ಮಂಗಳವಾರ, ಜನವರಿ 31, 2023
26 °C
ಕಾರ್ಖಾನೆಯ ಅಮೃತ ಮಹೋತ್ಸವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ

‘ಮೈಲ್ಯಾಕ್‌’ ಉನ್ನತೀಕರಣಕ್ಕೆ ನೆರವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮೈಲ್ಯಾಕ್‌ ಸೇರಿದಂತೆ ಸರ್ಕಾರದ ಉದ್ಯಮಗಳು ಖಾಸಗಿ ವಲಯದಿಂದ ಪೈಪೋಟಿಯನ್ನು ಎದುರಿಸುತ್ತಿದ್ದು, ಕಾರ್ಖಾನೆಯ ತಂತ್ರಜ್ಞಾನ ಉನ್ನತೀಕರಣ ಹಾಗೂ ಮಾರುಕಟ್ಟೆ ವಿಸ್ತರಣೆಗೆ ಅಗತ್ಯ ನೆರವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. 

ಇಲ್ಲಿನ ಕಲಾಮಂದಿರದಲ್ಲಿ ಸೋಮವಾರ ನಡೆದ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ (ಮೈಲ್ಯಾಕ್) ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  

‘ನಾಲ್ವಡಿ ಕೃಷ್ಣರಾಜ ಒಡೆಯರ್‌ ಸ್ಥಾಪಿಸಿದ ಉದ್ಯಮಗಳು ಗುಣಮಟ್ಟ ಕಾ‍ಪಾಡಿಕೊಂಡಿದ್ದರಿಂದಲೇ ಜಾಗತೀಕರಣದ ಸವಾಲನ್ನು ಎದುರಿಸಿ ಅಸ್ತಿತ್ವ ಉಳಿಸಿಕೊಂಡಿವೆ. ಅವುಗಳನ್ನು ಬೆಳೆಸಬೇಕಾದದ್ದು, ಸರ್ಕಾರದ ಜವಾಬ್ದಾರಿ’ ಎಂದು ತಿಳಿಸಿದರು.

‘ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರ ಸೇರಿದಂತೆ ಎಲ್ಲ ರಂಗದಲ್ಲೂ ಸಾಧನೆ ಮಾಡಲು ನಾಲ್ವಡಿ ಹಾಕಿಕೊಟ್ಟ ಭದ್ರ ಬುನಾದಿ ಕಾರಣ. ಕಾಗದ, ಬಣ್ಣ, ಸಾಬೂನು, ಕಬ್ಬಿಣ, ಉಕ್ಕು ಸೇರಿದಂತೆ ಅಗತ್ಯ ವಸ್ತುಗಳು ಜನರಿಗೆ ಸಿಗುವಂತೆ ಮಾಡಿ ದರು. ಆಗಿನ ಕಾಲದ ಅವಶ್ಯಕತೆಯನ್ನೂ ಮೀರಿ ದೂರದೃಷ್ಟಿ ಯಿಂದ ಉದ್ಯಮ, ಕಾರ್ಖಾನೆ, ಅಣೆಕಟ್ಟುಗಳನ್ನು ಸ್ಥಾಪಿಸಿದರು’ ಎಂದು
ಸ್ಮರಿಸಿದರು.

‘ಮೈಸೂರು ಸಂಸ್ಥಾನವು ರಾಜ್ಯದ ಕೃಷಿ, ಕೈಗಾರಿಕೆ, ಶಿಕ್ಷಣ, ಆರ್ಥಿಕತೆಗೆ ಅಡಿಪಾಯ ಹಾಕಿತು. ಈಗಾಗಿಯೇ ಹಳೇ ಮೈಸೂರು ಭಾಗ ಸಮೃದ್ಧವಾಗಿದೆ’ ಎಂದು ಬಣ್ಣಿಸಿದರು. 

ಪ್ರತಿಮೆ ಸ್ಥಾಪನೆ: ‘ವಾಣಿವಿಲಾಸ ಸನ್ನಿಧಾನ ನಿರ್ಮಿಸಿದ ವಾಣಿವಿಲಾಸ ಸಾಗರ ಅಣೆಕಟ್ಟು 88 ವರ್ಷದ ನಂತರ ತುಂಬಿತ್ತು. ಅದಕ್ಕೆ ಬಾಗಿನ ಅರ್ಪಿಸುವ ಭಾಗ್ಯ ನನ್ನದಾಗಿತ್ತು. ಮಧ್ಯ ಕರ್ನಾಟಕಕ್ಕೆ ನೀರನ್ನು ಒದಗಿಸುವ ಯೋಜನೆಯನ್ನು 120 ವರ್ಷಗಳ ಹಿಂದೆಯೇ ಅನುಷ್ಠಾನಗೊಳಿಸಲಾಗಿತ್ತು. ಅಲ್ಲಿ ರಾಜವಂಶಸ್ಥರ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಲೋಕಾರ್ಪಣೆ ನಡೆಯಲಿದೆ’ ಎಂದು ತಿಳಿಸಿದರು.

‘ನೀರಾವರಿ ಸಚಿವನಾಗಿದ್ದಾಗ ಕೆಆರ್‌ಎಸ್‌ ಅಣೆಕಟ್ಟೆಯ 75 ವರ್ಷ ಹಳೆಯದಾದ ಗೇಟ್‌ಗಳಿಂದ 300 ಕ್ಯುಸೆಕ್‌ ನೀರು ಸೋರಿಕೆಯಾಗುತ್ತಿತ್ತು. ಗೇಟ್‌ಗಳನ್ನು ದುರಸ್ತಿ ಮಾಡಡಲಾ ಗಿದ್ದು, ಇನ್ನೂ 50 ವರ್ಷ ಅವುಗಳನ್ನು ಬದಲಿಸುವ ಅಗತ್ಯವಿಲ್ಲ’ ಎಂದರು.  

‘ಅರಮನೆಯಲ್ಲಿ ಈಗಲೂ ಮೈಲ್ಯಾಕ್ ಬಣ್ಣ ಬಳಕೆ’: ರಾಜವಂಶಸ್ಥೆ ‍ಪ್ರಮೋದಾದೇವಿ ಒಡೆಯರ್‌ ಮಾತನಾಡಿ, ‘ಅರಮನೆಯನ್ನು ಅಂದಗೊಳಿಸಲು ಈಗಲೂ ಮೈಲ್ಯಾಕ್‌ನ ಬಣ್ಣಗಳನ್ನು ಬಳಸಲಾಗುತ್ತಿದೆ. ಕಾರ್ಖಾನೆಯು ಉತ್ತಮವಾಗಿ ಬೆಳೆಯಬೇಕು. ಮತ್ತಷ್ಟು ಲಾಭ ಗಳಿಸಿ ಸ್ವಾವಲಂಬನೆ ಸಾಧಿಸಲಿ. ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಡಲಿ’ ಎಂದರು. 

‘ಕಡತಗಳು ಸೇರಿದಂತೆ, ಮನೆಯ ಕೊಠಡಿಗಳಿಗೆ ಸೀಲ್‌ ಮಾಡುವ ಪದ್ಧತಿ ಇದೆ. ಅಲ್ಲೆಲ್ಲ ಮೈಲ್ಯಾಕ್‌ ಸೀಲ್‌ ಬಳಸಲಾಗುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿಯೇ ಕಾರ್ಖಾನೆ 75 ವರ್ಷಾಚರಣೆ ಮಾಡುತ್ತಿರುವುದು ವಿಶೇಷವಾಗಿದೆ’ ಎಂದು ತಿಳಿಸಿದರು. 

‘ಪ್ರಜಾತಂತ್ರದ ಯಶಸ್ಸಿನಲ್ಲಿ ಕಾರ್ಖಾನೆ’: ಮೈಲ್ಯಾಕ್ ಅಧ್ಯಕ್ಷ ಆರ್.ರಘು ಮಾತನಾಡಿ, ‘ನಾಲ್ವಡಿ ಸ್ಥಾಪಿಸಿದ ಉದ್ಯಮ ಮೈಲ್ಯಾಕ್‌ ಭಾರತ ಸೇರಿದಂತೆ ಹತ್ತಾರು ದೇಶಗಳ ಚುನಾವಣೆಗಳಲ್ಲಿ ಬಳಸುವ ಗುರುತಿನ ಶಾಹಿಯನ್ನು ಪೂರೈಸುತ್ತಿದೆ. ಪ್ರಜಾತಂತ್ರದ ಯಶಸ್ಸಿನ ಹಿಂದೆ ಕಾರ್ಖಾನೆ ಕಾಣಿಕೆಯೂ ಇದೆ’ ಎಂದರು.

‘ನಷ್ಟವೇ ಕಾಣದ ಹೆಮ್ಮೆಯ ಮೈಲ್ಯಾಕ್‌ ವಿಸ್ತಾರವಾಗಿ ಬೆಳೆಯಲು ಆಧುನೀಕರಣಗೊಳ್ಳಬೇಕು. ಮೈಸೂರಿನ ಸಾಂಪ್ರದಾಯಿಕ ಉದ್ಯಮಗಳಿಗೆ ಪಾರಂಪರಿಕ ಸ್ಪರ್ಶವಿದ್ದು, ಉನ್ನತೀಕರಣಕ್ಕೆ ನೆರವಿನ ಜೊತೆಗೆ ತಾಂತ್ರಿಕ ಪರಿಣತರನ್ನು ನೇಮಿಸಬೇಕು’ ಎಂದರು.

ಜಲಸಂನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜವಂಶಸ್ಥೆ‌ ಪ್ರಮೋದಾ ದೇವಿ ಒಡೆಯರ್, ಶಾಸಕರಾದ ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ಸಿ.ಎಸ್.ನಿರಂಜನ್ ಕುಮಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಕಾಡಾ ಅಧ್ಯಕ್ಷ ನಿಜಗುಣರಾಜು, ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ರೂಪಾ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಬಿ.ಆರ್.ಪೂರ್ಣಿಮಾ, ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ಮೈಲ್ಯಾಕ್‌ ವ್ಯವಸ್ಥಾಪಕ ನಿರ್ದೇಶಕ ಜಿ.ಕುಮಾರಸ್ವಾಮಿ, ಸಿ.ಹರಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು