ಮೈಸೂರು: ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಈ ಬಾರಿ ಮತ್ತಷ್ಟು ವೇದಿಕೆಗಳ ಸೇರ್ಪಡೆಗೆ ನಿರ್ಧರಿಸಲಾಗಿದ್ದು, ಕೆಲವು ಬಡಾವಣೆಗಳ ಜನರಿಗೆ ರಸದೌತಣ ಸವಿಯುವ ಅವಕಾಶ ದೊರೆಯಲಿದೆ.
ಈ ಬಾರಿ ಬರಗಾಲದ ಕಾರಣದಿಂದಾಗಿ ದಸರೆಯನ್ನು ಸಾಂಪ್ರದಾಯಿಕ ನಡೆಸಲಾಗುತ್ತಿದೆಯಾದರೂ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಲು ಉದ್ದೇಶಿಸಲಾಗಿದೆ.
ಮುಖ್ಯವಾಗಿ ಅಂಬಾವಿಲಾಸ ಅರಮನೆ ಆವರಣದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಅದರೊಂದಿಗೆ, ಹೋದ ವರ್ಷ ಪುರಭವನ, ಜಗನ್ಮೋಹನ ಅರಮನೆ, ಚಿಕ್ಕ ಗಡಿಯಾರ, ಕಲಾಮಂದಿರ, ಕಲಾಮಂದಿರ ಆವರಣದಲ್ಲಿನ ಕಿರು ರಂಗಮಂದಿರ, ನಾದಬ್ರಹ್ಮ ಸಂಗೀತ ಸಭಾ ಹಾಗೂ ಗಾನಭಾರತಿ ವೇದಿಕೆ ಹಾಗೂ ನಂಜನಗೂಡಿನ ಅರಮನೆ ಮಾಳದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಬಾರಿ ಹೊಸದಾಗಿ ರಾಮಕೃಷ್ಣನಗರದ ‘ಎಚ್’ ಬ್ಲಾಕ್‌ನಲ್ಲಿರುವ ‘ನಟನ’ ರಂಗಶಾಲೆಯಲ್ಲಿ ನಾಟಕ ಹಾಗೂ ರಮಾಗೋವಿಂದ ರಂಗಮಂದಿರದಲ್ಲಿ ವಿವಿಧ ಕಲಾ ಪ್ರಾಕಾರಗಳ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸಲಾಗುವುದು.
ಪೂರ್ವ ತಯಾರಿ: ಈ ಬಗ್ಗೆ ಪ್ರತಿಕ್ರಿಯಿಸಿದ ಸಾಂಸ್ಕೃತಿಕ ದಸರಾ ಉಪ ಸಮಿತಿಯ ಕಾರ್ಯದರ್ಶಿ ಎಂ.ಡಿ. ಸುದರ್ಶನ್, ‘ವಿವಿಧ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಸಭೆಗಳನ್ನು ನಡೆಸಿ ಚರ್ಚಿಸಲಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ’ ಎಂದು ತಿಳಿಸಿದರು.
‘ಅ.3ರಂದು 3ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾ ಪಂಚಾಯಿತಿ ಸಭಾಂಣಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಕಾರ್ಯುಕ್ರಮಗಳ ಪೋಸ್ಟರ್ ಬಿಡುಗಡೆಗೆ ಉದ್ದೇಶಿಸಲಾಗಿದೆ. ಅಂದು ಕಲಾವಿದರ ಪಟ್ಟಿಯನ್ನೂ ಪ್ರಕಟಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಅ. 15ರಂದು ಸಂಜೆ 6ಕ್ಕೆ ಅಂಬಾವಿಲಾಸ ಅರಮನೆ ವೇದಿಕೆಯಲ್ಲಿ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು. ರಾಜ್ಯ ಸಂಗೀತ ವಿದ್ವಾನ್ ಪುರಸ್ಕಾರವನ್ನು ನೀಡಲಾಗುವುದು. ಸಾಧಕರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.
ಅರಮನೆ ವೇದಿಕೆಯಲ್ಲಿ ವಿಶೇಷಚೇತನ ಕಲಾವಿದರಿಗೆ ಅವಕಾಶ ಕೊಡಲಾಗುತ್ತಿದೆ. ಸುಡುಗಾಡು ಸಿದ್ದರಿಂದ ಕಾರ್ಯಕ್ರಮ ಸೇರಿದಂತೆ ವಿವಿಧ ವಿಶೇಷಗಳನ್ನು ಈ ಬಾರಿ ಜೋಡಿಸಲಾಗುವುದು. ನವ ರಾತ್ರಿಗಳಲ್ಲೂ ಸಂಗೀತ ರಸಿಕರಿಗೆ ರಸದೌತಣ ಉಣಬಡಿಸಲು ಉಪ ಸಮಿತಿ ಕ್ರಮ ವಹಿಸಿದೆ.
ಅರಮನೆ ವೇದಿಕೆಯಲ್ಲಿ ‘ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ’ (ಮುಂಜಾನೆಯಿಂದ ಮುಸ್ಸಂಜೆವರೆಗೆ) ಪರಿಕಲ್ಪನೆಯಲ್ಲಿ ಕಾರ್ಯಕ್ರಮ ವೈವಿಧ್ಯ ಈ ಬಾರಿಯೂ ಇರಲಿದೆ. ಹಲವು ಪ್ರಾಕಾರದ ಸಾಂಸ್ಕೃತಿಕ ವೈಭವ ಮೇಳೈಸಲಿದೆ. ಇದಕ್ಕಾಗಿ ಆಕರ್ಷಕ ವೇದಿಕೆಯನ್ನು ಹಾಕಲಾಗುವುದು.
ಅ.15ರಿಂದ 9 ದಿನ ಕಾರ್ಯಕ್ರಮ ಈ ಬಾರಿ ಹೆಚ್ಚುವರಿಯಾಗಿ 3 ಕಡೆ ಆಯೋಜನೆ ಅವಕಾಶಕ್ಕಾಗಿ ಕಲಾವಿದರಿಂದ ಬೇಡಿಕೆ
ಕರೋಕೆ ವಿಶೇಷ ಈ ಬಾರಿ ವಿಶೇಷವಾಗಿ ಕರೋಕೆ ಗಾಯಕರಿಗೆ ಅವಕಾಶ ಮಾಡಿಕೊಡಲು ನಿವೇದಿತಾ ನಗರದಲ್ಲಿರುವ ಪ್ರೊ.ಕೆ.ಎಸ್. ರಂಗಪ್ಪ ಉದ್ಯಾನದ ಬಯಲು ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿ ದಿನ 5–6 ಮಂದಿಯಂತೆ 5ರಿಂದ 6 ದಿನಗಳವರೆಗೆ ಅಲ್ಲಿ ನಡೆಸಲಾಗುವುದು. ಅರಮನೆ ವೇದಿಕೆಯಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಬಗ್ಗೆ ವಿಶೇಷ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಸೂಚಿಸಿದ್ದಾರೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಅ.15ರಿಂದ 9 ದಿನಗಳವರೆಗೆ ಸಾಂಸ್ಕೃತಿಕ ಸಂಭ್ರಮವಿರಲಿದೆ. ಒಂದು ವೇದಿಕೆಯಲ್ಲಿ 9 ದಿನಕ್ಕೆ ಒಟ್ಟು 36 ಕಾರ್ಯಕ್ರಮಗಳಾಗುತ್ತವೆ. ಅದರಂತೆ ಸರಾಸರಿ 360 ತಂಡಗಳಿಗೆ ಅವಕಾಶ ಆಗಲಿದೆ. ಒಟ್ಟಾರೆ 5ಸಾವಿರ ಕಲಾವಿದರಿಗೆ ಅವಕಾಶ ಕಲ್ಪಿಸಿಕೊಡಲು ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಭಾವನೆಗೆಂದೇ ₹ 1.60 ಕೋಟಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಕಲಾವಿದರಿಗೆ ನೀಡಲಾಗುವ ಸಂಭಾವನೆಗೆಂದೇ ₹ 1.60 ಕೋಟಿ ಅನುದಾನ ಬೇಕಾಗುತ್ತದೆ ಎಂದು ಸಾಂಸ್ಕೃತಿಕ ಉಪ ಸಮಿತಿಯಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಲ್ಲದೇ ಸಂಘಟನಾ ವೆಚ್ಚವನ್ನೂ ಕೋರಲಾಗಿದೆ. ಹೋದ ವರ್ಷ ಉಪ ಸಮಿತಿಗೆ ₹ 2 ಕೋಟಿ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
2425 ಅರ್ಜಿಗಳು! ‘ಮೈಸೂರು ದಸರೆಯಲ್ಲಿ ಕಾರ್ಯಕ್ರಮ ನೀಡುವುದೆಂದರೆ ಕಲಾವಿದರಿಗೆ ಹೆಮ್ಮೆಯ ಸಂಗತಿಯೇ. ಆದ್ದರಿಂದ ಅವಕಾಶ ಮಾಡಿಕೊಡುವಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಅರ್ಜಿಗಳು ಬಂದಿವೆ. ಶನಿವಾರದವರೆಗೆ 2425 ಅರ್ಜಿಗಳು ಬಂದಿವೆ. ಬೇರೆ ಬೇರೆ ಕಲಾ ಪ್ರಾಕಾರಗಳಿಗೆ ಅವಕಾಶ ಕೊಡಲಾಗುವುದು’ ಎಂದು ಸುದರ್ಶನ್ ವಿವರ ನೀಡಿದರು. ‘ಹಿಂದೂಸ್ತಾನಿ ಕರ್ನಾಟಕ ಶಾಸ್ತ್ರೀಯ ಸಂಗೀತ ವಾದ್ಯ ಸಂಗೀತ ವಾದ್ಯ ಜುಗಲ್‌ಬಂದಿ ನೃತ್ಯ ಮೊದಲಾದವು ನಡೆಯಲಿವೆ. ಅರಮನೆ ವೇದಿಕೆಗೆ ಪ್ರಖ್ಯಾತ ಕಲಾವಿದರನ್ನು ಆಹ್ವಾನಿಸಲು ಸಂಪರ್ಕಿಸುವ ಅಂತಿಮಗೊಳಿಸುವ ಪ್ರಕ್ರಿಯೆ ಸೋಮವಾರ ಮುಗಿಯುವ ಸಾಧ್ಯತೆ ಇದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.