ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮಹೋತ್ಸವ | ಗಜಪಡೆಗೆ ಬೀಳ್ಕೊಡುವ ಸಮಯ...

ಅರಮನೆ ನಗರಿಯಲ್ಲಿ ಎರಡು ತಿಂಗಳಿಂದ ಬಿಡಾರ; ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಇಂದು
Last Updated 7 ಅಕ್ಟೋಬರ್ 2022, 7:06 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯ ಜವಾಬ್ದಾರಿಯನ್ನು ಮುಗಿಸಿದ ಕ್ಯಾಪ್ಟನ್‌ ‘ಅಭಿಮನ್ಯು’ ನೇತೃತ್ವದ 15 ಆನೆಗಳೂ ತಮ್ಮ ಶಿಬಿರಗಳಿಗೆ ಶುಕ್ರವಾರ ತೆರಳಲಿದ್ದು, ಬೆಳಿಗ್ಗೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಲಾಗುತ್ತದೆ.

ಜಗಮಗಿಸುವ ವಿದ್ಯುತ್‌ ದೀಪಾಲಂಕಾರದ ಬೆಳಕಿನಲ್ಲಿ ಇದೇ ಮೊದಲ ಬಾರಿಗೆ ಬನ್ನಿಮಂಟಪಕ್ಕೆ ಹೆಜ್ಜೆ ಹಾಕಿದ ‘ಅಭಿಮನ್ಯು’ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರಿಗೆ ಹೆಮ್ಮೆಯ ಭಾವವೂ ಮೂಡಿದೆ.

ಆ.7ರಂದು ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಿಂದ ಹೊರಟ ಅಭಿಮನ್ಯು ನೇತೃತ್ವದಗಜಪಡೆಯ ಮೊದಲ ತಂಡ ಅರಮನೆ ನಗರಿಗೆ ಆಗಮಿಸಿತ್ತು. ಅರಣ್ಯ ಭವನದಲ್ಲಿದ್ದ ಗಜಪಡೆಯನ್ನು ಆ.10ರಂದು ಅದ್ಧೂರಿಯಾಗಿ ಅರಮನೆಗೆ ಬರಮಾಡಿಕೊಳ್ಳಲಾಗಿತ್ತು.ಮೊದಲ ತಂಡದಲ್ಲಿ ಕ್ಯಾಪ್ಟನ್‌ ‘ಅಭಿಮನ್ಯು’, ಮಾಸ್ಟರ್‌ ‘ಅರ್ಜುನ’, ಗೋಪಾಲಸ್ವಾಮಿ, ಧನಂಜಯ, ‌ ‘ಮಹೇಂದ್ರ’, ‘ಭೀಮ’, ಚೈತ್ರಾ, ಕಾವೇರಿ, ಲಕ್ಷ್ಮಿ ಇದ್ದವು.

ಅಂದಿನಿಂದಲೇತೂಕ ಪರೀಕ್ಷೆ, ನಡಿಗೆ ತಾಲೀಮು, ಭಾರ ಹೊರಿಸುವ ತಾಲೀಮು ಸೇರಿದಂತೆ ಹಲವು ತಾಲೀಮಿನಲ್ಲಿ ಈ ಆನೆಗಳು ಭಾಗವಹಿಸಿದ್ದವು.ಅರಣ್ಯ ಸಚಿವ ಉಮೇಶ ಕತ್ತಿ ನಿಧನದಿಂದಾಗಿಎರಡನೇ ತಂಡವನ್ನು ಸೆ.7ರಂದು ಸರಳವಾಗಿ ಸ್ವಾಗತಿಸಲಾಗಿತ್ತು. ‘ಗೋಪಿ’, ‘ವಿಜಯಾ’, ‘ಶ್ರೀರಾಮ’, ‘ಸುಗ್ರೀವ’, ‘ಪಾರ್ಥಸಾರಥಿ’ ಇದ್ದವು. ಸೆ.12ರಂದು ಎಲ್ಲ ಆನೆಗಳಿಗೆ ಕುಶಾಲ ತೋಪಿನ ಮೊದಲ ತಾಲೀಮು ನೀಡಲಾಗಿತ್ತು.

ಸೆ.14ರಂದು ಮೊದಲ ತಂಡದಲ್ಲಿ ಬಂದಿದ್ದ ಲಕ್ಷ್ಮಿ ಆನೆ ‘ಶ್ರೀದತ್ತಾತ್ರೇಯ’ನಿಗೆ ಜನ್ಮ ನೀಡಿದಳು. ಅದರೊಂದಿಗೆ ಗಜಪಡೆ ಸದಸ್ಯರ ಸಂಖ್ಯೆ 15ಕ್ಕೇರಿತು. ಹೊಸ ಸದಸ್ಯನ ಆಗಮನದಿಂದ ಅರಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು.

ಬೀಳ್ಕೊಡುವ ಸಮಯ: ಆನೆಗಳು, ಮಾವುತರು ಮತ್ತು ಕಾವಾಡಿಗರಿಗೆ ಇಂದು ಬೀಳ್ಕೊಡಲಾಗುತ್ತದೆ. ಬೆಳಿಗ್ಗೆ 6.30ಕ್ಕೆ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿಯಿಂದ ಗಜಪಡೆಗೆ ಪೂಜೆ ನಡೆಯಲಿದೆ. ಬಳಿಕ ಲಾರಿಗಳ ಮೂಲಕ ಆನೆಗಳನ್ನು ಕ್ಯಾಪ್‌ಗಳಿಗೆ ಕಳಿಸಲಾಗುತ್ತದೆ. ಜತೆಗೆ ಲಕ್ಷ್ಮಿ ಹಾಗೂ ಶ್ರೀದತ್ತಾತ್ರೇಯನನ್ನೂ ಬಂಡೀಪುರ ಉದ್ಯಾನದ ರಾಮಾಪುರ ಕ್ಯಾಂಪ್‌ಗೆ ಕಳುಹಿಸಲಾಗುತ್ತದೆ.

ಸಿದ್ಧತೆಯಲ್ಲಿ ಕುಟುಂಬಗಳು:ಗುರುವಾರಮಾವುತ, ಕಾವಾಡಿಗಳು ಆನೆಗಳ ಆರೈಕೆಯಲ್ಲಿದ್ದರೆ, ಅವರೊಂದಿಗೆ ಬಂದಿದ್ದ ಕುಟುಂಬದ ಸದಸ್ಯರು ಮರಳಿ ಹಾಡಿಗೆ ತೆರಳಲು ಸಾಮಗ್ರಿಗಳ ಗಂಟುಮೂಟೆ ಕಟ್ಟುವ ಹಾಗೂ ಬಟ್ಟೆ ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದರು.

ಮಾವುತ ಮತ್ತು ಕಾವಾಡಿಗರ 50ಕ್ಕೂ ಹೆಚ್ಚು ಮಕ್ಕಳು ಟೆಂಟ್ ಶಾಲೆಗೆ ಹೋಗಿ ಶಿಕ್ಷಕರಾದ ಮಹದೇವ ಹಾಗೂ ಸುಬ್ಬಲಕ್ಷ್ಮಿ ಅವರಿಂದ ಈ ವರ್ಷದ ಕೊನೆಯ ಪಾಠವನ್ನು ಕೇಳಿದರಲ್ಲದೆ, ಸಮವಸ್ತ್ರ ಪಡೆದರು. ಕೆಲವು ಪುಟಾಣಿಗಳು ಅಂಗಳದಲ್ಲಿ ಆಟವಾಡಿದರೆ, ಮತ್ತೂ ಕೆಲವರು ಆನೆಗಳಿಗೆ ಸ್ನಾನ ಮಾಡಿಸಿ ಅವುಗಳ ಬೆನ್ನೇರಿ ಸವಾರಿ ಮಾಡಿದರು.

ನಿರೀಕ್ಷೆ ಮೀರಿದ ‘ಅಭಿಮನ್ಯು’ ಸಾಧನೆ!:‘ಜಂಬೂಸವಾರಿ ಮೆರವಣಿಗೆ ಹಾದಿಯಲ್ಲಿ ಜನರ ಮಧ್ಯೆಯೇ ಬನ್ನಿಮಂಟಪಕ್ಕೆ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ನಿರೀಕ್ಷೆಗೂ ಮೀರಿ ಜವಾಬ್ದಾರಿಯನ್ನು ಸಾಧಿಸಿಬಿಟ್ಟ’ ಎಂದು ಡಿಸಿಎಫ್‌ ಡಾ.ವಿ.ಕರಿಕಾಳನ್‌ ಸಂತಸ ವ್ಯಕ್ತಪಡಿಸಿದರು.

‘‌ಬಲರಾಮ ದ್ವಾರದಿಂದ ಬನ್ನಿಮಂಟಪದ ಹಾದಿಯನ್ನು ಕೇವಲ 2 ಗಂಟೆ 15 ನಿಮಿಷದಲ್ಲಿ ಕ್ರಮಿಸಿದ್ದಾನೆ. ಶಬ್ದ, ಹರ್ಷೋದ್ಗಾರ ಹೆಚ್ಚಾಗಿದ್ದರೂ ಗಾಂಭೀರ್ಯದಿಂದ ಸಾಗಿದ. ಎಲ್ಲ 9 ಆನೆಗಳು ಅಂಜದೆ ಹೆಜ್ಜೆ ಹಾಕಿದವು. ಇದೇ ಮೊದಲ ಬಾರಿಗೆ ಬಂದ ಮಹೇಂದ್ರ, 2ನೇ ಬಾರಿ ಬಂದಿರುವ ಭೀಮ ಉತ್ತಮವಾಗಿ ಪ್ರದರ್ಶನ ನೀಡಿದ್ದು, ಇವು ನಮ್ಮ ಭವಿಷ್ಯದ ಅಂಬಾರಿ ಆನೆಗಳು’ ಎಂದರು.

‘ಎಲ್ಲ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿ ತಂಡವಾಗಿ ಕೆಲಸ ಮಾಡಿದ್ದಾರೆ. 59 ದಿನಗಳಲ್ಲಿ ನಡೆಸಿದ ವಿವಿಧ ತಾಲೀಮಿನಿಂದ ಜಂಬೂಸವಾರಿ ಯಶಸ್ವಿಯಾಗಿ ನಡೆದಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಕ್ಷ್ಮಿ ಮತ್ತು ಮರಿಯಾನೆ ಆರೋಗ್ಯದಿಂದಿವೆ. ಶ್ರೀದತ್ತಾತ್ರೇಯ ಓಡಾಟ ಹೆಚ್ಚಾಗಿದೆ. ಯಾರೇ ಮುಂದೆ ಬಂದರೂ ಹೊಡೆಯಲು ಬರುತ್ತಿದ್ದಾನೆ. ಸುಮ್ಮನೆ ಓಡುತ್ತಲೇ ಇರುತ್ತಾನೆ. ಆನೆ ವೈದ್ಯರ ಅಭಿಪ್ರಾಯ ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT