ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬು ದರ ನಿಗದಿಗೆ ಆಗ್ರಹ: ಉರುಳು ಸೇವೆ ಮಾಡಿದ ರೈತರು

ರಸ್ತೆ ತಡೆ ನಡೆಸಿ ಆಕ್ರೋಶ
Last Updated 27 ಅಕ್ಟೋಬರ್ 2022, 8:19 IST
ಅಕ್ಷರ ಗಾತ್ರ

ಮೈಸೂರು: ಕಬ್ಬು ದರ ನಿಗದಿಯಲ್ಲಿ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ 'ರಾಜ್ಯ ರೈತ ಸಂಘಟನೆಗಳ ಒಕ್ಕೂಟ'ದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿದ ರೈತರು ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆ ಸಮೀಪದ ರಿಂಗ್ ರಸ್ತೆ- ಮೈಸೂರು ನೀಲಗಿರಿ ರಸ್ತೆ ವೃತ್ತದಲ್ಲಿ ಜಮಾಯಿಸಿದ ನೂರಕ್ಕೂ ಹೆಚ್ಚು ರೈತರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ ಮಾತನಾಡಿ, 'ಕಬ್ಬು ದರ ನಿಗದಿಗಾಗಿ ನಾಲ್ಕು ಸಭೆಗಳನ್ನು ನಡೆಸಿರುವ ಸರ್ಕಾರ, ಯಾವುದೇ ತೀರ್ಮಾನ ಕೈಗೊಂಡಿಲ್ಲ. ಎಫ್ ಆರ್ ಪಿ (ನ್ಯಾಯ ಮತ್ತು ಮೌಲ್ಯಾಧಾರಿತ) ದರವನ್ನು ಇನ್ನೂ ಹೆಚ್ಚಳ ಮಾಡದಿರುವುದು ರೈತರಿಗೆ ಬಗೆದ ದ್ರೋಹವಾಗಿದೆ' ಎಂದು ಕಿಡಿಕಾರಿದರು.

'ಶಾಸಕರು, ಸಚಿವರು ರೈತ ಪರವಾಗಿ ಮಾತನಾಡುತ್ತಿಲ್ಲ. 30 ಲಕ್ಷ ಕಬ್ಬು ಬೆಳೆಗಾರರು ಅತಂತ್ರರಾಗಿದ್ದಾರೆ. ₹ 40,000 ಕೋಟಿ ವಹಿವಾಟು ನಡೆಸುವ ಕಬ್ಬು ಬೆಳೆಗಾರರಿಗಿಂತ ಬಂಡವಾಳಶಾಹಿ ಕಂಪನಿಗಳ ಬೇಡಿಕೆಗಳನ್ನಷ್ಟೇ ಸರ್ಕಾರ ಈಡೇರಿಸುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು.

'ಮುಖ್ಯಮಂತ್ರಿ, ಸಚಿವರು, ವಿಧಾನಸಭೆ ವಿರೋಧಪಕ್ಷದ ನಾಯಕರು ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ' ಎಂದು ದೂರಿದರು.

'ಪಂಜಾಬ್‌ನಲ್ಲಿ ₹ 3,800, ಉತ್ತರ ಪ್ರದೇಶದಲ್ಲಿ ₹ 3, 500, ಗುಜರಾತ್ ನಲ್ಲಿ ₹ 4,400 ಎಫ್ ಆರ್ ಪಿ ದರ ನಿಗದಿ ಮಾಡಿದ್ದಾರೆ. ರಾಜ್ಯದಲ್ಲಿ‌ ಕನಿಷ್ಠ ₹3,500 ನಿಗದಿಗೊಳಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಯಲಿದೆ. ಇದೇ 31ಕ್ಕೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು' ಎಂದು ಎಚ್ಚರಿಸಿದರು.

'ಕಬ್ಬು ಕಟಾವು, ಸಾಗಣೆ ವೆಚ್ಚದ ನೆಪದಲ್ಲಿ ರೈತರಿಂದ ಕಾರ್ಖಾನೆ ಮಾಲೀಕರು ಸುಲಿಗೆ ಮಾಡುತ್ತಿದ್ದಾರೆ. ಸರ್ಕಾರ ನಿಗದಿ ಮಾಡಿರುವ ಮಾರ್ಗಸೂಚಿಯಂತೆ ಕಾರ್ಖಾನೆಗಳು ನಡೆದುಕೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ಕಾರ್ಖಾನೆಗಳ ಮೇಲೆ ಮೊಕದ್ದಮೆ ದಾಖಲಿಸಲು ಸೂಚಿಸಬೇಕು' ಎಂದರು.

'ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಎಲ್ಲ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ನೀಡಬೇಕು. ಬ್ಯಾಂಕ್ ಸಾಲದಲ್ಲಿ ಸಿಬಿಲ್ ಸ್ಕೋರ್ ಪದ್ಧತಿ ಕೈಬಿಡಬೇಕು. ಸರ್ಕಾರ ನೀಡುವ ಪರಿಹಾರ, ಪ್ರೋತ್ಸಾಹಧನ, ವಿಧವಾ ವೇತನ, ವೃದ್ಧಾಪ್ಯ ವೇತನದ ಹಣವನ್ನು ಸಾಲದ ಖಾತೆಗಳಿಗೆ ಜಮಾ ಮಾಡಬಾರದು' ಎಂದು ಆಗ್ರಹಿಸಿದರು.

ಒಕ್ಕೂಟದ ಕೆರೆಹುಂಡಿ ರಾಜಣ್ಣ, ಭಾಗ್ಯಾ ರಾಜಣ್ಣ, ಅಂಬಳೆ ಮಹದೇವಸ್ವಾಮಿ, ಬಡಗಲಪುರ ನಾಗರಾಜು, ಕಿರಂಗೂರು ಶಂಕರ, ವೆಂಕಟೇಶ, ಲಕ್ಷ್ಮಿಪುರ ಶ್ರೀರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT