ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಓದು, ಪಠ್ಯಕ್ಕೆ ಸೀಮಿತವಾಗುತ್ತಿರುವ ಮಕ್ಕಳು: ವಿ.ಎನ್‌.ಮಲ್ಲಿಕಾರ್ಜುನ

ಜನಪದ ನೃತ್ಯ ಮತ್ತು ಗೀತೆಗಳ ಕಲಿಕಾ ಶಿಬಿರ ಸಮಾರೋಪ
Published 4 ಸೆಪ್ಟೆಂಬರ್ 2024, 5:14 IST
Last Updated 4 ಸೆಪ್ಟೆಂಬರ್ 2024, 5:14 IST
ಅಕ್ಷರ ಗಾತ್ರ

ಮೈಸೂರು: ‘ಮಕ್ಕಳನ್ನು ಓದು, ಪಠ್ಯಕ್ಕೆ ಕಟ್ಟಿಹಾಕುತ್ತಿದ್ದೇವೆ. ಇದರಿಂದ ಅವರಲ್ಲಿರುವ ಅಪರಿಮಿತ ಕಲಾ ಶಕ್ತಿಯನ್ನು ಪೋಷಕರೇ ಕುಂಠಿತಗೊಳಿಸುತ್ತಿದ್ದೇವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್‌.ಮಲ್ಲಿಕಾರ್ಜುನ ಹೇಳಿದರು.

ಕರ್ನಾಟಕ ಜಾನಪದ ಅಕಾಡೆಮಿ, ಪ್ರಾದೇಶಿಕ ಜಾನಪದ ಅಧ್ಯಯನ ಮತ್ತು ಜಾನಪದ ಕಲೆಗಳ ಕಲಿಕಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಏಕತಾರಿ ಸಾಂಸ್ಕೃತಿಕ ಸಂಘಟನೆಯು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜನಪದ ನೃತ್ಯ ಮತ್ತು ಜನಪದ ಗೀತೆಗಳ ಕಲಿಕಾ ಶಿಬಿರದಲ್ಲಿ ಮಾತನಾಡಿದರು.

‘ಜನಪದ ಕಲಾವಿದರು ತಮ್ಮ ಹಸಿವು, ಸಂಕಷ್ಟ, ಆಕ್ರೋಶಗಳನ್ನು ಕಾವ್ಯ ರೂಪದಲ್ಲಿ ಹೊರ ತಂದಿದ್ದಾರೆ. ಜನವಾಣಿ ಇಲ್ಲದಿದ್ದರೆ ಹಾಡು ಹುಟ್ಟುವುದು ಅಸಾಧ್ಯವಾಗಿರುತ್ತಿತ್ತು. ಬದುಕಿನ ಕ್ಷಣಗಳನ್ನು ಕಾವ್ಯವಾಗಿಸಿದ್ದ ಹಿರಿಯರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ದಾಟಿಸುವ ಕೆಲಸವಾಗಬೇಕು’ ಎಂದು ಹೇಳಿದರು.

ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಳ್ಳಿ ಶಿವಪ್ರಸಾದ್‌ ಮಾತನಾಡಿ, ‘ಪೋಷಕರು ಮಕ್ಕಳನ್ನು ಷೋಕೇಸ್‌ಗಳಾಗಿ ಬೆಳೆಸುತ್ತಿದ್ದಾರೆ. ಮಗು ಅತ್ತಾಗ ಜೋಗುಳ ಹಾಡುವ ದಿನಗಳು ಮರೆಯಾಗಿ ಮೊಬೈಲ್‌ ನೀಡಿ ಸಮಾಧಾನಪಡಿಸುವ ದಿನ ಬಂದಿವೆ. ಆದರೆ ನಾವು ಮೊಬೈಲ್‌ ರೂಪದ ಅಟಂ ಬಾಂಬ್‌ ಅವರ ಕೈಗೆ ನೀಡುತ್ತಿದ್ದೇವೆ ಎಂಬುದರ ಅರಿವು ನಮ್ಮಲ್ಲಿರಬೇಕು. ಹೊಸ ಜಗತ್ತಿನ ಹುಡುಕಾಟದಲ್ಲಿ ನಮ್ಮತನವನ್ನು ಮರೆಯಬಾರದು’ ಎಂದು ಸಲಹೆ ನೀಡಿದರು.

ಜಾನಪದ ಅಕಾಡೆಮಿ ಸದಸ್ಯರಾದ ಉಮೇಶ್‌, ಗುರುರಾಜ್‌ ಮೈಸೂರು, ಮಲ್ಲಿಕಾರ್ಜುನ ಕಮ್ಮರಳ್ಳಿ, ಮಿಮಲಾ ವೀರೇಶ್‌, ದೇವಾನಂದವರಪ್ರಸಾದ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT