ಮೈಸೂರು: ‘ಮುಡಾ ಕಡತದಲ್ಲಿದ್ದ ನೈಜ ದಾಖಲೆಗಳನ್ನು ನಾಶಪಡಿಸಿ, ಆ ಜಾಗದಲ್ಲಿ ಸುಳ್ಳು ದಾಖಲೆಗಳನ್ನು ಸೇರಿಸಿದ್ದಾರೆ’ ಎಂದು ದೂರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ. ಪಾರ್ವತಿ ಹಾಗೂ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ವಿರುದ್ಧ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಇಲ್ಲಿನ ಲಕ್ಷ್ಮಿಪುರಂ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
‘ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ರ ಜಮೀನಿಗೆ ಬದಲಿ ನಿವೇಶನ ನೀಡುವಂತೆ ಪಾರ್ವತಿ ಅವರು 2014ರ ಜೂನ್ 23ರಂದು ಮುಡಾ ಆಯುಕ್ತರಿಗೆ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಸಿದ್ದರಾಮಯ್ಯ ಜುಲೈ 26ರಂದು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದರು. ಅದರ ಎರಡನೇ ಪುಟದಲ್ಲಿ ಕೆಲವೆಡೆ ವೈಟ್ನರ್ ಹಾಕಿರುವ ಕುರಿತು ಅನುಮಾನ ವ್ಯಕ್ತವಾಗಿತ್ತು. ಆಗಸ್ಟ್ 26ರಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದು, ವೈಟ್ನರ್ ಹಿಂದೆ ಏನಿತ್ತು ಎಂಬುದನ್ನು ಪ್ರದರ್ಶಿಸಿದ್ದಾರೆ. ಅದರಲ್ಲಿರುವ ಪಾರ್ವತಿ ಅವರ ಸಹಿಗೂ, ನಾವು ಮಾಹಿತಿ ಹಕ್ಕಿನ ಅಡಿ ಪಡೆದುಕೊಂಡ ಅದೇ ಪತ್ರದಲ್ಲಿರುವ ಸಹಿಗೂ ವ್ಯತ್ಯಾಸಗಳಿವೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
‘ಎರಡೂ ಪತ್ರಗಳ ಸಹಿಗಳಲ್ಲಿ ಒಟ್ಟು 9 ವ್ಯತ್ಯಾಸಗಳಿವೆ. ಎಕ್ಸ್ ಗುರುತುಗಳು, ವಿವಿಧ ಅಕ್ಷರಗಳಲ್ಲಿ ಭಿನ್ನತೆ ಕಂಡುಬಂದಿದೆ. ನನ್ನ ಬಳಿ ಇರುವ ದಾಖಲೆಯಲ್ಲಿ ಎರಡನೇ ಪುಟದ ಎಡಭಾಗದಲ್ಲಿ ಟ್ಯಾಗ್ ಹಾಕಿದ್ದರೆ, ಸೃಷ್ಟಿಸಿರುವ ದಾಖಲೆಯ ಬಲಭಾಗದಲ್ಲಿ ಟ್ಯಾಗ್ ಗುರುತು ಕಾಣಿಸುತ್ತದೆ. ಮುಖ್ಯಮಂತ್ರಿ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ ಅವರ ಧ್ವನಿ ಕೇಳಿಸುತ್ತದೆ’ ಎಂದಿದ್ದಾರೆ.
‘ಪಾರ್ವತಿ ಅವರು ಬರೆದಿದ್ದ ಮೂಲ ಪತ್ರದಲ್ಲಿ, ವಿಜಯನಗರದಲ್ಲಿ ನಿವೇಶನ ಕೊಡಿ ಎಂದು ಕೋರಿದ್ದ ವಿಚಾರವನ್ನು ಮುಚ್ಚಿಟ್ಟು, ದೇವನೂರು ಮೂರನೇ ಹಂತದ ಬಡಾವಣೆ ಅಥವಾ ನಂತರ ಎಂಬ ಪದಗಳ ಮೇಲೆ ವೈಟ್ನರ್ ಹಾಕಲಾಗಿದೆ ಎಂಬಂತೆ ಬಿಂಬಿಸುವ ಸಲುವಾಗಿ ಎಂ. ಲಕ್ಷ್ಮಣ್ ಹಾಗೂ ಪಾರ್ವತಿ ಅವರು ಸಂಚು ರೂಪಿಸಿ ಹೊಸತಾಗಿ ಸುಳ್ಳು ಪತ್ರವನ್ನು ಸೃಷ್ಟಿಸಿದ್ದಾರೆ. ಮುಡಾದ ಕಡತದಲ್ಲಿ ಇದ್ದ ಈ ಮೂಲ ಪತ್ರವನ್ನು ನಾಶಪಡಿಸಿ, ಆ ಜಾಗದಲ್ಲಿ ಈಚೆಗೆ ಸೃಷ್ಟಿಸಿರುವ ಪತ್ರ ಇರಿಸಿ ಅದನ್ನೇ ವಿಡಿಯೊ ಮಾಡಿರುವ ಅನುಮಾನವಿದೆ. ಅದಕ್ಕೆ ಕಾರಣರಾದ ಈ ಇಬ್ಬರು ಹಾಗೂ ಅದಕ್ಕೆ ಸಹಕರಿಸಿದವರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
‘ಸ್ನೇಹಮಯಿ ಕೃಷ್ಣ ನಕಲಿ ದಾಖಲೆಗಳ ಸೃಷ್ಟಿಕರ್ತ’
ಮೈಸೂರು: ‘ಬಿಜೆಪಿ–ಜೆಡಿಎಸ್‌ಗೆ ಸ್ನೇಹಮಯಿ ಕೃಷ್ಣ ಅವರೇ ದಾಖಲೆಗಳನ್ನು ಸೃಷ್ಟಿಸಿಕೊಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರ ಸಹಿ ಕುರಿತ ನಕಲಿ ದಾಖಲೆಗಳನ್ನೂ ಸೃಷ್ಟಿಸಿ ಬಿಡುಗಡೆ ಮಾಡಿದ್ದಾರೆ’ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದರು.
‘ಪತ್ರಗಳ ನೈಜತೆ, ಸಹಿ ತಾಳೆಯಾಗದಿರುವುದನ್ನು ಪತ್ತೆ ಮಾಡಲು ಕೃಷ್ಣ ಅವರೇನು ಎಫ್‌ಎಸ್‌ಎಲ್ ತಜ್ಞರೇ’ ಎಂದು ಲಕ್ಷ್ಮಣ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಅವರು ಜೆಡಿಎಸ್ ಮುಖಂಡರಿಗೆ ಮಾಡಿಕೊಟ್ಟಿದ್ದ ವಿಡಿಯೊವನ್ನೇ ಮುಖ್ಯಮಂತ್ರಿ ಹಂಚಿಕೊಂಡಿದ್ದಾರೆ. ಮೂಲ ಪತ್ರದಲ್ಲಿರುವುದನ್ನೇ ಹೇಳಿದ್ದಾರೆ. ನಾವು ಹೊಸತಾಗಿ ವಿಡಿಯೊ ಮಾಡಿಲ್ಲ. ಯಾವುದೇ ಬದಲಿ ಪತ್ರ ಸೃಷ್ಟಿಸಿಲ್ಲ’ ಎಂದು ಸಮಜಾಯಿಷಿ ನೀಡಿದರು.
‘ಭೂವಿವಾದ ಸೃಷ್ಟಿಸಿ ಜಮೀನು ಕಬಳಿಸುವುದರಲ್ಲಿ ಕೃಷ್ಣ ನಿಸ್ಸೀಮ. ಅವರ ವಿರುದ್ಧ ಮೈಸೂರು ನಗರದ ವಿವಿಧ ಠಾಣೆಗಳಲ್ಲಿ 17 ಪ್ರಕರಣ, ಗ್ರಾಮೀಣದಲ್ಲಿ 12 ಸೇರಿದಂತೆ ರಾಜ್ಯದ ವಿವಿಧೆಡೆ ಒಟ್ಟು 44 ಪ್ರಕರಣಗಳು ದಾಖಲಾಗಿವೆ. ಮೈಸೂರಿನ ಕೆ.ಆರ್. ಠಾಣೆಯ ರೌಡಿಗಳ ಪಟ್ಟಿಯಲ್ಲೂ ಅವರ ಹೆಸರಿದೆ. ಅವರ ಮನೆಗೆ ದಾಳಿ ಮಾಡಿದರೆ ಮುಡಾ ಸೀಲ್, ಛಾಪಾ ಕಾಗದಗಳು ಸಿಗುತ್ತವೆ’ ಎಂದು ದೂರಿದರು.
‘ಹಿರಿಯ ಪೊಲೀಸ್ ಅಧಿಕಾರಿಗಳೂ ಅವರನ್ನು ಕಂಡರೆ ಹೆದರುತ್ತಾರೆ. ಹೀಗಾಗಿ ನಾವು 15 ದಿನದ ಹಿಂದೆಯೇ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದರು.
‘₹100 ಕೋಟಿ ನೀಡಿದರೆ ಮುಖ್ಯಮಂತ್ರಿ ವಿರುದ್ಧದ ದೂರು ಹಿಂಪಡೆದು ಪ್ರಕರಣ ಮುಕ್ತಾಯಗೊಳಿಸುವುದಾಗಿ ಕೃಷ್ಣ ಪರವಾಗಿ ಕೆಲವರು ಬೇಡಿಕೆ ಇಟ್ಟಿದ್ದಾರೆ. ಸದ್ಯದಲ್ಲೇ ಅದರ ವಿವರಗಳನ್ನು ನೀಡುತ್ತೇನೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.