ಮೈಸೂರು: ‘ಕುಲಾಂತರಿ ಬೆಳೆಗಳಿಗೆ ರಾಷ್ಟ್ರೀಯ ನೀತಿ ರೂಪಿಸುವ ಮೊದಲು ಜನರಲ್ಲಿ ಸಮಾಲೋಚನೆ ನಡೆಸಬೇಕು’ ಎಂದು ಆಗ್ರಹಿಸಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದರು.
‘ಕುಲಾಂತರಿ ಬೆಳೆಗಳಿಗೆ ರಾಷ್ಟ್ರೀಯ ನೀತಿ ರೂಪಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಅದನ್ನು ರೂಪಿಸುವ ಮೊದಲು ಕೇಂದ್ರ ಸರ್ಕಾರದ ತಂಡ ರೈತರೊಂದಿಗೆ ಮುಕ್ತ ಸಮಾಲೋಚನೆ ನಡೆಸಬೇಕು. ಭಾರತದಲ್ಲಿ ಆಯಾಯ ಭಾಗದ ವಾತಾವರಣಕ್ಕೆ ಅನುಗುಣವಾಗಿ ಭಿನ್ನ ಬೆಳೆ ಬೆಳೆಯುತ್ತಾರೆ. ಸಮಾಲೋಚನೆ ನಡೆಸಿ ನೀತಿ ರೂಪಿಸಬೇಕು’ ಎಂದು ಒತ್ತಾಯಿಸಿದರು.
‘ಸಾವಯವ ಹಾಗೂ ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರು ಅನೇಕರಿದ್ದು, ಸಮಾಲೋಚನೆಯಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ. 2010ರಲ್ಲಿ ಬಿಟಿ ಬದನೆ ಕುರಿತು ಅಂದಿನ ಕೇಂದ್ರ ಪರಿಸರ ಸಚಿವರು ನಡೆಸಿದ ಸಮಾಲೋಚನಾ ಸಭೆಯಲ್ಲೂ ಭಾಗವಹಿಸಿ ಸಲಹೆ ನೀಡಿದ್ದೆವು. ಈ ಬಾರಿ ಮತ್ತಷ್ಟು ಮುಕ್ತವಾಗಿ ಸಭೆ ಆಯೋಜಿಸಿ ರೈತಪರ ನಿರ್ಧಾರ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಕುಲಾಂತರಿ ಬೆಳೆಗಳಿಗೆ ಸಂಬಂಧಿಸಿದಂತೆ ಕಾರ್ಪೊರೇಟ್ ನಿಯಂತ್ರಣ ಹೆಚ್ಚಾಗಿದೆ. ತಳಿಗಳ ಮೇಲೆ ಪೇಟೆಂಟ್ ವಿಧಿಸುವುದನ್ನು ಖಂಡಿಸುತ್ತೇವೆ. ಕೃಷಿಯು ಕುಂಠಿತವಾಗುತ್ತಿದೆ, ಕುಲಾಂತರಿ ಬೆಳೆಗಳೊಂದಿಗೆ ಕೃಷಿಯಲ್ಲಿನ ತೊಂದರೆ, ಮುಂದಿರುವ ಅಪಾಯದ ಬಗ್ಗೆಯೂ ಸಂವಾದ ನಡೆಸಬೇಕು’ ಎಂದು ಒತ್ತಾಯಿಸಿದರು.