ಮೈಸೂರು: ‘ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕವಿ ವಿ.ಕೃ.ಗೋಕಾಕ’ ಎಂದು ಲೇಖಕ ಪ್ರೊ.ಸಿ.ನಾಗಣ್ಣ ಬಣ್ಣಿಸಿದರು.
ನಗರದ ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗ ಹಾಗೂ ಬೆಂಗಳೂರಿನ ವಿನಾಯಕ ಗೋಕಾಕ ವಾಙ್ಮಯ ಟ್ರಸ್ಟ್ ಸಹಯೋಗದೊಂದಿಗೆ ವಿ.ಕೃ.ಗೋಕಾಕ ಜನ್ಮದಿನದ ಪ್ರಯುಕ್ತ ‘ವಿ.ಕೃ.ಗೋಕಾಕ ಮತ್ತು ಕನ್ನಡ ಜಗತ್ತು’ ಕುರಿತ ಉಪನ್ಯಾಸ, ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಧುನಿಕ ಕನ್ನಡ ಸಾಹಿತ್ಯದಲ್ಲಿ ವಿ.ಕೃ.ಗೋಕಾಕ್ ಅಗ್ರಗಣ್ಯರು. ಅವರ ಸಮುದ್ರ ಗೀತೆಗಳು ಪ್ರಸಿದ್ಧವಾದದ್ದು. ಕನ್ನಡ ಜಗತ್ತು ವಿಸ್ತಾರಗೊಳಿಸುವುದರ ಜೊತೆಗೆ, ಕನ್ನಡಿಗರು ಹೆಮ್ಮೆಪಡುವ ರೀತಿಯಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧರಾದವರು. ನವೋದಯದಿಂದ ನವ್ಯದವರೆಗೂ ಹೊಸಗನ್ನಡದಲ್ಲಿ ಸ್ವಚ್ಛಂದದ ಕಾವ್ಯ ರಚಿಸಿದವರು. ಇಂದಿಲ್ಲ ನಾಳೆ ಎಂಬ ಚಂಪೂ ಕಾವ್ಯವಲ್ಲದೆ ಇಂಗ್ಲಿಷ್‌ನಲ್ಲೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಸಮುದ್ರದಾಚೆಯಿಂದ, ಸಮುದ್ರದೀಚೆಯಿಂದ, ಸಮರಸವೇ ಜೀವನ ಮೊದಲಾದ ಕೃತಿ ರಚಿಸಿದ್ದಾರೆ. 12 ವಿಮರ್ಶಾ ಕೃತಿ ಸಾಹಿತ್ಯಲೋಕಕ್ಕೆ ನೀಡಿದ್ದಾರೆ’ ಎಂದರು.
‘ವಿ.ಕೃ.ಗೋಕಾಕ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗಲೇ ಇಂಗ್ಲಿಷ್ ಭಾಷೆಯಲ್ಲಿ ಕವಿತೆ ರಚಿಸುವ ಸಾಮರ್ಥ್ಯ ರೂಢಿಸಿಕೊಂಡಿದ್ದರು. ಬೇಂದ್ರೆಯವರ ಪ್ರಭಾವದಿಂದ ಕನ್ನಡದಲ್ಲಿ ಬರೆಯಲು ಪ್ರಾರಂಭಿಸಿದರು. ಜೊತೆಗೆ ಬೇಂದ್ರೆ ಅವರನ್ನು ಗುರು ಎಂದು ಪರಿಭಾವಿಸಿದ್ದರು. ಅವರನ್ನು ಭೇಟಿಯಾಗದಿದ್ದಲ್ಲಿ ನನ್ನ ‘ಕಾವ್ಯ ಕನ್ನಿಕೆ’ ಇಂಗ್ಲಿಷ್ ಭಾಷೆಯಲ್ಲಿ ಕಮರಿ ಹೋಗುತ್ತಿತ್ತು. ಅವರ ಸಹಕಾರದಿಂದ ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಲು ಸಾಧ್ಯವಾಯಿತು ಎಂದು ಗೋಕಾಕರು ಹೇಳಿಕೊಂಡಿದ್ದಾರೆ’ ಎಂದು ತಿಳಿಸಿದರು.
ನರಹಳ್ಳಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಕನ್ನಡವನ್ನು ಜಾಗತಿಕವಾಗಿ ಮತ್ತು ಜಾಗತಿಕವಾದ ಸಂಗತಿಗಳನ್ನು ಕನ್ನಡಕ್ಕೆ ಸಮರ್ಥವಾಗಿ ತಂದವರಲ್ಲಿ ವಿ.ಕೃ.ಗೋಕಾಕ ಪ್ರಮುಖರು. ನಮ್ಮಲ್ಲಿ ಕುವೆಂಪು ಅವರನ್ನು ಕನ್ನಡದ ವರ್ಡ್ಸ್‌ವರ್ತ್ ಎನ್ನುತ್ತಾರೆ. ಅದು ಹಾಗಲ್ಲ. ವರ್ಡ್ಸ್‌ವರ್ತ್ ಇಂಗ್ಲಿಷ್‌ನ ಕುವೆಂಪು ಎನ್ನುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.
‘ಗೋಕಾಕ ಆಧುನಿಕತೆಯನ್ನು ಕನ್ನಡಕ್ಕೆ ತಂದವರು ಮಾತ್ರವಲ್ಲ, ಅವರು ವೇದವಾಙ್ಮಯಗಳನ್ನು ಕಡೆಗಣಿಸಲಿಲ್ಲ. ಸಂಪ್ರದಾಯ ಮತ್ತು ಆಧುನಿಕತೆ ಬೆರೆಸಿದರು’ ಎಂದು ತಿಳಿಸಿದರು.
ಎಚ್.ಆರ್.ತಿಮ್ಮೇಗೌಡ, ಬಿ.ಆರ್.ಜಯಕುಮಾರಿ, ಅಭಿನವ ರವಿಕುಮಾರ್, ವಿನೋದಮ್ಮ, ಅಕ್ಷೆಭ್ಯ, ನಾಗೇಶ ಎಂ, ಕಿರಣ್‌ಕುಮರ್ ಸಿ.ಎಂ, ಮನೋಜ್‌ಕುಮಾರ್ ಜೆ, ಲತಾ ಎಲ್. ನಾಡಿಗೇರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.