ಮೈಸೂರು: ಈ ಬಾರಿಯ ಜಿ-20 ಶೃಂಗಸಭೆಯ ಅಧ್ಯಕ್ಷತೆಯನ್ನು ದೇಶವು ವಹಿಸಿದ್ದು, ಇದರ ಭಾಗವಾಗಿ ನಗರದಲ್ಲೂ ಜುಲೈ 31ರಿಂದ ಆ.3ರವರೆಗೆ ಕಾರ್ಯಕ್ರಮ ನಡೆಯಲಿದೆ.
ಜಿ-20 ಸದಸ್ಯ ರಾಷ್ಟ್ರಗಳ 250 ಮಂದಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅವರು ರ‍್ಯಾಡಿಷನ್ ಬ್ಲ್ಯೂ ಮತ್ತು ಗ್ರ್ಯಾಂಡ್ ಮರ್ಕ್ಯೂರಿ ಹೋಟೆಲ್‌ಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಭದ್ರತಾ ದೃಷ್ಟಿಯಿಂದ ಅವರು ತಂಗಲಿರುವ ಹೋಟೆಲ್‌ಗಳ ಸುತ್ತಮುತ್ತ ಹಾಗೂ ಮೈಸೂರು ಅರಮನೆಯ ಸುತ್ತಮುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಯಾವುದೇ ರೀತಿಯ ಡ್ರೋನ್‌ಗಳು ಮತ್ತು ಇತರ ಯಾವುದೇ ಹಾರಾಟವನ್ನು ನಿಷೇಧಿಸಲಾಗಿದೆ.
‘ಸೆಕ್ಷನ್ 144 ಸಿ.ಆರ್.ಪಿ.ಸಿ. ರೀತ್ಯ ಪ್ರದತ್ತವಾದ ಅಧಿಕಾರದಂತೆ ಜುಲೈ 31ರಿಂದ ಆ.3ರವರೆಗೆ ಈ ಪ್ರದೇಶಗಳನ್ನು ‘ತಾತ್ಕಾಲಿಕವಾಗಿ ಯಾವುದೇ ಹಾರಾಟವಿಲ್ಲದ ವಲಯ’ ಎಂದು ಅಧಿಸೂಚನೆ ಹೊರಡಿಸಲಾಗಿದೆ. ಜಿ-20 ಕಾರ್ಯಕ್ರಮಕ್ಕೆ ಭಾಗವಹಿಸಲಿರುವ ಗಣ್ಯರ ಭದ್ರತೆಯ ದೃಷ್ಟಿಯಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶ ಉಲ್ಲಂಘಿಸಿ ಯಾರಾದರೂ ಅನಧಿಕೃತವಾಗಿ ಹಾಗೂ ಆಕ್ಷೇಪಾರ್ಹವಾಗಿ ಡ್ರೋನ್ ಮತ್ತು ಇತರ ಯಾವುದೇ ಹಾರಾಟ ನಡೆಸುವುದು ಕಂಡುಬಂದಲ್ಲಿ ಅಂಥವರ ವಿರುದ್ಧ ಕಾನೂನಿನ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶದಲ್ಲಿ ತಿಳಿಸಿದ್ದಾರೆ.
ಅರಮನೆಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ: ಜಿ–20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಗಣ್ಯರು ಅಂಬಾವಿಲಾಸ ಅರಮನೆಗೆ ಭೇಟಿ ನೀಡಲಿದ್ದಾರೆ. ಅವರ ಭದ್ರತಾ ದೃಷ್ಟಿಯಿಂದಾಗಿ ಅ.1ರಂದು ಮಧ್ಯಾಹ್ನ 2.30ರಿಂದ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಆ.2ರಂದು ಸಂಜೆ 7ರಿಂದ 8ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೂ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಗಣ್ಯರು ವಿವಿಧ ಪ್ರವಾಸಿ ತಾಣಗಳಿಗೂ ಭೇಟಿ ನೀಡಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.