ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅತಿಥಿ’ಗಳ ವೇತನ ಹೆಚ್ಚಳ: ಸಿಗದ ಸಮ್ಮತಿ!

ಮೈಸೂರು ವಿಶ್ವವಿದ್ಯಾಲಯದ ಪ್ರಸ್ತಾವಕ್ಕೆ ಒಪ್ಪಿಗೆ ಸಾಧ್ಯವಿಲ್ಲವೆಂದ ಆರ್ಥಿಕ ಇಲಾಖೆ
Last Updated 13 ಜನವರಿ 2023, 23:45 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕರು ಹಾಗೂ ಇತರ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ವೇತನ ಪರಿಷ್ಕರಣೆಗೆ ಆರ್ಥಿಕ ಇಲಾಖೆಯು ಅಸ್ತು ಎಂದಿಲ್ಲದಿರುವುದು ಈ ನೌಕರರ ನಿರೀಕ್ಷೆಯ ಮೇಲೆ ಕಾರ್ಮೋಡ ಕವಿದಂತಾಗಿದೆ.

ವೇತನ ಪರಿಷ್ಕರಣೆ ಸಂಬಂಧ ಘಟನೋತ್ತರ ಅನುಮತಿ ನೀಡುವಂತೆ ವಿ.ವಿಯು ಮಂಡಿಸಿತ್ತು. ಆದರೆ, ಪ್ರಸ್ತಾವಿತ ವೇತನ ಪರಿಷ್ಕರಣೆಯು ವಾರ್ಷಿಕ ₹ 4.71 ಕೋಟಿ ಹೊರೆಯಾಗುವುದರಿಂದ ಒಪ್ಪಲು ಸಾಧ್ಯವಿಲ್ಲ ಎಂದು ಹಣಕಾಸು ಸಮಿತಿ ಸಭೆಯಲ್ಲಿ ತಿಳಿಸಲಾಗಿದೆ. ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ವೇತನ ‍ಪರಿಷ್ಕರಣೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿ ನಾಲ್ಕು ದಿನಗಳವರೆಗೆ ಧರಣಿ ನಡೆಸಿದ್ದರು. ಪ್ರಭಾರ ಕುಲಪತಿ ಪ್ರೊ.ಎಚ್‌.ರಾಜಶೇಖರ್‌ ನೀಡಿದ್ದ ಭರವಸೆ ಅನ್ವಯ ಹೋರಾಟ ಹಿಂಪಡೆದಿದ್ದರು. ಆದರೆ, ಈಗ ಹೊರಬಿದ್ದಿರುವ ಆದೇಶವು ಅವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಾರಣಗಳೇನು?:

ಆರ್ಥಿಕ ಇಲಾಖೆಯು ನೀಡಿರುವ ಕಾರಣಗಳು ವಿ.ವಿಯನ್ನು ಪೇಚಿಗೆ ಸಿಲುಕಿಸಿದೆ. ಆರ್ಥಿಕ ಅಶಿಸ್ತನ್ನು ಎತ್ತಿ ತೋರಿಸಿದೆ.

ವಿಶ್ವವಿದ್ಯಾಲಯ ಒದಗಿಸಿದ ಮಾಹಿತಿ ಪ್ರಕಾರ, 2020–21ನೇ ಸಾಲಿನ ಒಟ್ಟು ಆದಾಯ ₹ 301.78 ಕೋಟಿಯಾಗಿದ್ದು, ₹ 325.66 ಕೋಟಿ ವೆಚ್ಚ ಮಾಡಲಾಗಿದೆ (₹ 37.80 ಕೋಟಿ ಸವಕಳಿ ಹೊರತುಪಡಿಸಿ). ಇದರಿಂದ ₹ 23.88 ಕೋಟಿ ವಿತ್ತೀಯ ಕೊರತೆ ಕಂಡುಬಂದಿದೆ. ಅಂತೆಯೇ 2021–22ನೇ ಸಾಲಿನಲ್ಲಿ ಒಟ್ಟು ಆದಾಯ ₹ 278.98 ಕೋಟಿಯಾಗಿದ್ದರೆ, ವೆಚ್ಚ ₹319.15 ಕೋಟಿ(₹ 34.17 ಕೋಟಿ ಸವಕಳಿ ಹೊರತುಪಡಿಸಿ). ವಿತ್ತೀಯ ಕೊರತೆಯ ಪ್ರಮಾಣವು ₹ 40.17 ಕೋಟಿಯಾಗಿದೆ. ಹೀಗಾಗಿ, ಒಪ್ಪಿಗೆ ಕೊಡಲಾಗದು ಎಂದು ತಿಳಿಸಲಾಗಿದೆ.

ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000ರ ತಿದ್ದುಪಡಿ ಅನ್ವಯ ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೊಸ ವಿ.ವಿಗಳನ್ನು ಸ್ಥಾಪಿಸಿದ್ದು ಪ್ರಸ್ತುತ ಮೈಸೂರು ವಿ.ವಿ ವ್ಯಾಪ್ತಿಯು ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗಿದೆ. ಪರಿಣಾಮ, ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದ್ದು, ತನ್ನ ಬದ್ಧ ವೆಚ್ಚಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದೂ ಸೂಚಿಸಲಾಗಿದೆ.

ಅಧಿಕಾರ ಹೊಂದಿಲ್ಲ:

ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಹೊಸ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದಿರುವುದರಿಂದ ಆ ಜಿಲ್ಲೆಗಳ ವ್ಯಾಪ್ತಿಯ ಪಿ.ಜಿ. ಕೇಂದ್ರಗಳ ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ವೇತನ ಪರಿಷ್ಕರಿಸುವ ಅಧಿಕಾರವನ್ನು ಮೈಸೂರು ವಿ.ವಿ. ಹೊಂದಿಲ್ಲ.

900ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಹೆಚ್ಚುವರಿಯಾಗಿ ನೇಮಿಸಿಕೊಂಡಿದ್ದು, ಇದುವರೆಗೆ 4ರಿಂದ ಗರಿಷ್ಠ 12 ಗಂಟೆಗಳ ಬೋಧನಾ ಅವಧಿಯನ್ನು ನಿಗದಿಪಡಿಸಿದೆ ಮತ್ತು ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಇಲ್ಲದವರನ್ನೂ ನೇಮಿಸಿಕೊಳ್ಳಲಾಗಿದೆ. ವಾಸ್ತವವಾಗಿ, ಪ್ರತಿ ವಿಭಾಗದಲ್ಲಿನ ವಿದ್ಯಾರ್ಥಿಗಳ ದಾಖಲಾತಿಯ ಅನ್ವಯ ಲಭ್ಯವಾಗುವ ಬೋಧನಾ ಕಾರ್ಯಭಾರವನ್ನು ನಿರ್ಣಯಿಸಿ ಅದಕ್ಕೆ ಅನುಗುಣವಾಗಿ ಯುಜಿಸಿ ಮಾನದಂಡಗಳ ಪ್ರಕಾರ ನಿಗದಿತ ವಿದ್ಯಾರ್ಹತೆಯ ಅಭ್ಯರ್ಥಿಗಳನ್ನು ಮಾತ್ರವೇ ಅತಿಥಿ ಉಪನ್ಯಾಸಕರನ್ನಾಗಿ ನೇಮಿಸಿಕೊಳ್ಳಬೇಕು. ಆದರೆ, ಈ ಮಾನದಂಡ ಅನುಸರಿಸಿಲ್ಲ ಎಂಬ ಆಕ್ಷೇಪಣೆಯನ್ನೂ ಇಲಾಖೆ ವ್ಯಕ್ತಪಡಿಸಿದೆ. ಮಾನದಂಡ ಅನುಸರಿಸಿ ನೇಮಕಕ್ಕೆ ಕ್ರಮ ವಹಿಸುವಂತೆ ಆದೇಶಿಸಿದೆ.

ವಿ.ವಿಯು ಅತಿಥಿ ಉಪನ್ಯಾಸಕರು, ತಾತ್ಕಾಲಿಕ ಬೋಧಕೇತರ ಸಿಬ್ಬಂದಿಯ ವೇತನಕ್ಕಾಗಿ ವಾರ್ಷಿಕ ₹ 43.47 ಕೋಟಿ ವ್ಯಯಿಸುತ್ತಿದೆ. ಅಲ್ಲದೇ, 2020ರ ನವೆಂಬರ್‌ನಲ್ಲಿ ಪರಿಷ್ಕರಿಸಲಾಗಿದ್ದು, ಎರಡೇ ವರ್ಷಗಳ ಅಂತರದಲ್ಲಿ ಮತ್ತೆ ಪರಿಷ್ಕರಿಸಲು ಸಮರ್ಥನೆ ಇರುವುದಿಲ್ಲ. ಪರಿಷ್ಕರಿಸುವಾಗ ವೇತನವನ್ನು ದುಪ್ಪಟ್ಟು ಹೆಚ್ಚಿಸಲಾಗಿದೆ. 12 ಗಂಟೆಗಳ ಕಾರ್ಯಭಾರ ಹೊಂದಿರುವ ಯುಜಿಸಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿದ ಅತಿಥಿ ಉಪನ್ಯಾಸಕರ ವೇತನವನ್ನು ₹28ಸಾವಿರದಿಂದ ₹37ಸಾವಿರಕ್ಕೆ, ಯುಜಿಸಿ ವಿದ್ಯಾರ್ಹತೆ ಹೊಂದಿಲ್ಲದವರಿಗೆ ₹24ಸಾವಿರದಿಂದ ₹ 26,400ಕ್ಕೆ ಹಾಗೂ ಕೆಲವು ಉಪನ್ಯಾಸಕರಿಗೆ ಮಾಸಿಕ ಗರಿಷ್ಠ ₹60ಸಾವಿರಕ್ಕೆ ವೇತನ ಹೆಚ್ಚಿಸಲಾಗಿದೆ. ಇದು ಯುಜಿಸಿಯು ಪೂರ್ಣ ಕಾರ್ಯಭಾರಕ್ಕೆ ನಿಗದಿ‍ಪಡಿಸಿದ ₹50ಸಾವಿರಕ್ಕಿತಲೂ ಹೆಚ್ಚಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಭಾವನೆಗಿಂತಲೂ ಹೆಚ್ಚಾಗಿದೆ ಎಂದು ಇಲಾಖೆಯು ಹೇಳಿದೆ.

ಮಂಜೂರಾದ ಹುದ್ದೆಗಳಿಗೂ ಮೀರಿ ತಾತ್ಕಾಲಿಕ ಸಿಬ್ಬಂದಿ ನೇಮಿಸಿಕೊಂಡಿದ್ದು, ಅದನ್ನೂ ಮರುಪರಿಶೀಲಿಸುವಂತೆಯೂ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ವಿ.ವಿಗೆ ಸೂಚಿಸಿದ್ದಾರೆ.

‘ವೇತನ ಪರಿಷ್ಕರಣೆಯು ನಮ್ಮ ನ್ಯಾಯಯುತ ಬೇಡಿಕೆಯಾಗಿದ್ದು, ಹಕ್ಕು ಕೂಡ ಹೌದು. ಹೀಗಾಗಿ, ಬಳಗದೊಂದಿಗೆ ಶೀಘ್ರದಲ್ಲೇ ಚರ್ಚಿಸಿ ಮುಂದಿನ ಹೋರಾಟ ರೂಪಿಸಲಾಗುವುದು’ ಎಂದು ಅತಿಥಿ ಉಪನ್ಯಾಸಕರ ಬಳಗದ ಡಾ.ಚಂದ್ರಶೇಖರ ಡಿ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಚರ್ಚಿಸಿ ನಿರ್ಧಾರ

ಪ್ರಸ್ತಾವ ಒಪ್ಪಲಾಗದು ಎಂದು ಆರ್ಥಿಕ ಇಲಾಖೆ ಕಟ್ಟುನಿಟ್ಟಾಗಿ ಹೇಳಿದೆ. ಹೀಗಾಗಿ, ಮುಂದೇನು ಮಾಡಬೇಕು ಎನ್ನುವುದನ್ನು ಸಮಾಲೋಚಿಸಿ ಬಳಿಕ ಸರ್ಕಾರದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.

–ಪ್ರೊ.ಎಚ್‌.ರಾಜಶೇಖರ್, ಪ್ರಭಾರ ಕುಲಪತಿ

ಶೀಘ್ರದಲ್ಲೇ ಸಭೆ

ಆಂತರಿಕ ಸಂಪನ್ಮೂಲದಿಂದ ನಮಗೆ ವೇತನ ಕೊಡಲಾಗುತ್ತದೆ. ಅದನ್ನು ಅಧಿಕಾರಿಗಳು ಸರಿಯಾಗಿ ಆರ್ಥಿಕ ಇಲಾಖೆಯ ಗಮನಕ್ಕೆ ತಂದಿಲ್ಲ. ಇದರಿಂದ ನಮಗೆ ಹಿನ್ನಡೆಯಾಗಿದೆ.

–ಡಾ.ಚಂದ್ರಶೇಖರ ಡಿ., ಅತಿಥಿ ಉಪನ್ಯಾಸಕರ ಬಳಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT