ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರ ಆಪ್ತವಾಗಿಸಿದ ಗಾಂಧಿ ಲೋಕ: ಮುಕ್ತ ಗಂಗೋತ್ರಿಯಲ್ಲಿ ಗ್ರಾಮ್ಯ ಭಾರತ ಅನಾವರಣ

ಮುಕ್ತ ಗಂಗೋತ್ರಿಯಲ್ಲಿ ಗ್ರಾಮ್ಯ ಭಾರತ ಅನಾವರಣ l ರಂಗಕರ್ಮಿ ಪ್ರಸನ್ನ ಭಾಷಣ
Last Updated 7 ಫೆಬ್ರುವರಿ 2023, 10:29 IST
ಅಕ್ಷರ ಗಾತ್ರ

ಮೈಸೂರು: ಉಡಲು ಖಾದಿ ಬಟ್ಟೆಗಳು.. ಆಪ್ತವೆನಿಸುವ ಕರಕುಶಲ ವಸ್ತುಗಳು.. ಬಾಲ್ಯದ ತಿನಿಸು ನೆನಪಿಸುವ ಸಿರಿಧಾನ್ಯಗಳು.. ನೂಲುವ ಚರಕ– ನೈಸರ್ಗಿಕ ಒಡವೆಗಳು...

ಮುಕ್ತ ಗಂಗೋತ್ರಿಯ ಆವರಣಕ್ಕೆ ಮಂಗಳವಾರ ನಗರದ ವಿವಿಧ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳನ್ನು ಮೇಲಿನ ವಸ್ತುಗಳು ಸೆಳೆದವು. ಅವುಗಳ ಮೂಲಕವೇ ‘ಬಾಪೂಜಿ’ ಕನಸಿನ ಗ್ರಾಮ್ಯ ಭಾರತವನ್ನು ಅಪ್ಪುವ ವಾತಾವರಣ ಅಲ್ಲಿ ಒಡಮೂಡಿತ್ತು.

ಕೆಎಸ್‌ಒಯು, ಮಹಾಜನ, ಮಹಾರಾಣಿ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವಜನರಿಗಾಗಿ ಗಾಂಧಿ’ ಉಪನ್ಯಾಸ, ಕೃತಿ ಬಿಡುಗಡೆ, ಗಾಂಧಿ ಬದುಕಿನ ಸಾಕ್ಷ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನ ಹಾಗೂ ಖಾದಿ ವಸ್ತುಗಳ ಮಾರಾಟ ಮೇಳದ ‘ಗಾಂಧಿ ಲೋಕ’ದಲ್ಲಿ ವಿದ್ಯಾರ್ಥಿಗಳು ವಿಹರಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ರಂಗಕರ್ಮಿ ಪ್ರಸನ್ನ, ‘ವಿಶ್ವದಲ್ಲಿ ಎಲ್ಲ ಒಳ್ಳೆಯ ವಿಚಾರಗಳನ್ನು ಸಂಕೇತಗಳನ್ನಾಗಿ ಮಾಡಲಾಗಿದೆ. ಧರ್ಮಗಳು ಕಚ್ಚಾಟದ ವೇದಿಕೆಗಳಾಗಿವೆ. ಸತ್ಯ ವಿಚಾರಗಳನ್ನು ಹೇಳದೇ ಮಠ, ಮಂದಿರ, ಮಸೀದಿ, ಚರ್ಚುಗಳು ಕೇವಲ ಕಟ್ಟಡಗಳಾದರೆ, ಅವುಗಳನ್ನು ಯುವ ಮನಸ್ಸುಗಳು ತಿರಸ್ಕರಿಸಬೇಕು’ ಎಂದರು.

‘ಒಳ್ಳೆಯ ವಿಚಾರ– ವ್ಯಕ್ತಿತ್ವಗಳನ್ನು ಸಂಕೇತಗಳನ್ನಾಗಿ ಮಾಡಿರುವುದಲ್ಲದೇ ಚೌಕಟ್ಟಿನಲ್ಲಿ ಬಂಧಿಸಲಾಗಿದೆ. ನಗರಗಳು ಬೆಳೆಯುತ್ತಿವೆ. ಕಾಡುಗಳು ಅಳಿಯುತ್ತಿವೆ. ಎಲ್ಲವೂ ಮಾರಾಟದ ಸರಕಾಗಿದೆ. ಈ ಮಾರಾಟವನ್ನು ತಪ್ಪಿಸಬೇಕು. ಸತ್ಯ ಅನ್ನಿಸುವುದನ್ನು ಧೈರ್ಯವಾಗಿ ಹೇಳಬೇಕು’ ಎಂದು ಪ್ರತಿಪಾದಿಸಿದರು.

‘ಸ್ಥಾವರಗಳನ್ನು ಕಟ್ಟುತ್ತಲೇ ಇರುವುದರಿಂದ ಬರುವ 100 ವರ್ಷದಲ್ಲಿ ಮನುಕುಲ ನಾಶವಾಗಲಿದೆಯೆಂದು ವಿಜ್ಞಾನಿ ಸ್ಟೀಫನ್‌ ಹಾಕಿಂಗ್ ಹೇಳಿದ್ದಾನೆ. ಗಾಂಧಿ ಮಾರ್ಗದ ಕಡೆ ಹೊರಳುವ ಸಮಯ ತುರ್ತಿನ ಸಮಯವಿದು. ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಿದೆ. 2 ಮೊಬೈಲ್ ಬದಲು ಒಂದು ಬಳಸಿದರೆ ಸಾಕು. ನಾವು ಕೂಡ ಗಾಂಧಿ ಕಡೆಗೆ ಇಡುವ ಒಂದು ಹೆಜ್ಜೆಯಾಗಿದೆ’ ಎಂದರು.

‘ಜಂಗಮ ಕ್ರಿಯಾತ್ಮಕ, ಸ್ಥಾವರವೆಂದರೆ ಕಟ್ಟಡ. ಇವೆರಡನ್ನು ಗಾಂಧೀಜಿ ದೈವಿ ಸಂಬಂಧವಾಗಿ ನೋಡಿದರು. ಈ ಎರಡರಲ್ಲೂ ಒಂದು ದೊಡ್ಡದಾದರೆ ಅನಾಹುತ ನಡೆಯುತ್ತದೆ. ಗಾಂಧೀಜಿ ಯಂತ್ರ ವಿರೋಧಿಸುತ್ತಿರಲಿಲ್ಲ. ಇಂದು ಕಂಪ್ಯೂಟರ್‌ನಿಂದ ಕೃತಕ ಬುದ್ಧಿಮತ್ತೆ ಕಾಲಕ್ಕೆ ಬಂದಿದ್ದೇವೆ. ಎಲ್ಲವನ್ನೂ ಒಂದು ಆ್ಯಪ್ ಮಾಡುವುದಾದರೆ ನಮಗೇನು ಕೆಲಸವಿದೆ’ ಎಂದು ಪ್ರಶ್ನಿಸಿದರು.

‘ಸಂಕೇತಗಳ ಭ್ರಮೆಯಲ್ಲಿ ಒದ್ದಾಡುವುದನ್ನು ಬಿಡಬೇಕು. ಸರಳ ಜೀವನಶೈಲಿಯ ಮೂಲಕವೇ ಗಾಂಧಿ, ಬಸವ, ಬುದ್ದ, ಅಂಬೇಡ್ಕರ್ ಅವರನ್ನು ಕಾಣಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ಗಾಂಧಿ‌ ಸ್ಮಾರಕ ನಿಧಿ ಅಧ್ಯಕ್ಷ ಡಾ.ಊಡೆ ಪಿ. ಕೃಷ್ಣ, ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಬೆಂಗಳೂರು ಗಾಂಧಿ ಭವನದ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಡಾ.ಎನ್.ಆನಂದಗೌಡ, ಹಣಕಾಸು ಅಧಿಕಾರಿ ಖಾದರ್ ಪಾಷಾ, ಶೈಕ್ಷಣಿಕ ಡೀನ್ ಕಾಂಬ್ಳೆ‌ ಅಶೋಕ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಅಧ್ಯಯನ ಕೇಂದ್ರದ ಡೀನ್‌ ಡಾ.ರಾಮನಾಥಂ ನಾಯ್ಡು, ಮಹಾತ್ಮ ಗಾಂಧಿ ಅಧ್ಯಯನ ಪೀಠ ನಿರ್ದೇಶಕರಾದ ಡಾ.ಆರ್.ಎಚ್.ಪವಿತ್ರಾ, ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಡಾ.ಎನ್.ಆರ್.ಚಂದ್ರೇಗೌಡ, ಪ್ರೊ.ಕೆ.ಎಲ್.ಎನ್.ಮೂರ್ತಿ ಇದ್ದರು.

ಗಾಂಧೀಜಿ ಸಕ್ಕರೆ ಪಾಠ!: ಪ್ರಸನ್ನ ಅವರು ಹೇಳಿದ ‘ಗಾಂಧೀಜಿ ಸಕ್ಕರೆ ಪಾಠ’ದ ಕಥೆ ವಿದ್ಯಾರ್ಥಿಗಳನ್ನು ಸೆಳೆಯಿತು.

‘ಸಾಬರಮತಿ ಆಶ್ರಮಕ್ಕೆ ನೆಹರೂ, ಪಟೇಲ್‌ ಸೇರಿದಂತೆ ಹಲವು ಮುಖಂಡರು, ನೂರಾರು ಮಹಿಳೆಯರು– ಮಕ್ಕಳೂ ಬಂದಿದ್ದರು. ಮಗುವಿನೊಂದಿಗೆ ಬಂದಿದ್ದ ತಾಯಿಯೊಂದಿಗೆ ಗಾಂಧೀಜಿ 10 ನಿಮಿಷ ಮಾತನಾಡಿದ್ದಲ್ಲದೆ, ಮುಂದಿನ ವಾರ ಬರುವಂತೆ ಹೇಳಿದ್ದರು. ಅದು ಅವರ ಆಪ್ತ ಕಾರ್ಯದರ್ಶಿ ಮಹದೇವ ದೇಸಾಯಿ ಅವರಿಗೆ ಹಿಡಿಸಲಿಲ್ಲ. ‘ಹಲವು ನಾಯಕರು ಕಾಯುತ್ತಿದ್ದಾರೆ. ನೀವು ಆ ಮಹಿಳೆ– ಮಗು ಜೊತೆ ಮಾತನಾಡುತ್ತಾ ಸಮಯ ಕಳೆದಿರಾ’ ಎಂದು ದೇಸಾಯಿ ಅಸಮಾಧಾನ ವ್ಯಕ್ತಪಡಿಸಿದ್ದರು’ ಎಂದು ಪ್ರಸನ್ನ ಸ್ಮರಿಸಿದರು.

‘ಆಕೆಯ ಮಗು ಹೆಚ್ಚು ಸಕ್ಕರೆ ತಿನ್ನುತ್ತದಂತೆ. ತಪ್ಪಿಸಲು ಉಪಾಯ ಕೊಡಿ ಎಂದು ಕೇಳಿದ್ದಾಳೆ. ಅದಕ್ಕೆ ನನಗೂ ಸಕ್ಕರೆಯೆಂದೆರೆ ಇಷ್ಟ. ವಾರದ ನಂತರ ಬಂದರೆ ಸಕ್ಕರೆ ಹೇಗೆ ಬಿಡಿಸಬಹುದೆಂದು ಹೇಳುತ್ತೇನೆಂದು ಕಳುಹಿಸಿದ್ದೇನೆ ಎಂದು ಗಾಂಧಿ ಹೇಳಿದಾಗ ದೇಸಾಯಿ ಕಣ್ಣೀರಾಗಿದ್ದರು’ ಎಂದು ಹೇಳಿದರು.

‘ಯಾವುದೇ ಸಲಹೆ ನೀಡಬೇಕಾದರೂ ಸ್ವ ಅನುಭವ ಇರಬೇಕು. ಜೀವನಶೈಲಿಯಾಗಿಸಿಕೊಳ್ಳದೇ ಉತ್ತರ ನೀಡಬಾರದು. ನುಡಿದಂತೆ ನಡೆಯುವುದೇ ಗಾಂಧಿಮಾರ್ಗವಾಗಿದೆ’ ಎಂದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT