ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ

Published 5 ಜೂನ್ 2023, 14:28 IST
Last Updated 5 ಜೂನ್ 2023, 14:28 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಕೊಳ್ಳೇಗಾಲ: ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಮೂಲಕ ವಿಶ್ವ ಪರಿಸರ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸೋಣ ಎಂದು ನಿಸರ್ಗ ವಿದ್ಯಾನಿಕೇತನ ಶಾಲೆಯ ಮುಖ್ಯ ಶಿಕ್ಷಕ ಶಂಕರ್ ಹೇಳಿದರು.


ನಗರದ ಮರಡಿಗುಡ್ಡ ವೃಕ್ಷವನದಲ್ಲಿ ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ರಸ್ತೆ ಬದಿಯ ಪ್ಲಾಸ್ಟಿಕ್ ಸಂಗ್ರಹಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದರು.

ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಉಳಿಯುವುದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗ ಗಳವರೆಗೂ ಹೀಗೆಯೂ ಉಳಿಯಬೇಕಿದೆ.
ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಬಹಳ ಹಾನಿಗೊಳಗಾಗುತ್ತಿದೆ. ಪರಿಸರದೊಂದಿಗೆ ಮಾನವನ ಹಸ್ತಕ್ಷೇಪದಿಂದಾಗಿ ಈ ಹಾನಿಯನ್ನು ಕಡಿಮೆ ಮಾಡುವುದು ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯು ವಿಶ್ವ ಪರಿಸರ ದಿನವನ್ನು ಆಚರಿಸುವ ಯೋಚನೆಯೊಂದಿಗೆ ಬಂದಿತು. ಪರಿಸರ ಸಂರಕ್ಷಣೆಗೆ ಯುವಕರನ್ನು ಉತ್ತೇಜಿಸುವ ಸಲುವಾಗಿ ಈ ದಿನವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರಕಲೆ ಸ್ಪರ್ಧೆಗಳು, ರಸಪ್ರಶ್ನೆ ಸ್ಪರ್ಧೆಗಳು, ಕಲಾ ಪ್ರದರ್ಶನಗಳು, ಪ್ರಬಂಧ ಬರವಣಿಗೆ, ಭಾಷಣ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಆಚರಿಸಲಾಗುತ್ತದೆ. ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ನಿರ್ಧಿಷ್ಟ ಥೀಮ್ ನೊಂದಿಗೆ ಆಚರಿಸುತ್ತಾ ಬರಲಾಗಿದೆ. ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನ ಅಭಿವೃದ್ಧಿ ಎಂಬ ಹಲವು ಕಾರಣಗಳಿಂದ ಪರಿಸರದಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತಿದೆ ಇದು ನಿಲ್ಲಬೇಕು ಎಂದರು.

ಜೆ ಎಸ್ ಬಿ ಪ್ರತಿಷ್ಠಾನದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಪ್ರತಿ ವರ್ಷ ಬೇರೆ ಬೇರೆ ಧ್ಯೇಯವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಈ ಧ್ಯೇಯವಾಕ್ಯದ ಉದ್ದೇಶ ಪರಿಸರದ ಬಗ್ಗೆ ಪ್ರತಿ ಎಲ್ಲರಲ್ಲೂ ಜಾಗೃತಿ ಮೂಡಿಸುವುದು ಮತ್ತು ಪರಿಸರವನ್ನು ಹಾಳು ಮಾಡುವುದನ್ನು ತಡೆಯುವುದಾಗಿದೆ. 2023ರ ಧ್ಯೇಯ 'ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವುದು' ಎಂದಾಗಿದೆ. ಪ್ಲಾಸ್ಟಿಕ್‌ನ ಉತ್ಪಾದನೆ, ಬಳಕೆ, ವಿಲೇವಾರಿ ಮತ್ತು ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.

ಕಾರ್ಯಕ್ರಮದ ಭಾಗವಾಗಿ ವೃಕ್ಷ ವನದಲ್ಲಿ ಚೆಲ್ಲಿದ್ದ ಪ್ಲಾಸ್ಟಿಕ್ ಗಳನ್ನು ಸಂಗ್ರಹಿಸಿ ಹೊರಹಾಕಲಾಯಿತು.


ಕಾರ್ಯಕ್ರಮದಲ್ಲಿ ಪುಷ್ಪ, ಲೋಹಿತಾಶ್ವ, ರವಿಕುಮಾರ್, ರಾಜೇಶ್ವರಿ, ಸುಷ್ಮಾನಾಯಕ, ಅನಿತ, ಸುಮ, ಅರಣ್ಯ ಇಲಾಖೆಯ ಸಿಬ್ಬಂದಿಗಳು ಮತ್ತು ನಿಸರ್ಗ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಹಾಜರಿದ್ದರು.

ನ್ಯಾಯಾಲಯದ ವತಿಯಿಂದ ಜಾಗೃತಿ ಜಾಥ....


ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ನಗರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಧಾನ ಸಿವಿಲ್ ನ್ಯಾಯಾಧೀಶೆ ನಂದಿನಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.

ಜಾಥವು ನಗರದ ವೃಕ್ಷವನದಿಂದ ಪ್ರಾರಂಭವಾಗಿ ಎಂಜಿಎಸ್‌ವಿ ಕಾಲೇಜು ರಸ್ತೆ, ಉಮಶಂಕರ್ ಕಲ್ಯಾಣ ಮಂಟಪ ರಸ್ತೆ ಹಾಗೂ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ನಂತರ ಮಹದೇಶ್ವರ ಕಾಲೇಜಿನಲ್ಲಿ ಮುಕ್ತಾಯಗೊಂಡು ವೇದಿಕೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶರು ಮಾತನಾಡಿದರು,


ವಿಶ್ವ ಪರಿಸರ ದಿನವನ್ನು ಜೂನ್ 5 ರಂದು ಪ್ರಪಂಚಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಪರಿಸರ ದಿನವನ್ನು ಮೊದಲು ಯುನೈಟೆಡ್ ನೇಶನ್ ಜನರಲ್ ಅಸೆಂಬ್ಲಿ ಘೋಷಿಸಿತು. 1972ರಲ್ಲಿ ವಿಶ್ವ ಪರಿಸರದ ಬಗ್ಗೆ ಒಂದು ಸಮ್ಮೇಳನವನ್ನು ನಡೆಸಲಾಯಿತು. 1973 ರಂದು ಇದನ್ನು ಮೊದಲ ಬಾರಿಗೆ ಪರಿಸರ ದಿನವನ್ನಾಗಿ ಆಚರಿಸಲಾಯಿತು. ವಿಶ್ವ ಪರಿಸರ ದಿನದ ಉದ್ದೇಶ ಪ್ಲಾಸ್ಟಿಕ್ ಅನ್ನು ನಿಷೇಧಿಸುವುದು ಹೆಚ್ಚು ಮರ ಗಿಡಗಳನ್ನು ನೆಡುವುದು ನೀರನ್ನು ಉಳಿಸುವುದು ಮರುಬಳಕೆ ಮಾಡುವುದು ವನ್ಯಜೀವಿಗಳು ಮತ್ತು ಪ್ರಾಣಿಗಳನ್ನು ಉಳಿಸುವುದು ಇವು ಉತ್ತಮ ಪರಿಸರಕ್ಕೆ ಕಾರಣವಾಗಿದೆ. ನಾವು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ತಮ್ಮ ಚಟುವಟಿಕೆಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಆರೋಗ್ಯಕರವಾಗಿರಲು ನಾವೆಲ್ಲರೂ ಶ್ರಮಿಸಬೇಕು. ಪರಿಸರವನ್ನು ರಕ್ಷಿಸಲು ಕೆಲವು ಸಕಾರಾತ್ಮಕ ಚಟುವಟಿಕೆಗಳ ಬಗ್ಗೆ ಪ್ರಪಂಚಾದ್ಯಂತ ಜನರನ್ನು ಉತ್ತೇಜಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಗಿಡಗಳನ್ನು ನೆಡುವುದು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದು ಮುಂತಾದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.


ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ರಘು ಸಿಜೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ಭಾಗ್ಯಲಕ್ಷ್ಮಿ, ವಕೀಲ ಸಂಘದ ಅಧ್ಯಕ್ಷ ಡಿಎಸ್ ಬಸವರಾಜು ಸೇರಿದಂತೆ ಅನೇಕ ಮಂದಿ ಇದ್ದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಧೀಶೆ ನಂದಿನಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನ್ಯಾಯಾಧೀಶೆ ನಂದಿನಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT