ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: 39 ಗ್ರಾಮ ಪಂಚಾಯಿತಿಗಳಲ್ಲಿ ‘ಗ್ರಾಮ ಡಿಜಿ ವಿಕಸನ’

Last Updated 25 ಆಗಸ್ಟ್ 2022, 15:27 IST
ಅಕ್ಷರ ಗಾತ್ರ

ಮೈಸೂರು: ಶಿಕ್ಷಣ ಪ್ರತಿಷ್ಠಾನವು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆಯ ಸಹಯೋಗದಲ್ಲಿ ಜಾರಿಗೊಳಿಸಿರುವ ‘ಗ್ರಾಮ ಡಿಜಿ ವಿಕಸನ–2022’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

ಯೋಜನೆಗೆ ಜಿಲ್ಲೆಯಲ್ಲಿ ಆಯ್ಕೆಯಾಗಿರುವ 39 ಗ್ರಾಮ ಪಂಚಾಯಿತಿಗಳ ಪಿಡಿಒಗಳು ಹಾಗೂ ಗ್ರಂಥ‍ಪಾಲಕರಿಗೆ ಗುರುವಾರ ತರಬೇತಿ ನೀಡಲಾಯಿತು.

ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್‌ಸಾಬ್‌ ಸಭಾಂಗಣದಲ್ಲಿ ಆಯೋಜಿಸಿದ್ದ ತರಬೇತಿಗೆ ಸಿಇಒ ಬಿ.ಆರ್.ಪೂರ್ಣಿಮಾ ಚಾಲನೆ ನೀಡಿದರು. ಶಿಕ್ಷಣ ಪ್ರತಿಷ್ಠಾನದ ಸಂಯೋಜಕರು ಹಾಗೂ ಪ್ರತಿನಿಧಿಗಳು ಆನ್‌ಲೈನ್‌ನಲ್ಲಿ ಯೋಜನೆ ಅನುಷ್ಠಾನದ ಬಗ್ಗೆ ತಿಳಿಸಿಕೊಟ್ಟರು.

‘ಗ್ರಾಮ ಡಿಜಿ ವಿಕಸನ’ ಕಾರ್ಯಕ್ರಮಕ್ಕೆ ಪೂರಕವಾಗಿ ಒಂದು 32 ಇಂಚಿನ ಆ್ಯಂಡ್ರಾಯ್ಡ್ ಟಿವಿ, 4 ಮೊಬೈಲ್ ಫೋನ್‌ಗಳು, ಕ್ರೋಮ್ ಬುಕ್‌ (ಮಿನಿ ಲ್ಯಾಪ್‌ಟಾಪ್‌), 13 ಪಂಚಾಯಿತಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಶಿಕ್ಷಣ ಪ್ರತಿಷ್ಠಾನದಿಂದ ಕಲ್ಪಿಸಲಾಗಿದೆ. ಆ್ಯಂಡ್ರಾಯ್ಡ್ ಟಿವಿ, ಮಿನಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ ಫೋನ್‌ಗಳಿಗೆ ‘ಶಿಕ್ಷಣ ಪೀಡಿಯಾ’ ಎಂಬ ತಂತ್ರಾಂಶ ಅಳವಡಿಸಲಾಗಿದೆ. ಅದರಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಸ್ತುತ ಶೈಕ್ಷಣಿಕ ಸಾಲಿನ ಪಠ್ಯಕ್ರಮ ಲಭ್ಯವಿರುತ್ತದೆ. ಅದಕ್ಕೆ ಸಂಬಂಧಿಸಿದ ವಿಡಿಯೊ ಪಾಠ, ಪಠ್ಯ, ಪ್ರಶ್ನೋತ್ತರಗಳು ಇರಲಿವೆ’ ಎಂದು ಪ್ರತಿಷ್ಠಾನದ ಜಿಲ್ಲಾ ಸಂಯೋಜಕ ಅರುಣಕಾಂತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಇರುವ ಗ್ರಂಥಾಲಯಗಳಿಗೆ ಡಿಜಿಟಲ್ ಸಾಧನ ನೀಡಲಾಗಿದ್ದು, ಅದನ್ನು ಬಳಸಿಕೊಳ್ಳುವ ಕುರಿತು ತರಬೇತಿ ನೀಡಲಾಗಿದೆ. ತಂತ್ರಜ್ಞಾನ ಕೌಶಲ ಅಭಿವೃದ್ಧಿಗೆ ಐದು ಮಾಡ್ಯೂಲ್‌ಗಳಲ್ಲಿ ತರಬೇತಿ ನೀಡಲಾಯಿತು’ ಎಂದು ವಿವರಿಸಿದರು.

‘ಆ ತಂತ್ರಾಂಶದಲ್ಲಿ ಸದಸ್ಯತ್ವ ನೋಂದಣಿಗೆ ಅವಕಾಶವಿದೆ. 6ರಿಂದ 18 ವರ್ಷದವರಿಗೆ ಸದಸ್ಯತ್ವ ನೋಂದಣಿಯನ್ನು ಉಚಿತವಾಗಿ ಮಾಡಿಕೊಳ್ಳಬಹುದಾಗಿದೆ. ಅದಕ್ಕಿಂತ ಮೇಲಿನವರು ₹ 22 ಪಾವತಿಸಿ ನೋಂದಾಯಿಸಿಕೊಳ್ಳಬೇಕು. 15 ದಿನಗಳಲ್ಲಿ 3 ಪುಸ್ತಕಗಳನ್ನು ಎರವಲು ಪಡೆಯಬಹುದು. ಶಿಕ್ಷಣ ಪೀಡಿಯಾ ತಂತ್ರಾಂಶದಲ್ಲಿರುವ ಸಂಪನ್ಮೂಲವನ್ನು ಮೊಬೈಲ್‌ ಫೋನ್‌ ಅಥವಾ ಲ್ಯಾಪ್‌ಟಾಪ್‌ಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಆಫ್‌ಲೈನ್‌ನಲ್ಲೂ ಓದಿಕೊಳ್ಳಲು, ವೀಕ್ಷಿಸಲು ಅವಕಾಶವಿದೆ’ ಎನ್ನುತ್ತಾರೆ ಅವರು.

ಯಾವ್ಯಾವ ಪಂಚಾಯಿತಿಗಳಲ್ಲಿ ಜಾರಿ?
ಮೈಸೂರು ತಾಲ್ಲೂಕು
: ಹಾರೋಹಳ್ಳಿ (ಜಯಪುರ), ಮಾರ್ಬಳ್ಳಿ, ನಾಗವಾಲ, ದೊಡ್ಡಮಾರಗೌಡನಹಳ್ಳಿ, ವರುಣಾ
ಎಚ್‌.ಡಿ.ಕೋಟೆ: ಅಣ್ಣೂರು, ಅಂತರಸಂತೆ, ಭೀಮನಹಳ್ಳಿ, ಸವ್ವೆ, ಹೈರಿಗೆ, ಹಂಪಾಪುರ, ಎನ್.ಬೆಳತ್ತೂರು
ಸರಗೂರು: ಬಿದರಹಳ್ಳಿ, ಬಿ.ಮಟಕೆರೆ, ಸಾಗರೆ, ತುಂಬಸೋಗೆ, ಹಂಚಿಪುರ
ಹುಣಸೂರು: ಹಳೇಬೀಡು, ಕರ್ಣಕುಪ್ಪೆ, ಉಮ್ಮತ್ತೂರು, ಗೋವಿಂದನಹಳ್ಳಿ
ಪಿರಿಯಾಪಟ್ಟಣ: ದೊಡ್ಡಬ್ಯಾಲಾಳು, ಚಪ್ಪರದಹಳ್ಳಿ, ಇಟ್ನೆ ಹೆಬ್ಬಾಗಿಲು, ಬೆಟ್ಟದತುಂಗ
ಕೆ.ಆರ್.ನಗರ: ಸಾಲಿಗ್ರಾಮ, ಹೆಬ್ಬಾಳು, ಲಾಳದೇವನಹಳ್ಳಿ
ನಂಜನಗೂಡು: ತಾಂಡವಪುರ, ದೇವೀರಮ್ಮನಹಳ್ಳಿ, ಹದಿನಾರು, ಹುಲ್ಲಹಳ್ಳಿ, ಹರದನಹಳ್ಳಿ
ತಿ.ನರಸೀ‍‍ಪುರ: ಮಲಿಯೂರು, ಅಂಕನಹಳ್ಳಿ, ತುರಗನೂರು, ಗರ್ಗೇಶ್ವರಿಪುರ, ರಂಗಸಮುದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT