ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Dasara 2023: ₹3 ಕೋಟಿಗೆ ಟೈಟಲ್‌ ಪ್ರಾಯೋಜಕತ್ವ!

ದಸರೆಗೆ ಹಣ ಹೊಂದಿಸಲು ವಾಣಿಜ್ಯೋದ್ಯಮಿಗಳ ಮೊರೆ ಹೋದ ಜಿಲ್ಲಾಡಳಿತ
Published 5 ಅಕ್ಟೋಬರ್ 2023, 16:05 IST
Last Updated 5 ಅಕ್ಟೋಬರ್ 2023, 16:05 IST
ಅಕ್ಷರ ಗಾತ್ರ

ಮೈಸೂರು: ₹3 ಕೋಟಿ ಕೊಟ್ಟರೆ ನಾಡಹಬ್ಬದ ದಸರೆಯ ಟೈಟಲ್‌ ಪ್ರಾಯೋಜಕತ್ವ ನೀಡಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಪ್ರಾಯೋಜಕತ್ವ ಸಂಬಂಧ ಲಲಿತಮಹಲ್‌ ಹೋಟೆಲ್‌ ಸಭಾಂಗಣದಲ್ಲಿ ಗುರುವಾರ ವಾಣಿಜ್ಯೋದ್ಯಮಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ಈ ವಿವರವನ್ನು ನೀಡಿದರು.

‘ಈ ಬಾರಿ ಸಾಂಪ್ರದಾಯಿಕವಾಗಿ ದಸರಾ ಆಚರಿಸಲಾಗುತ್ತಿದೆ. ವಿವಿಧ ರೀತಿಯ ಪ್ರಾಯೋಜಕತ್ವಗಳಿವೆ. ಟೈಟಲ್ ಪಡೆದರೆ ₹3 ಕೋಟಿ ಕೊಡಬೇಕಾಗುತ್ತದೆ. ಪ್ರಾಯೋಜಕತ್ವದ ವಿವಿಧ ವಿಭಾಗಗಳಾದ ಪ್ಲಾಟಿನಂಗೆ ₹1 ಕೋಟಿ, ಗೋಲ್ಡ್‌ಗೆ ₹50 ಲಕ್ಷ, ಬೆಳ್ಳಿಗೆ ₹25 ಲಕ್ಷ, ಅಸೋಸಿಯೇಟ್ ಮತ್ತು ಈವೆಂಟ್ ಸ್ಪಾನ್ಸರ್‌ಗೆ ₹3 ಲಕ್ಷ ಇರುತ್ತದೆ. ಪ್ರಾಯೋಜಕತ್ವ ನೀಡುವವರಿಗೆ ದಸರಾ ಕಾರ್ಯಕ್ರಮಗಳಲ್ಲಿ ಅವರ ಕಂಪನಿಯ ಜಾಹೀರಾತುಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗುವುದು’ ಎಂದರು.

‘ಕಂಪನಿಗಳು, ಉದ್ಯಮಿಗಳು ಪ್ರಾಯೋಜಕತ್ವ ವಹಿಸಲು ಅವಕಾಶವಿದೆ. ನಮ್ಮೊಂದಿಗೆ ಕೈಜೋಡಿಸಿ ದಸರಾ ಮಹೋತ್ಸವ ಯಶಸ್ವಿಗೊಳಿಸುವ ಜೊತೆಗೆ ನಿಮ್ಮ ವ್ಯಾಪಾರ– ವಹಿವಾಟು ವೃದ್ಧಿಪಡಿಸಿಕೊಳ್ಳಬಹುದು’ ಎಂದು ತಿಳಿಸಿದರು.

‘ಪೂರ್ಣ ಕಾರ್ಯಕ್ರಮ, ಒಂದು ದಿನ ಅಥವಾ ಒಂದು ಕಾರ್ಯಕ್ರಮ ಹೀಗೆ... ಯಾವ ರೀತಿಯಾದರೂ ಪ್ರಾಯೋಜಕತ್ವ ನೀಡಬಹುದಾಗಿದೆ. ದಸರಾ ಹೋರ್ಡಿಂಗ್‌ಗಳು, ಬ್ಯಾನರ್‌ಗಳಲ್ಲಿ ಹೆಸರು ಹಾಕಿಸಿಕೊಳ್ಳಬಹುದು. ನಿರೂಪಕರಿಂದ ನಿಮ್ಮ ಉತ್ಪನ್ನಗಳ ಹೆಸರುಗಳನ್ನು ಹೇಳಿಸುವ ಮೂಲಕ ಬ್ರ್ಯಾಂಡ್ ಮಾಡಬಹುದಾಗಿದೆ. ಇದರಿಂದ ನಿಮ್ಮ ಉದ್ಯಮಗಳ ಬೆಳವಣಿಗೆಯೂ ಆಗಲಿದೆ’ ಎಂದು ಹೇಳಿದರು.

‘ನಾಡಹಬ್ಬ ಆಚರಣೆಗೆ ವಿವಿಧ ಸಮಿತಿಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಾಯೋಜಕತ್ವ ನೀಡುವವರು ಅ.6ರ ಮಧ್ಯಾಹ್ನ 12ರೊಳಗೆ ಮಾಹಿತಿ ನೀಡಬೇಕು. ರೈತ ದಸರಾಗೆ ರಸಗೊಬ್ಬರ ಕಂಪನಿಗಳು, ಟ್ರಾಕ್ಟರ್‌ ಹಾಗೂ ಕೃಷಿ ಉಪಕರಣಗಳ ಕಂಪನಿಯವರು ಪ್ರಾಯೋಜಕತ್ವ ವಹಿಸಿಕೊಳ್ಳಬಹುದಾಗಿದೆ’ ಎಂದರು.

ಮುಡಾ ಆಯುಕ್ತ ಜಿ.ಟಿ. ದಿನೇಶ್ ಕುಮಾರ್‌, ಪಾಲಿಕೆಯ ಉಪ ಆಯುಕ್ತೆ ರೂಪಾ, ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್, ವಿವಿಧ ಕಂಪನಿಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.

ಕಂಪನಿಯ ಜಾಹೀರಾತು ಪ್ರದರ್ಶಿಸಲು ಅವಕಾಶ ದಸರಾ ಹೋರ್ಡಿಂಗ್‌, ಬ್ಯಾನರ್‌ಗಳಲ್ಲಿ ಕಂಪನಿ ಹೆಸರು ಅ.6ರ ಮಧ್ಯಾಹ್ನ 12ರೊಳಗೆ ಮಾಹಿತಿ ನೀಡಲು ಮನವಿ

ಕಾರ್ಯಕ್ರಮಗಳ ನೇರ ಪ್ರಸಾರ

‘ದಸರಾ ಕಾರ್ಯಕ್ರಮಗಳ ನೇರ ಪ್ರಸಾರದ ವ್ಯವಸ್ಥೆಯನ್ನು ನಗರದ 4 ಕಡೆಗಳಲ್ಲಿ ಮಾಡಲು ಉದ್ದೇಶಿಸಲಾಗಿದೆ. ಐಪಿಎಲ್‌ ಫ್ಯಾನ್‌ ಪಾರ್ಕ್ ಮಾದರಿಯಲ್ಲಿ ದಸರಾ ಫ್ಯಾನ್ ಪಾರ್ಕ್‌ ಕಾರ್ಯಕ್ರಮಕ್ಕೆ ಯೋಜಿಸಲಾಗಿದೆ. ಸಾವಿರಾರು ಮಂದಿ ವೀಕ್ಷಿಸಲು ಅನುವು ಮಾಡಿಕೊಡಲಾಗುವುದು. ಇದಕ್ಕೂ ಪ್ರಾಯೋಜಕತ್ವ ನೀಡಬಹುದಾಗಿದೆ’ ಎಂದು ಕೆ.ವಿ. ರಾಜೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT