ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಪಾಲರ ವಿರುದ್ಧ ಹೋರಾಟ: ವಿಜಯ್‌ಕುಮಾರ್

Published 17 ಆಗಸ್ಟ್ 2024, 14:28 IST
Last Updated 17 ಆಗಸ್ಟ್ 2024, 14:28 IST
ಅಕ್ಷರ ಗಾತ್ರ

ಮೈಸೂರು: ‘ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಚುನಾಯಿತ ಸರ್ಕಾರ ಉಳಿಸುವುದಕ್ಕಾಗಿ ಆಯಾ ರಾಜ್ಯದ ರಾಜ್ಯಪಾಲರ ನಡೆ ಪ್ರಶ್ನಿಸಿ ರಾಷ್ಟ್ರಪತಿ ಅಥವಾ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆಯ ಗಂಭೀರತೆ ಸೃಷ್ಟಿಯಾಗಿದೆ’ ಎಂದು ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್ ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಅನುಮತಿ ನೀಡಿರುವುದು ಸರಿಯಲ್ಲ. ಇದನ್ನು ಖಂಡಿಸಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪಕ್ಷದ ಪ್ರಮುಖರು ತುರ್ತು ಸಭೆ ನಡೆಸಿ ನೀಡುವ ನಿರ್ದೇಶನದಂತೆ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು.

‘ರಾಜ್ಯಪಾಲರ ವಿರುದ್ಧ ಗೋ ಬ್ಯಾಕ್ ಗವರ್ನರ್ ಚಳವಳಿ ನಡೆಸಲಾಗುವುದು. ಬಿಜೆಪಿಯಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆ ತಾರಕಕ್ಕೆ ಏರುತ್ತಿರುವುದನ್ನು ತಡೆಯುವುದಕ್ಕಾಗಿಯೇ, ರಾಜ್ಯಪಾಲರನ್ನು ಬಳಸಿಕೊಳ್ಳಲಾಗಿದೆ; ಸಿದ್ದರಾಮಯ್ಯ ವಿರುದ್ಧದ ತನಿಖೆಗೆ ಅನುಮತಿ ಕೊಡಿಸಲಾಗಿದೆ’ ಎಂದು ಆರೋಪಿಸಿದರು.

‘ನಾಲ್ಕು ದಶಕಗಳ ರಾಜಕಾರಣದಲ್ಲಿ ಸಿದ್ದರಾಮಯ್ಯ ಮೇಲೆ ಯಾವುದೇ ಕಳಂಕ ಇಲ್ಲ. ಪ್ರಾಮಾಣಿಕತೆ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವುದಿಲ್ಲ. ಕಾರ್ಯಕರ್ತರಾದ ನಾವೆಲ್ಲರೂ ಅವರೊಂದಿಗೆ ಇದ್ದೇವೆ. ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವ ಮೂಲಕ ಕರ್ನಾಟಕ ರಕ್ಷಿಸಬೇಕು’ ಎಂದು ಒತ್ತಾಯಿಸಿದರು.

‘78ನೇ ಸ್ವಾತಂತ್ರ್ಯೋತ್ಸವದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಕೇಂದ್ರ ಸರ್ಕಾರ ನಡೆಸಿಕೊಂಡ ರೀತಿ ಸರಿಯಲ್ಲ. ಕೇಂದ್ರವು ದ್ವೇಷ ರಾಜಕಾರಣ ಮಾಡುತ್ತಿರುವುದನ್ನು ಆ ಘಟನೆ ತೋರಿಸಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT