇ ಭಯದಿಂದ ಕೌನ್ಸಿಲ್ ಸಭೆಯನ್ನು ಮುಂದೂಡಿದ್ದಾರೆ’ ಎಂದು ದೂರಿದರು.

ಪಾಲಿಕೆ ಸದಸ್ಯರಾದ ಗೋಪಿ, ಲೋಕೇಶ್‌ ಪಿಯಾ, ಪ್ರದೀಪ್ ಚಂದ್ರ, ಅಕ್ಮಲ್ ಪಾಷ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ವಕ್ತಾರ ಟಿ.ಶ್ರೀನಿವಾಸ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಲತಾ ಚಿಕ್ಕಣ್ಣ, ಮುಖಂಡರಾದ ಪ್ರದೀಪ್‌ಕುಮಾರ್, ಹರೀಶ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT